ಬೆಂಗಳೂರು:
ಮೈತ್ರಿ ಎಲ್ಲ ಕಾಲದಲ್ಲೂ ಒಂದೇ ರೀತಿ ಇರಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದರು .ಬೆಂಗಳೂರಿನಲ್ಲಿ ದೆಹಲಿ ಚುನಾವಣೆ ಫಲಿತಾಂಶ ವಿಚಾರವಾಗಿ ಮಾತನಾಡಿ, ಇನ್ನೂ ಮತ ಎಣಿಕೆ ಪೂರ್ಣವಾಗಿಲ್ಲ. ಸಂಪೂರ್ಣ ಫಲಿತಾಂಶ ಬರಲಿ. ಯಾವ ಕಾರಣಕ್ಕೆ ಹಿನ್ನಡೆಯಾಗಿದೆ ಎಂದು ಚರ್ಚೆ ಮಾಡೋಣ ಎಂದರು.
ಆಯಾ ರಾಜ್ಯದ ಹಿನ್ನಡೆ ಪರಿಣಾಮ ಬೀರಲ್ಲ. ಪ್ರತಿ ಚುನಾವಣೆ ವಿಭಿನ್ನವಾಗಿ ಇರುತ್ತದೆ. ಲೋಕಸಭಾ ಚುನಾವಣೆ ರಾಷ್ಟ್ರೀಯ ವಿಷಯಗಳ ಮೇಲೆ ಚುನಾವಣೆ ಆಗುತ್ತದೆ. ರಾಜ್ಯದ ಚುನಾವಣೆ ಸ್ಥಳೀಯ ವಿಷಯಗಳ ಮೇಲೆ ಆಗುತ್ತದೆ. ಎರಡನ್ನು ಒಂದೇ ರೀತಿಯಲ್ಲಿ ನೋಡೋಣ ಎಂದು ನುಡಿದರು.
ಯಾವ ಕಾರಣಕ್ಕೆ ಈ ರೀತಿ ಫಲಿತಾಂಶ ಬಂದಿದೆ ಎಂಬುದನ್ನ ಎಐಸಿಸಿ ಚರ್ಚೆ ಮಾಡುತ್ತದೆ. ಪ್ರತಿಯೊಂದು ಚುನಾವಣೆ ಕೂಡ ವಿಭಿನ್ನವಾಗಿರುತ್ತದೆ. ಮೈತ್ರಿ ಮಾಡುವಾಗ ಒಂದೊಂದು ಒಂದು ತರಹ ಇರುತ್ತದೆ. ಲೋಕಸಭೆ ಚುನಾವಣೆಯು ರಾಷ್ಟ್ರೀಯ ವಿಷಯಗಳ ಮೇಲೆ ಇರುತ್ತದೆ. ಈ ಚುನಾವಣೆಯಲ್ಲಿ ಇದ್ದ ವಿಷಯ ಮುಂದೆ ಐದು ವರ್ಷಕ್ಕೆ ಇರಲ್ಲ. ಸಂಪೂರ್ಣ ಫಲಿತಾಂಶ ಬರಲಿ ಎಂದು ಹೇಳಿದರು.
ರಾಜ್ಯಪಾಲರಿಂದ ಸುಗ್ರೀವಾಜ್ಞೆ ವಾಪಸ್ ವಿಚಾರವಾಗಿ ಪ್ರತಿಕ್ರಿಯಿಸಿ, ರಾಜ್ಯಪಾಲರು ಸುಗ್ರೀವಾಜ್ಞೆ ವಾಪಸ್ ಮಾಡಿದ್ದಾರೆ. ಸರ್ಕಾರ ಉತ್ತರ ಕೊಡುವ ಕೆಲಸ ಮಾಡುತ್ತದೆ. ತಪ್ಪು ಮಾಡಿದವರಿಗೆ ದಂಡ ಹಾಕುತ್ತಾರೆ. ಯಾವ ದೃಷ್ಟಿಕೋನದಲ್ಲಿ ವಾಪಸ್ ಕಳಿಸಿದ್ದಾರೆ ಗೊತ್ತಿಲ್ಲ. ಅವರು ಅಧಿವೇಶನದಲ್ಲಿ ಚರ್ಚೆ ಮಾಡಿ ತೀರ್ಮಾನ ಮಾಡಿ ಅಂದಿದ್ದಾರೆ. ಅವರು ಇದರ ಬಗ್ಗೆ ಸ್ಪಷ್ಟನೆ ಕೇಳಿದ್ದಾರೆ ಅಷ್ಟೆ. ಅವರು ಸಂಪೂರ್ಣ ವಾಪಸ್ ಕಳುಹಿಸಿದ್ದರೆ ನಮ್ಮ ಉತ್ತರ ಬೇರೆ ಇರುತ್ತಿತ್ತು. ರಾಜ್ಯಪಾಲರು ಸ್ಪಷ್ಟನೆ ಕೇಳಬಾರದು ಅಂತ ಏನು ಇಲ್ಲ. ಬೇರೆ ರಾಜ್ಯದಲ್ಲೂ ಹೀಗೆ ಆಗುತ್ತಿರುತ್ತದೆ ಎಂದು ಹೇಳಿದರು.
ಅವರ ಆದೇಶವನ್ನ ಸೂಪರ್ ಸೀಡ್ ಮಾಡಿ ನಾವು ಸುಗ್ರೀವಾಜ್ಞೆ ಆದೇಶ ಹೊರಡಿಸಲು ಆಗಲ್ಲ. ಅಂಕಿತಕ್ಕೆ ರಾಜ್ಯಪಾಲರಿಗೆ ಕಳುಹಿಸಲೇಬೇಕಲ್ಲವೆ. ವಿಧಾನಸಭೆಯಲ್ಲೂ ಮಸೂದೆ ಮಂಡಿಸುತ್ತೇವೆ. ಅದಕ್ಕೆ ರಾಜ್ಯಪಾಲರನ್ನ ಕೇಳಲ್ಲ. ಮಸೂದೆ ಅಂಗೀಕಾರ ಆದ್ಮೇಲೆ ಕಳುಹಿಸುತ್ತೇವೆ ಎಂದು ಪ್ರತಿಕ್ರಿಯಿಸಿದರು.
