ಲಂಡನ್:
ಐದು ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲು ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ತಂಡದ ಆಟಗಾರರಿಗೆ ಕುಟುಂಬದೊಂದಿಗೆ ಲಂಡನ್ನಲ್ಲಿ ನೆಲೆಸಿರುವ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರು ತಮ್ಮ ಲಂಡನ್ನಲ್ಲಿರುವ ನಿವಾಸಕ್ಕೆ ಕರೆಸಿಕೊಂಡು ಔತಣ ನೀಡಿದ್ದಾರೆ ಎನ್ನಲಾಗಿದೆ. ಶುಭಮಾನ್ ಗಿಲ್, ರಿಷಭ್ ಪಂತ್, ಮೊಹಮದ್ ಸಿರಾಜ್ಗೆ ಆತಿಥ್ಯ ನೀಡಿದ್ದಾರೆ ಎನ್ನಲಾಗಿದೆ.
ವಿರಾಟ್ ಕೊಹ್ಲಿ ಎಲ್ಲ ಮಾದರಿಯ ಕ್ರಿಕೆಟ್ನಿಂದ ನಿವೃತ್ತಿಯಾದ ಬಳಿಕ ಅವರು ಅವರು ಭಾರತ ತೊರೆದು ತಮ್ಮ ಕುಟುಂಬದೊಂದಿಗೆ ಲಂಡನ್ನಲ್ಲಿ ಶಾಶ್ವತವಾಗಿ ನೆಲೆಸಲಿದ್ದಾರೆ ಎಂಬ ಮಾತುಗಳು ಕಳೆದ ಎರಡು ವರ್ಷಗಳಿಂದ ಕೇಳಿ ಬರುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಕೊಹ್ಲಿ ಯಾವುದೇ ಸರಣಿ ಮುಕ್ತಾಯದ ಬೆನ್ನಲ್ಲೇ ಲಂಡನ್ಗೆ ತೆರಳುತ್ತಿದ್ದಾರೆ. ಹೀಗಾಗಿ ಅವರು ಭಾರತ ತೊರೆಯುವುದು ಖಚಿತ ಎನ್ನುವಂತಿದೆ.
ಇತ್ತೀಚೆಗೆ ಕೊಹ್ಲಿಯ ಬಾಲ್ಯದ ಕೋಚ್ ರಾಜ್ಕುಮಾರ್ ಶರ್ಮಾ ಅವರು ಸಂದರ್ಶನವೊಂದಲ್ಲಿ ಕೊಹ್ಲಿ ಭಾರತ ತೊರೆಯುವು ಖಚಿತ ಎಂದು ಹೇಳಿದ್ದರು. ಕ್ರಿಕೆಟ್ ನಿವೃತ್ತಿ ಬಳಿಕ ಕೊಹ್ಲಿ ತಮ್ಮ ಕುಟುಂಬದೊಂದಿಗೆ ಲಂಡನ್ಗೆ ತೆರಳಲು ಯೋಚಿಸುತ್ತಿರುವುದು ನಿಜ ಎಂದು ಹೇಳಿದ್ದರು.
ಕೊಹ್ಲಿ ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ತಂಡ ಪ್ರಕಟಗೊಳ್ಳುವುದಕ್ಕೆ ಮುನ್ನವೇ ಟೆಸ್ಟ್ ಕ್ರಿಕೆಟ್ಗೆ ವಿದಾಯ ಘೋಷಿಸಿದ್ದರು. 2011ರಲ್ಲಿ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದ ಕೊಹ್ಲಿ, ಭಾರತ ಪರ 123 ಪಂದ್ಯಗಳಲ್ಲಿ 46.85ರ ಸರಾಸರಿಯಲ್ಲಿ 9230 ರನ್ ಕಲೆಹಾಕಿದ್ದಾರೆ. ಇದರಲ್ಲಿ 30 ಶತಕ, 31 ಅರ್ಧಶತಕಗಳೂ ಒಳಗೊಂಡಿವೆ. ಕಳೆದ ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ನಲ್ಲಿ ಶತಕ ಬಾರಿಸಿದ್ದ ಕೊಹ್ಲಿ, ಅದೇ ಸರಣಿಯಲ್ಲಿ ತಮ್ಮ ಕೊನೆ ಪಂದ್ಯವಾಡಿದ್ದರು.
