ಬೆಂಗಳೂರು:
ಆಡಳಿತರೂಢ ಕಾಂಗ್ರೆಸ್ ನಲ್ಲಿ ಡಿನ್ನರ್ ಪೊಲಿಟಿಕ್ಸ್ ಜೋರಾಗಿದ್ದು, ಇತ್ತೀಚೆಗೆ ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸದಲ್ಲಿ ನಡೆದಿದ್ದ ಡಿನ್ನರ್ ಮೀಟಿಂಗ್ ಬಗ್ಗೆ ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿತ್ತು. ಇದರ ಬೆನ್ನಲ್ಲೇ ಗೃಹ ಸಚಿವ ಜಿ ಪರಮೇಶ್ವರ ಅವರು ಜನವರಿ 8 ರಂದು ಕರೆದಿದ್ದ ಡಿನ್ನರ್ ಸಭೆಗೆ ಹೈಕಮಾಂಡ್ ಬ್ರೇಕ್ ಹಾಕಿದೆ.
ಎಸ್‌ಸಿ/ಎಸ್‌ಟಿ ಸಮುದಾಯದ ಕಾಂಗ್ರೆಸ್ ಮುಖಂಡರು, ಸಚಿವರು ಮತ್ತು ಶಾಸಕರ ಡಿನ್ನರ್ ಸಭೆಯನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿಯವರ ಸೂಚನೆಯ ಮೇರೆಗೆ ಮುಂದೂಡಲಾಗಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ ಅವರು ಮಂಗಳವಾರ ತಿಳಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರ ಸೂಚನೆ ಮೇರೆಗೆ ಸಭೆಯನ್ನು ಮುಂದೂಡಲಾಗಿದ್ದು, ಸಭೆಯ ಮುಂದಿನ ದಿನಾಂಕವನ್ನು ನಂತರ ತಿಳಿಸಲಾಗುವುದು ಎಂದು ಪರಮೇಶ್ವರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ವರ್ಷದ ಮಾರ್ಚ್ ನಂತರ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಊಹಾಪೋಹಗಳ ನಡುವೆ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಸಚಿವರ, ಶಾಸಕರ ಡಿನ್ನರ್ ಮೀಟಿಂಗ್ ಸಂಚಲನ ಮೂಡಿಸಿತ್ತು. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ವಿದೇಶ ಪ್ರವಾಸದಲ್ಲಿರುವಾಗಲೇ ಇತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರದಿಂತೆ ಇತರೆ ಸಚಿವರು ಡಿನ್ನರ್ ಸಭೆ ಮಾಡಿದ್ದು, ಡಿಕೆಶಿ ಅಸಮಾಧಾನಕ್ಕೆ ಕಾರಣವಾಗಿದೆ.
ಆಯ್ದ ದಲಿತ ಮತ್ತು ಎಸ್‌ಟಿ ಕ್ಯಾಬಿನೆಟ್ ಸಹೋದ್ಯೋಗಿಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಔತಣಕೂಟದ ನಂತರ ಜನವರಿ 2 ರಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸದಲ್ಲಿ ಔತಣಕೂಟ ಏರ್ಪಡಿಸಲಾಗಿತ್ತು. ಇದರ ನಂತರ ನಾಳೆ ಪರಮೇಶ್ವರ ನೇತೃತ್ವದಲ್ಲಿ ನಿಗದಿಯಾಗಿದ್ದ ಸಭೆಯನ್ನು ಮುಂದೂಡಲಾಗಿದೆ.
ಪಕ್ಷದ ಮೂಲಗಳ ಪ್ರಕಾರ, ಉಪಮುಖ್ಯಮಂತ್ರಿ ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ದೆಹಲಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ(ಸಂಘಟನೆ) ಕೆ ಸಿ ವೇಣುಗೋಪಾಲ್ ಅವರನ್ನು ಭೇಟಿ ಮಾಡಿ, ರಾಜ್ಯದಲ್ಲಿನ ಬೆಳವಣಿಗೆಗಳ ಬಗ್ಗೆ ಚರ್ಚಿಸಿದ್ದಾರೆ.
ವಿದೇಶದಿಂದ ವಾಪಸ್ ಬಂದ ಬಳಿಕ ಡಿಕೆ ಶಿವಕುಮಾರ್ ದೆಹಲಿಯಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಅಸಮಾಧಾನ ಹೊರಹಾಕಿದ್ದಾರೆ ಎಂದು ತಿಳಿದುಬಂದಿದೆ. ಇದರ ಬೆನ್ನಲ್ಲೇ ಎಚ್ಚೆತ್ತ ಹೈಕಮಾಂಡ್, ಗೃಹ ಸಚಿವ ಪರಮೇಶ್ವರ ಅವರು ಕರೆದಿದ್ದ ಡಿನ್ನರ್ ಸಭೆಯನ್ನು ರದ್ದುಗೊಳಿಸುವಂತೆ ಸೂಚನೆ ನೀಡಿದೆ. ಹೀಗಾಗಿ ನಾಳಿನ ಪರಮೇಶ್ವರ ಅವರ ಮತ್ತೊಂದು ಡಿನ್ನರ್ ಸಭೆ ರದ್ದಾಗಿದೆ.
ವಿದೇಶದಿಂದ ವಾಪಸಾದ ಬಳಿಕ ದೆಹಲಿಯಲ್ಲಿರುವ ಡಿಕೆಶಿ, ಪರಮೇಶ್ವರ್ ನೇತೃತ್ವದಲ್ಲಿ ಪಕ್ಷ ಮತ್ತು ಸಭೆ ಕರೆದಿರುವ ‘ಭೋಜನ ರಾಜಕೀಯ’ ಬಗ್ಗೆ ಪ್ರತಿಕ್ರಿಯಿಸಿದ್ದು, ‘ಅದರ ನನಗೆ ಗೊತ್ತಿಲ್ಲ. ನಾನು ಬೆಂಗಳೂರಿಗೆ ಹೋದ ನಂತರ ಅದರ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸುತ್ತೇನೆ ಎಂದರು.
ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ ಅವರು, ಬುಧವಾರದ ಭೋಜನ ಸಭೆಯು ಎಸ್‌ಸಿ/ಎಸ್‌ಟಿ ಸಮಾವೇಶದ ಪೂರ್ವಸಿದ್ಧತಾ ಸಭೆಯಾಗಿದ್ದು, ಮುಂದಿನ ದಿನಗಳಲ್ಲಿ ಪಕ್ಷದ ಪರವಾಗಿ ಸಮುದಾಯದ ಬೆಂಬಲವನ್ನು ಕ್ರೋಢೀಕರಿಸುವ ಉದ್ದೇಶದಿಂದ ಸಭೆ ಆಯೋಜಿಸಲಾಗಿದೆ. ನಾವು ಮುಂದಿನ ದಿನಗಳಲ್ಲಿ ಎಸ್‌ಸಿ/ಎಸ್‌ಟಿ ಸಮಾವೇಶವನ್ನು ಆಯೋಜಿಸಲು ಯೋಜಿಸುತ್ತಿದ್ದೇವೆ ಎಂದು ಹೇಳಿದ್ದರು.
