ಮೆಟ್ರೋ ವಿಸ್ತರಣೆಯಿಂದ ಬೆಂಗಳೂರು ಮೇಲಿನ ಒತ್ತಡ ಕಡಿಮೆಯಾಗಲಿದೆ: ಸಚಿವ ಪರಮೇಶ್ವರ್‌

ಬೆಂಗಳೂರು: 

   ಬೆಂಗಳೂರಿನಿಂದ ತುಮಕೂರಿಗೆ ನಮ್ಮ ಮೆಟ್ರೋ ರೈಲು ವಿಸ್ತರಣೆಯಿಂದ ತುಮಕೂರು ಭಾಗದ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್‌ ಯೋಜನೆಗೆ ಅಪಸ್ವರ ತೆಗೆದಿರುವ ತೇಜಸ್ವಿ ಸೂರ್ಯಗೆ ತಿರುಗೇಟು ನೀಡಿದ್ದಾರೆ.

   ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಗೃಹ ಸಚಿವ ಪರಮೇಶ್ವರ್‌ ಅವರು, ಬೆಂಗಳೂರು-ತುಮಕೂರು ಮೆಟ್ರೋ ಯೋಜನೆಯ ಅನೇಕ ವಿಚಾರಗಳು ಸಂಸದ ತೇಜಸ್ವಿಸೂರ್ಯ ಅವರ ಗಮನದಲ್ಲಿಲ್ಲ. ಇದೇ ಕಾರಣದಿಂದ ಯೋಜನೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

    ಪ್ರತಿನಿತ್ಯ ತುಮಕೂರಿನಿಂದ ಸಾವಿರಾರು ಜನರು ಪ್ರಯಾಣ ಮಾಡುತ್ತಾರೆ. ನೆಲಮಂಗಲ, ದಾಬಸ್‌ಪೇಟೆ, ಕ್ಯಾತ್ಸಂದ್ರ ಭಾಗ ವೇಗವಾಗಿ ಬೆಳೆಯುತ್ತಿವೆ. ಕೈಗಾರಿಕೆ ಉದ್ದೇಶದಿಂದ ಜನರ ಜೀವನ ಹೆಚ್ಚಾಗುತ್ತಿದೆ. ಬೆಂಗಳೂರಿನಲ್ಲಿ ಒತ್ತಡ ಜಾಸ್ತಿ ಇದೆ. ನೀರಿಗೆ ಕಷ್ಟ, ಓಡಾಡೋಕೆ ಟ್ರಾಫಿಕ್ ಸಮಸ್ಯೆ ಇದೆಲ್ಲ ನೋಡಿಕೊಂಡು ಆ ಕಡೆ ಜೀವನ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.

    ತುಮಕೂರಿನಲ್ಲಿ 20 ಸಾವಿರ ಎಕರೆಯಲ್ಲಿ ಏಷ್ಯಾದ ಅತಿದೊಡ್ಡ ಕೈಗಾರಿಕಾ ಪ್ರದೇಶ ನಿರ್ಮಿಸಲಾಗಿದೆ. ಈಗಾಗಲೇ 200 ಕೈಗಾರಿಕೆಗಳು ಬಂದಿವೆ. ಫುಡ್‌ಪಾರ್ಕ್, ಟೈಮೆಕ್ ಜಪಾನೀಸ್ ಫ್ಯಾಕ್ಟರಿ, ಜಪಾನೀಸ್ ಟೌನ್‌ಶಿಪ್‌ಗೆ ಜಾಗ ಕೊಟ್ಟಿದ್ದೇವೆ. ಇಷ್ಟು ವೇಗವಾಗಿ ಬೆಳೆಯುತ್ತಿರುವಾಗ ಸಂಪರ್ಕ (ಕನೆಕ್ಟಿವಿಟಿ) ವ್ಯವಸ್ಥೆ ಬೇಕಲ್ಲವೇ ಎಂದು ಪ್ರಶ್ನಿಸಿದ ಅವರು, ರಸ್ತೆ, ಮೆಟ್ರೋ, ರೈಲು ಸಂಪರ್ಕ ಇದ್ದರೆ ಬೆಂಗಳೂರಿನ ಮೇಲಿನ ಒತ್ತಡ ಕಡಿಮೆಯಾಗುತ್ತದೆ ಎಂಬುದು ಉದ್ದೇಶ. ರಾಮನಗರ, ಕೋಲಾರ, ತುಮಕೂರು ನಗರಗಳನ್ನು ಬೆಳೆಸಿದರೆ ಬೆಂಗಳೂರಿನ ಮೇಲಿನ ಒತ್ತಡ ಕಡಿಮೆಯಾಗುತ್ತದೆ ಎಂದು ಹೇಳಿದ್ದಾರೆ.

    ಎರಡು ವರ್ಷದ ಹಿಂದೆಯೇ ತುಮಕೂರಿಗೆ ಮೆಟ್ರೋ ಯೋಜನೆ ತೆಗೆದುಕೊಂಡು ಹೋಗಬೇಕು ಎಂದು ಪ್ರಸ್ತಾಪ ಮಾಡಿದ್ದೆ. ಮುಖ್ಯಮಂತ್ರಿಗಳು ಫಿಸಿಬಲಿಟಿ ಸ್ಟಡಿ ಮಾಡುವುದಾಗಿ 2024ರ ಬಜೆಟ್‌ನಲ್ಲಿ ಘೋಷಿಸಿದ್ದರು. ಫಿಸಿಬಲಿಟಿ ವರದಿಯಲ್ಲಿ ತುಮಕೂರು ಮೆಟ್ರೋ ಯೋಜನೆ ಬಗ್ಗೆ ಪಾಸಿಟಿವ್ ಆಗಿ ಕೊಟ್ಟಿದ್ದಾರೆ. ಎಲ್ಲರೊಂದಿಗೆ ಚರ್ಚೆ ಮಾಡಿ ಡಿಪಿಆರ್ ಮಾಡಲು ಅನುಮತಿ ಕೊಟ್ಟಿದ್ದಾರೆ ಎಂದು ಪರಮೇಶ್ವರ್‌ ಹೇಳಿದ್ದಾರೆ.

Recent Articles

spot_img

Related Stories

Share via
Copy link