ಬೆಂಗಳೂರು:
ಹೈಕೋರ್ಟ್ ತೀರ್ಪಿನ ಬಳಿಕ ಸಿದ್ದರಾಮಯ್ಯ ವೀಕ್ ಆಗಿಲ್ಲ, ಕಲ್ಲುಬಂಡೆಯಂತೆ ಗಟ್ಟಿಯಾಗಿದ್ದು, ರಾಜೀನಾಮೆ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಬುಧವಾರ ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವುದಿಲ್ಲ. ಪಕ್ಷದಲ್ಲಿ ಅಂತಹ ಮಾತುಕತೆಯಾಗಲೀ, ಒತ್ತಡವಾಗಲೀ ಇಲ್ಲ. ಪಕ್ಷದ ಹೈಕಮಾಂಡ್ ಕೂಡ ಸಿಎಂಗೆ ಬೆಂಬಲ ನೀಡುತ್ತಿದೆ ಎಂದು ಸ್ಪಷ್ಟಪಡಿಸಿದರು,
ಕೆಸಿ ವೇಣುಗೋಪಾಲ್ ಮತ್ತು ಸುರ್ಜೇವಾಲಾ ಕೂಡ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಅವರೆಲ್ಲ ಸಿಎಂ ಜೊತೆಗಿದ್ದಾರೆ ಮುಡಾ ಹಗರಣದಲ್ಲಿ ಸಿಎಂ ಪಾತ್ರವಿಲ್ಲ. ಕಾನೂನು ಹೋರಾಟಕ್ಕೆ ಅವಕಾಶವಿರುವುದರಿಂದ ರಾಜೀನಾಮೆ ನೀಡುವ ಅಗತ್ಯವಿಲ್ಲ. ಸಿದ್ದರಾಮಯ್ಯ ಅವರು ಯಾವುದೇ ಕಡತ ಅಥವಾ ದಾಖಲೆಗಳಿಗೆ ಸಹಿ ಹಾಕಿಲ್ಲ, ಯಾವುದೇ ಅಧಿಕಾರವನ್ನೂ ದುರುಪಯೋಗಪಡಿಸಿಕೊಂಡಿಲ್ಲ. ಇದನ್ನು ಆಧರಿಸಿಯೇ ಅವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ನ್ಯಾಯಾಲಯದ ಆದೇಶ ನಮ್ಮ ಪರವಾಗಿ ಬಂದಿಲ್ಲ. ನಾವು ಆದೇಶವನ್ನು ಗೌರವಿಸುತ್ತೇವೆ. ಆದರೆ, ನಮಗೆ ನ್ಯಾಯ ಸಿಕ್ಕಿಲ್ಲ ಎಂಬುದು ನಮ್ಮ ಭಾವನೆ. ನಮ್ಮ ಕಾನೂನು ಹೋರಾಟ ಮುಂದುವರೆಯಲಿದೆ ಸಿಎಂ ಕೂಡ ಹೇಳಿದ್ದಾರೆ ಎಂದು ತಿಳಿಸಿದರು.
ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್ ವಿಭಾಗೀಯ ಪೀಠ ಮೊರೆ ಹೋಗುವ ಕುರಿತು ಮುಂದಿನ ದಿನಗಳಲ್ಲಿ ನಿರ್ಧರಿಸಲಾಗುತ್ತದೆ. ಸಿಎಂಗೆ 40 ರಿಂದ 45 ವರ್ಷ ರಾಜಕೀಯ ಜೀವನದಲ್ಲಿ ಯಾವುದೇ ಆಪಾದನೆ ಇರಲಿಲ್ಲ. ಇದು ರಾಜಕೀಯ ಪ್ರೇರಿತ ಎನ್ನುವ ನೋವಾಗಿದೆ. ರಾಜ್ಯಪಾಲರು ಕ್ಯಾಬಿನೆಟ್ ನಿರ್ಣಯ ಪಾಲಿಸಬೇಕು ಎನ್ನುವ ಮಾತಿದೆ. ವಿವೇಚನೆ ಬಳಸಬಹುದು ಅಂತಲೂ ಇದೆ. ಅದಕ್ಕೆ ಸಮರ್ಥನೆ ಕೂಡ ಕೊಡಬೇಕು. ತೀರ್ಪಿನಲ್ಲಿ ರಾಜ್ಯಪಾಲರ ನಿರ್ಧಾರಕ್ಕೆ ಸಮರ್ಥನೆ ಕಾಣಲಿಲ್ಲ. ಜಡ್ಜ್ಮೆಂಟ್‌ನಲ್ಲಿ ಸಮರ್ಥನೆ ಇದೆ ಎಂದಿದ್ದಾರೆ. ಕೋರ್ಟ್ ತೀರ್ಪು ನಮಗೆ ಸಮಾಧಾನ ತಂದಿಲ್ಲ ಎಂದರು.
ರಾಜ್ಯಪಾಲರಿಗೆ ಬಲ ಬಂದಿದೆ ಎನ್ನಬಹುದು. ಆದರೆ, ಇದು ಎಲ್ಲರಿಗೂ ಅನ್ವಯವಾಗಬೇಕಲ್ಲ. ಮಾಜಿ ಸಿಎಂ ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ ಎಲ್ಲರ ವಿಚಾರದಲ್ಲಿಯೂ ಇರಬೇಕಲ್ವಾ. ಆ ಬಲ ಅಲ್ಲಿಯೂ ಉಪಯೋಗಿಸಬೇಕಲ್ಲ ಎಂದು ಪ್ರಶ್ನಿಸಿದರು.ಸಿಎಂ ರಾಜೀನಾಮೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ ವಿಚಾರವಾಗಿ ಮಾತನಾಡಿ, ಬಿಜೆಪಿ ಉದ್ದೇಶವೇ ಸಿಎಂ ರಾಜೀನಾಮೆ ಕೊಡಿಸಬೇಕು ಅನ್ನೋದು. ಹಾಗಾಗಿ ಅವರ ಹೋರಾಟ ಆಶ್ಚರ್ಯ ಏನಿಲ್ಲ. ರಾಜೀನಾಮೆ ಕೊಡಬೇಡಿ ಎಂದು ನಾವು ಈಗಾಗಲೇ ಸಿಎಂಗೆ ಹೇಳಿದ್ದೇವೆ ಎಂದರು.