ನವದೆಹಲಿ:
ಖ್ಯಾತ ಆಹಾರ ವಿತರಣಾ ಆ್ಯಪ್ ಆಧಾರಿತ ಸಂಸ್ಥೆ ಸ್ವಿಗ್ಗಿ ಇದೀಗ ಮತ್ತೊಂದು ವಿವಾದಕ್ಕೆ ಸಿಲುಕಿದ್ದು, ಪನ್ನೀರ್ ಟಿಕಾಗೆ ಕೆಂಪು ನಾಮ ಇಟ್ಟು ತಾನು ಮಾಡಿದ್ದ ಪೋಸ್ಟ್ ವಿವಾದವಾದ ಹಿನ್ನಲೆಯಲ್ಲಿ ಡಿಲೀಟ್ ಮಾಡಿದೆ.
ನಿನ್ನೆ ಮಧ್ಯಾಹ್ನ ಸ್ವಿಗ್ಗಿ ತನ್ನ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಿಂದೂ ಧಾರ್ಮಿಕ ಹಣೆಯ ಗುರುತು ಹೊಂದಿರುವ ಪನೀರ್ ಟಿಕಾವನ್ನು ಪೋಸ್ಟ್ ಮಾಡಿ “ಸ್ಕ್ರೂ ಇಟ್, ಪನೀರ್ ಟಿಕಾ” ಎಂದು ಬರೆಯಲಾಗಿತ್ತು.
ಈ ಪೋಸ್ಟ್ ವೈರಲ್ ಆಗುತ್ತಲೇ ಇದಕ್ಕೆ ಪ್ರತಿಕ್ರಿಯಿಸಿದ್ದ ನೆಟ್ಟಿಗರು ”Sickular” Swiggy.. ಹಿಂದೂ ಸಮುದಾಯದ ಭಾವನೆಗಳನ್ನು ಮತ್ತು ಅವರ ಸಂಪ್ರದಾಯಗಳನ್ನು ಅಪಹಾಸ್ಯ ಮಾಡುತ್ತಿದೆ ಮತ್ತು ಹಿಂದೂಫೋಬಿಕ್ ಸಾಮಾಜಿಕ ಮಾಧ್ಯಮ ವಿಷಯವನ್ನು ಹಂಚಿಕೊಳ್ಳುತ್ತಿದೆ ಎಂದು ಕಿಡಿಕಾರಿದ್ದರು.
ಮತ್ತೆ ಕೆಲವು ನೆಟ್ಟಿಗರು ಸ್ವಿಗ್ಗಿ ಪೋಸ್ಟ್ ಗೆ ಇದು ಹಿಂದೂ ಸಂಪ್ರದಾಯದ ಅಗೌರವ ಮತ್ತು ಅಪಹಾಸ್ಯದ ಕಾರ್ಯವಾಗಿದೆ. ಸ್ವಿಗ್ಗಿ ಹಿಂದೂಫೋಬಿಕ್ ಸಾಮಾಜಿಕ ಮಾಧ್ಯಮ ವಿಷಯವನ್ನು ಹಂಚಿಕೊಳ್ಳುತ್ತಿದ್ದಾರೆ. ಹಿಂದೂಗಳ ಭಾವನೆಗಳನ್ನು ನೋಯಿಸಿದಕ್ಕಾಗಿ ಕೂಡಲೇ ಕ್ಷಮೆಯಾಚಿಸಬೇಕು ಎಂದು ಕೆಲವರು ಆಗ್ರಹಿಸಿದ್ದಾರೆ.
ಅನೇಕ ಬಳಕೆದಾರರು ಸ್ವಿಗ್ಗಿ ಮತ್ತು ಹಿಂದೂ ಧರ್ಮ ಮತ್ತು ಸಂಪ್ರದಾಯವನ್ನು ಅಗೌರವಿಸುವ, ಅಪಹಾಸ್ಯ ಮಾಡುವ ಮತ್ತು ಹಿಂದೂಫೋಬಿಕ್ ವಿಷಯವನ್ನು ಹಂಚಿಕೊಳ್ಳುವ ಸ್ವಿಗ್ಗಿಯಂತಹ ಎಲ್ಲಾ ಅಪ್ಲಿಕೇಶನ್‌ಗಳನ್ನು ಬಹಿಷ್ಕರಿಸಲು ಕರೆಗಳನ್ನು ನೀಡಿದ್ದಾರೆ.
ಇತ್ತ ತನ್ನ ಪೋಸ್ಟ್ ಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಲೇ ಎಚ್ಚೆತ್ತುಕೊಂಡ ಸ್ವಿಗ್ಗಿ ಪೋಸ್ಟ್ ಡಿಲೀಟ್ ಮಾಡಿದೆಯಾದರೂ ಅದಾಗಲೇ ಹಲವು ಬಳಕೆದಾರರು ಅದರ ಸ್ಕ್ರೀನ್ ಶಾಟ್ ತೆಗೆದು ಸ್ವಿಗ್ಗಿ ಕ್ರಮವನ್ನು ಟೀಕಿಸುತ್ತಿದ್ದಾರೆ. ಪೋಸ್ಟ್ ಡಿಲೀಟ್ ಮಾಡಿದರೆ ಸಾಲದು ಕೂಡಲೇ ಕ್ಷಮೆ ಯಾಚಿಸಬೇಕು ಎಂದು ಕಿಡಿಕಾರಿದ್ದಾರೆ.