ಕಾಂಗ್ರೆಸ್ ನಲ್ಲಿರುವ ಪಾರ್ಥೇನಿಯಂ ಗಿಡಗಳು ನಮ್ಮಲ್ಲಿಲ್ಲ : ಬಿವೈವಿ

ಬೆಂಗಳೂರು: 

   ಮಾನ್ಯ ಸಿದ್ದರಾಮಯ್ಯ ಅವರೇ, ಭಾರತೀಯ ಜನತಾ ಪಾರ್ಟಿ ತತ್ವ, ಸಿದ್ದಾಂತ ಆಧರಿಸಿದ ಶಿಸ್ತಿನ ಪಕ್ಷ. ಕಳೆಯಿಲ್ಲದೆ ಬೆಳೆದು ನಿಂತಿರುವ ಸಮೃದ್ಧ ತೋಟ, ನಿಮ್ಮ ಕಾಂಗ್ರೆಸ್ ನಲ್ಲಿರುವ ಪಾರ್ಥೇನಿಯಂ ಗಿಡಗಳು ನಮ್ಮಲ್ಲಿಲ್ಲ, ಅಧಿಕಾರಕ್ಕಾಗಿ ಹಪಾಹಪಿಸುವ ಕಳ್ಳಿ ಗಿಡಗಳಾವುವೂ ನಮ್ಮ ಪಕ್ಷದಲ್ಲಿ ತಲೆಯೆತ್ತಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದ್ದಾರೆ.

   ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ. ಅಧಿಕಾರಕ್ಕಾಗಿ ಹಪಾಹಪಿಸುವ ಕಳ್ಳಿ ಗಿಡಗಳಾವುವೂ ನಮ್ಮ ಪಕ್ಷದಲ್ಲಿ ತಲೆಯೆತ್ತಲು ಸಾಧ್ಯವಿಲ್ಲ , ಒಂದು ವೇಳೆ ತಲೆ ಎತ್ತಲು ಹೋದರೆ ಅದಕ್ಕೆ ಮದ್ದು ನೀಡುವಷ್ಟು ನಮ್ಮ ವರಿಷ್ಠ ಮಂಡಳಿಯು ಸಶಕ್ತವಾಗಿದೆ.

   ಭಾರತದ ರಾಜಕೀಯ ಭೂಪಟದಲ್ಲಿ ಮಾಸಿ ಹೋಗುತ್ತಿರುವ ನಿಮ್ಮ ಕಾಂಗ್ರೆಸ್ ಪಕ್ಷ ಅಧಿಕಾರ ಕಬಳಿಸುವುದನ್ನಷ್ಟೇ ಕೇಂದ್ರೀಕರಿಸಿ ಸುಳ್ಳು ಭರವಸೆಗಳು ಹಾಗೂ ಆಮಿಷಗಳ ಬಲೆ ಹೆಣೆದು ಕರ್ನಾಟಕದಲ್ಲಿ ಅಧಿಕಾರ ದಕ್ಕಿಸಿಕೊಂಡಿದೆ. ಲೋಕಸಭಾ ಚುನಾವಣೆಯ ನಂತರ ಈ ಟೊಳ್ಳು ಬಲೆಯನ್ನು ಜನರೇ ತುಂಡರಿಸಲಿದ್ದಾರೆ, ನಿಮ್ಮ ಬಣ ರಾಜಕೀಯದ ಕಿತ್ತಾಟದ ಬಣ್ಣ ಶೀಘ್ರದಲ್ಲೇ ಬಯಲಿಗೆ ಬರಲಿದೆ ಎಂದು ಲೇವಡಿ ಮಾಡಿದ್ದಾರೆ.

   ದೀಪ ಆರುವ ಮುನ್ನ ಜೋರಾಗಿ ಹೊತ್ತಿ ಉರಿಯುತ್ತದೆ, ಕಾಲವೇ ನಿಮಗೆ ಉತ್ತರ ಹೇಳಲಿದೆ. ಯಾರು ಯಾರ ವಿರುದ್ಧ ಮುಗಿ ಬೀಳುತ್ತಾರೆ? ಯಾರು ಎಲ್ಲಿರುತ್ತಾರೆ? ಎಂಬುದನ್ನು ಕೆಲವೇ ದಿನಗಳು ಕಾದುನೋಡಿ ನಿಮ್ಮ ಕಾಂಗ್ರೆಸ್ ಪಡಸಾಲೆಯಲ್ಲೇ ನಿಮಗೆ ಉತ್ತರ ಸಿಗಲಿದೆ. ನೀವು ಮುಖ್ಯಮಂತ್ರಿಯಾಗುವ ವೇಳೆ ಡಿಕೆ ಶಿವಕುಮಾರ್ ಅವರೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆ ಬದಿಗೊತ್ತಿ ಹೈಕಮಾಂಡ್ ಸೂತ್ರ ಧಿಕ್ಕರಿಸುವ ನಿಮ್ಮ ತಂತ್ರದ ಜಾಡು ಹಿಡಿದಿರುವ ನಿಮ್ಮ ವಿರೋಧಿ ಬಣ ಸುಮ್ಮನೆ ಕುಳಿತಿಲ್ಲ, ಮುಖ್ಯಮಂತ್ರಿ ಅಧಿಕಾರ ಹಂಚಿಕೆಯ ಕಾಲ ಸನ್ನಿಹಿತವಾಗುವುದರೊಳಗೇ ಪರಿಸ್ಥಿತಿ ಯಾವ ರೀತಿ ಬಿಗಡಾಯಿಸುತ್ತದೆ ಎನ್ನುವುದನ್ನು ಕಾಂಗ್ರೆಸ್ ನಲ್ಲಿ ವ್ಯೂಹ ರಚಿಸುವ ಬಂಡೆಯೊಂದು ಈಗಾಗಲೇ ಸದ್ದು ಮಾಡುತ್ತಿದೆ ಎಂದು ವಿಜಯೇಂದ್ರ ಹೇಳಿದ್ದಾರೆ.

   ರಾಜ್ಯ ಬಿಜೆಪಿಯ ಪಕ್ಷದ ಮುಕ್ಕಾಲು ಪಾಲು ನಾಯಕರು ಬಿಜೆಪಿಯ ಈಗಿನ ಅಧ್ಯಕ್ಷ ಬಿ ವೈ ವಿಜಯೇಂದ್ರ ಅವರ ತಲೆದಂಡಕ್ಕಾಗಿ ವ್ಯೂಹ ರಚನೆಯಲ್ಲಿ ತೊಡಗಿದ್ದಾರೆ. ಚುನಾವಣೆಯಲ್ಲಿನ ಹಿನ್ನಡೆಯನ್ನು ತಂದೆ-ಮಕ್ಕಳ ತಲೆಗೆ ಕಟ್ಟಿ ಅವರನ್ನು ಮೂಲೆಗೆ ತಳ್ಳುವ ಕಸರತ್ತಿನ ತಯಾರಿ ಭರದಿಂದ ನಡೆಯುತ್ತಿದೆ. ಇದಕ್ಕೆ ಆರ್.ಎಸ್.ಎಸ್ ನ ಒಂದು ಬಣದ ಆಶೀರ್ವಾದ ಕೂಡಾ ಇದೆ ಎಂದು ಹೇಳಲಾಗುತ್ತಿದೆ.

   ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ವಂಚಿತರಾಗಿದ್ದ ನಾಯಕರು ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ಭಾಗವಹಿಸಿಲ್ಲ. ಈ ಚುನಾವಣೆಯಲ್ಲಿ ಯಡಿಯೂರಪ್ಪ ಮತ್ತು ಮಕ್ಕಳು ಪಕ್ಷವನ್ನು ಗೆಲುವಿನ ಹಾದಿಯಲ್ಲಿ ಮುನ್ನಡೆಸಿದರೆ ತಾವೆಲ್ಲ ಶಾಶ್ವತವಾಗಿ ಮೂಲೆ ಸೇರುವುದು ಖಚಿತ ಎನ್ನುವ ಆತಂಕದಲ್ಲಿದ್ದಾರೆ. ಇದರಿಂದಾಗಿ ಲೋಕಸಭಾ ಚುನಾವಣೆಯ ನಂತರ ರಾಜ್ಯ ಬಿಜೆಪಿಯಲ್ಲಿ ಭಿನ್ನಮತದ ಮಹಾಸ್ಪೋಟ ಆಗಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap