ತುಮಕೂರು
ಜಾತಿ ಪದ್ಧತಿ ನಿರ್ಮೂಲನೆಯಾದರೆ ಮಾತ್ರ ಶೋಷಿತವರ್ಗದವರ ಅಭಿವೃದ್ಧಿ ಸಾಧ್ಯ. ಸಮಾಜದಲ್ಲಿ ನಾವು ಮಾಡಿಕೊಂಡ ಜಾತಿಪದ್ಧತಿಯಿಂದ ಸಮಾಜದ ಅಭಿವೃದ್ದಿಯಾಗುತ್ತಿಲ್ಲ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ನುಡಿದರು.
ನಗರದ ಅಮಾನಿಕೆರೆ ಆವರಣದಲ್ಲಿನ ಗಾಜಿನ ಮನೆಯಲ್ಲಿ ಛಲವಾದಿ ಮಹಾಸಭಾದಿಂದ ಆಯೋಜಿಸಿದ್ದ ಸಚಿವ ಹಾಗೂ ಶಾಸಕರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಛಲ ಇದ್ದು ಕೆಲಸ ಮಾಡುವವರು ಅದರಲ್ಲಿ ಶೋಷಿತ ವರ್ಗದವರೇ ಹೆಚ್ಚು. ಹಿಂದಿನಿಂದಲೂ ಶೋಷಿತ ವರ್ಗದವರೂ ಶೋಷಣೆಗೆ ಒಳಗಾಗುತ್ತಲೇ ಇದ್ದಾರೆ. ಅವರ ಪರವಾಗಿ ಪ್ರತಿನಿಧಿಯಾಗಿ ಅಂಬೇಡ್ಕರ್‍ರವರು ನಿಂತು ಸಂವಿಧಾನದಲ್ಲಿ ಮೀಸಲಾತಿ ದೊರಕಿಸಿಕೊಟ್ಟಿದ್ದಾರೆ. ನಮ್ಮ ದೇಶ ಇಂದಿಗೂ ಬಡತನದೇಶವಾಗಿಯೇ ಇರುವುದಕ್ಕೆ ಮೂಲ ಕಾರಣ ನಾವೇ ಸೃಷ್ಠಿ ಮಾಡಿಕೊಂಡ ಜಾತಿ ಪದ್ಧತಿ. ಜಾತಿ ಪದ್ಧತಿಯಿಂದ ಅಭಿವೃದ್ಧಿ ಎಂಬುದು ಮರೀಚಿಕೆಯಾಗುತ್ತಿದೆ ಎಂದರು.
ಅಂಬೇಡ್ಕರ್ ಹೇಳಿದಂತೆ ಪ್ರತಿಯೊಬ್ಬರೂ ಶಿಕ್ಷಣವಂತರಾಗಬೇಕು. ಶಿಕ್ಷಣವು ಶಕ್ತಿ ನೀಡುತ್ತದೆ. ಶಿಕ್ಷಣದಿಂದ ಸಂಘಟಿತರಾಗಬೇಕು. ನಂತರ ಹೋರಾಟ ಮಾಡಿ ನಮ್ಮ ಹಕ್ಕುಗಳ್ನು ಪಡೆಯಬೇಕು. ಮೂಡನಂಬಿಕೆ ಹೋಗಲಾಡಿಸಬೇಕು. ಮೌಡ್ಯಾಚರಣೆಯನ್ನು ಬಿಡಬೇಕು. ನಾವ್ಯಾರು ಇದೇ ಸಮಾಜದಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿಕೊಂಡು ಬಂದಿಲ್ಲ. ಹಾಗೇ ದೇವರು ಕೂಡ ನೀನು ಇದೇ ಸಮಾಜದವನು ಎಂದು ಪ್ರಮಾಣಪತ್ರವೇನು ನೀಡಿಲ್ಲ. ಕೇವಲ ನಾವುಗಳು ಈ ಜಾತಿ ಎಂಬ ಪಟ್ಟಿಯನ್ನು ಕಟ್ಟಿಕೊಂಡು ಮೇಲು ಕೀಳು ಎಂದು ಮಾತನಾಡುತ್ತಿದ್ದೇವೆ . ಇದು ಬದಲಾಗಬೇಕು. ಶೋಷಿತ ವರ್ಗದವರು ಕೂಡ ಸಮಾಜದಲ್ಲಿ ತಲೆ ಎತ್ತಿ ಓಡಾಡುವಂತಾಗಬೇಕು. ನಮ್ಮಲ್ಲಿ ಜಾತಿ ಬೇಧ ಭಾವಗಳನ್ನು ಹೋಗಲಾಡಿಸಬೇಕು ಎಂದರು.
ಛಲವಾದಿ ಸಮುದಾಯದವರನ್ನು ಒಗ್ಗೂಡಿಸುವುದು ಸಾಮಾನ್ಯದ ಕೆಲಸವಲ್ಲ. ಅವರು ಎಲ್ಲಿಯೂ ಸೇರಿವುದಿಲ್ಲ. ಅಂತಹದ್ದು ಇಂದು ಇಷ್ಟು ಜನ ಸೇರಿರುವುದು ತುಂಬಾ ಸಂತಸದ ವಿಷಯವಾಗಿದೆ. ಕೇವಲ ನಮ್ಮ ತುಮಕೂರು ಜಿಲ್ಲೆಯಿಂದ ಮಾತ್ರವಲ್ಲದೆ ಇಡೀ ರಾಜ್ಯದ ಬೇರೆ ಬೇರೆ ಭಾಗಗಳಿಂದ ಬಂದಿರುವುದು ನಮ್ಮ ಒಗ್ಗಟ್ಟನ್ನು ತೋರಿಸಿದಂತಿದೆ. ನನಗೆ ಮಾಡಿದ ಈ ಅಭಿನಂದನೆ, ಶೋಷಿತ ಸಮುದಾಯಕ್ಕೆ ಮಾಡಿದ ಅಭಿನಂದನೆ ಎಂದು ಭಾವಿಸುತ್ತೇನೆ. ದಲಿತರಾಗಿದ್ದ ಸಂಜೀವಯ್ಯನವರು ಮುಖ್ಯಮಂತ್ರಿಗಳಾಗಿದ್ದರು. ಅವರ ನಂತರ ದಲಿತ ಉಪಮುಖ್ಯಮಂತ್ರಿಯಾಗಲು ಸುಮಾರು 70 ವರ್ಷಗಳು ಬೇಕಾಯಿತು.
ಮೈತ್ರಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ಶೋಷಿತ ವರ್ಗದ ಸಮುದಾಯದವರನ್ನು ಪ್ರತಿನಿಧಿಸುತ್ತೇನೆ. ಅವರನ್ನು ಅಭಿವೃದ್ಧಿ ಮಾಡುವುದೇ ನಮ್ಮ ಪ್ರಮುಖ ಉದ್ದೇಶ. ಶೋಷಿತ ವರ್ಗಗಳಿಗೆ ಅನ್ಯಾಯವಾದರೆ ನಾನು ಹುದ್ದೆಯಲ್ಲಿ ಕ್ಷಣಕಾಲ ಕೂಡ ನಿಲ್ಲುವುದಿಲ್ಲ. ಅವರಿಗೆ ಅನ್ಯಾಯವಾದಾಗ ನನ್ನ ಕೈಯಲ್ಲಿ ಏನೂ ಮಾಡಲು ಸಾಧ್ಯವಾಗದ ಸ್ಥಿತಿ ಬರುವುದಾದರೆ ಈ ಪದವಿಯಲ್ಲಿರುವುದಕ್ಕೆ ನಾನು ಅನರ್ಹ ಎಂದರು.
ಕಾರ್ಯಕ್ರಮದ ಉದ್ಘಾಟನೆಯನ್ನು ರಾಷ್ಟ್ರಪ್ರಶಸ್ತಿ ಪುರಸ್ಕತರಾದ ಸಾಲುಮರದ ತಿಮ್ಮಕ್ಕ ನೆರವೇರಿಸಿದರು. ಡಾ.ಜಿ.ಪರಮೇಶ್ವರ್ ಹಾಗೂ ಸಕಲೇಶಪುರ ಶಾಸಕ ಎಚ್.ಕೆ.ಕುಮಾರಸ್ವಾಮಿ ಮತ್ತು ನೆಲಮಂಗಲ ಶಾಸಕ ಡಾ.ಶ್ರೀನಿವಾಸಮೂರ್ತಿ ಅವರನ್ನು ಛಲವಾದಿ ಮಹಾಸಭಾದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ತಾ,ಪಂ ಅಧ್ಯಕ್ಷ ಗಂಗಾಂಜನೇಯ, ಜಿ.ಪಂ ಸದಸ್ಯೆ ಮಂಜುಳಾಶೇಷಗಿರಿ, ಯಶೋಧ ಗಂಗರಾಜು, ಎನ್.ಮೂರ್ತಿ, ಬಸವರಾಜು, ಅನಂತಕುಮಾರ್, ಕೇಶವಮೂರ್ತಿ, ಅರವಿಂದಶೆಟ್ಟಿ, ಪಾಲಿಕೆ ಸದಸ್ಯೆ ಪ್ರಭಾವತಿ ಸುಧೀಶ್ವರ್, ದೊಡ್ಡನಂಜಯ್ಯ, ಭಾನುಪ್ರಕಾಶ್, ಗಂಗಾಧರ್ ಹೆಗ್ಗೆರೆ, ಬಿ.ಜಿ.ನಿಂಗರಾಜು ಮತ್ತಿತರರು ಉಪಸ್ಥಿತರಿದ್ದರು. ಸ್ವಾಗತ ಸಮಿತಿಯ ಅಧ್ಯಕ್ಷ ದಿನೇಶ್ ಗಣ್ಯರನ್ನು ಸ್ವಾಗತಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ