ದೂರವಾದ ಪತ್ನಿಯನ್ನು ಒಲಿಸಿಕೊಳ್ಳಲು 5 ವರ್ಷದ ಮಗುವನ್ನು ಕೊಂದ ಪಾಪಿ

ಜೈಪುರ: 

     ಮೂಢನಂಬಿಕೆಗೆ ದೇಶದಲ್ಲಿ ಮತ್ತೊಂದು ಮುಗ್ಧ ಮಗು ಬಲಿಯಾಗಿದೆ. ಮಂತ್ರವಾದಿಯೊಬ್ಬನ ಮಾತು ಕೇಳಿ ತಾಯಿ ಮನೆಗೆ ತೆರಳಿದ ಪತ್ನಿಯ ಮೇಲೆ ನಿಯಂತ್ರಣ ಸಾಧಿಸುವ ಉದ್ದೇಶದಿಂದ ಪಾಪಿಯೊಬ್ಬ ತನ್ನ 5 ವರ್ಷದ ಸೋದರಳಿಯನ್ನು ಬಲಿ ಕೊಟ್ಟಿರುವ ಈ ಅಮಾನುಷ ಘಟನೆ ರಾಜಸ್ಥಾನದಲ್ಲಿ ನಡೆದಿದ್ದು, ಇಡೀ ದೇಶವೇ ಬೆಚ್ಚಿ ಬಿದ್ದಿದೆ . ಆರೋಪಿಯನ್ನು ಸರಯೈ ಕಾಲನ್‌ ಗ್ರಾಮದ ಮನೋಜ್‌ ಪ್ರಜಾಪತ್‌ ಎಂದು ಗುರುತಿಸಲಾಗಿದೆ. ಈತನ ಪತ್ನಿ ಕೆಲವು ದಿನಗಳ ಹಿಂದೆ ಕಿರುಕುಳ ತಾಳಲಾರದೆ ತವರು ಮನೆಗೆ ಹಿಂದಿರುಗಿದ್ದಳು. ತನ್ನಿಂದ ದೂರವಾದ ಪತ್ನಿಯನ್ನು ಮರಳಿ ಕರೆತರಲು ಈತ ಈ ಕೃತ್ಯ ಎಸಗಿದ್ದಾನೆ ಎಂದು ಮೂಲಗಳು ತಿಳಿಸಿವೆ.

   38 ವರ್ಷದ ಮಂತ್ರವಾದಿ ಸುನೀಲ್‌ ಎಂಬಾತನ ಮಾತನ್ನು ನಂಬಿ ಮನೋಜ್‌ ಈ ಕೃತ್ಯ ಎಸಗಿದ್ದಾನೆ. ಸೋದರಳಿಯನ್ನು ಕೊಂದು ಆತನ ರಕ್ತ ಮತ್ತು 12,000 ರೂ. ತಂದರೆ ದೂರವಾದ ಪತ್ನಿಯನ್ನು ಮರಳಿ ಕರೆತರುವ ಆಚರಣೆ ನಡೆಸುವುದಾಗಿ ಸುನೀಲ್‌ ಹೇಳಿದ್ದ ಎನ್ನಲಾಗಿದೆ. 

   ರಾಜಸ್ಥಾನದ ಖೈರ್ತಾಲ್-ತಿಜಾರಾ ಜಿಲ್ಲೆಯ ಮುಂಡಾವರ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ಮಹಾವೀರ್ ಸಿಂಗ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ʼʼಮಂತ್ರವಾದಿ ಸುನೀಲ್ ಹತಾಶ ಮನೋಜ್‌ ಪ್ರಜಾಪತ್‌ಗೆ ದೂರವಾದ ಪತ್ನಿಯನ್ನು ಮರಳಿ ತರಲು ಕಾಳಿದೇವಿಯು ಬಲಿದಾನವನ್ನು ಬೇಡಿಕೊಂಡಿದ್ದಾಳೆ ಎಂದು ಹೇಳಿದ್ದಾನೆ. ಇದಕ್ಕಾಗಿ ನಿನ್ನ ಸೋದರಳಿಯನನ್ನು ತ್ಯಾಗ ಮಾಡು ಎಂದು ಸಲಹೆ ನೀಡಿದ್ದಾನೆʼʼ ಎಂಬುದಾಗಿ ಮಹಾವೀರ್ ಸಿಂಗ್ ಹೇಳಿರುವುದಾಗಿ ʼದಿ ಇಂಡಿಯನ್ ಎಕ್ಸ್‌ಪ್ರೆಸ್ʼ ವರದಿ ಮಾಡಿದೆ.

   ನಂತರ ಪ್ರಜಾಪತ್ ತನ್ನ ಪತ್ನಿಯ ಸಹೋದರಿಯ ಐದು ವರ್ಷದ ಮಗ ಲೋಕೇಶ್‌ನನ್ನು ಶನಿವಾರ (ಜು. 19) ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಆಟವಾಡುತ್ತಿದ್ದ ಮಗು ನಾಪತ್ತೆಯಾದ ಹಿನ್ನೆಲೆಯಲ್ಲಿ ಮನೆಯವರು ಪೊಲೀಸರಿಗೆ ದೂರು ನೀಡಿದ್ದರು. ವ್ಯಾಪಕ ಶೋಧ ಕಾಯ ಬಳಿಕ ಮಗುವಿನ ಮೃತದೇಹ ಪಾಳುಬಿದ್ದ ಮನೆಯ ಬಳಿ ಪತ್ತೆಯಾಗಿತ್ತು. 

   ಲೋಕೇಶ್ ಮೃತದೇಹವನ್ನು ಪಾಳುಬಿದ್ದ ಮನೆಯೊಳಗಿನ ಹುಲ್ಲಿನ ಬಣವೆಯಲ್ಲಿ ಅಡಗಿಸಿಡಲಾಗಿತ್ತು. ಮನೋಜ್ ಚಾಕೋಲೇಟ್‌ ನೀಡುವ ಆಮಿಷ ಒಡ್ಡಿ ಲೋಕೇಶ್‌ನನ್ನು ಶಿಥಿಲಗೊಂಡ ಕಟ್ಟಡಕ್ಕೆ ಕರೆದೊಯ್ದಿದ್ದಾನೆ ಎನ್ನಲಾಗಿದೆ. ಸುನೀಲ್‌ನ ಬೇಡಿಕೆಯಂತೆ ಪ್ರಜಾಪತ್ ಮಗುವಿನ ರಕ್ತವನ್ನು ಇಂಜೆಕ್ಷನ್ ಮೂಲಕ ಹೊರತೆಗೆದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

   ಆರಂಭದಲ್ಲಿ ಮನೋಜ್ ಆತಂಕಗೊಂಡಂತೆ ನಟಿಸುವ ಮೂಲಕ ಪೊಲೀಸರನ್ನು ದಾರಿ ತಪ್ಪಿಸಲು ಪ್ರಯತ್ನಿಸಿದ್ದ ಎನ್ನಲಾಗಿದೆ. ಆದಾಗ್ಯೂ ಪ್ರಜಾಪತ್ ಮಗುವಿನೊಂದಿಗೆ ಕೊನೆಯದಾಗಿ ಕಾಣಿಸಿಕೊಂಡ ವ್ಯಕ್ತಿಯಾಗಿರುವುದರಿಂದ ಆತನ ಮೇಲೆ ಅನುಮಾನ ಮೂಡಿತ್ತು. ವಿಚಾರಣೆಯ ನಂತರ, ಪ್ರಜಾಪತ್ ತನ್ನ ಕೃತ್ಯ ಮತ್ತು ಭೀಕರ ಕೊಲೆಯ ಹಿಂದಿನ ಉದ್ದೇಶದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ ತಪ್ಪೊಪ್ಪಿಕೊಂಡಿದ್ದಾನೆ ʼದಿ ಇಂಡಿಯನ್ ಎಕ್ಸ್‌ಪ್ರೆಸ್‌ʼ ವರದಿ ಮಾಡಿದೆ. ಸದ್ಯ ಆತನನ್ನು ಮತ್ತು ಕೊಲೆಗೆ ಪ್ರಚೋದನೆ ನೀಡಿದ ಸುನೀಲ್‌ನನ್ನು ಬಂಧಿಲಾಗಿದೆ.

Recent Articles

spot_img

Related Stories

Share via
Copy link