ಬಿಜೆಪಿಗೆ ಕಾರ್ಯಕರ್ತರೇ ಜೀವಾಳ : ಕೋಟಾ ಶ್ರೀನಿವಾಸ ಪೂಜಾರಿ

ದಾವಣಗೆರೆ

     ಕಾರ್ಯಕರ್ತರೇ ಬಿಜೆಪಿಗೆ ಜೀವಾಳವಾಗಿದ್ದು, ನಮ್ಮ ಪಕ್ಷ ಕಾರ್ಯಕರ್ತರ ಆಧಾರದ ಮೇಲೆ ಕೆಲಸ ಮಾಡುತ್ತಿದ್ದೆಯೇ ಹೊರತು, ಬೇರೆಯವರಂತೆ ಹಣ, ಅಧಿಕಾರಕ್ಕಾಗಿ ಕೆಲಸ ಮಾಡುತ್ತಿಲ್ಲ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

     ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಪಕ್ಷದ ಸಂಘಟನಾ ಪರ್ವ ಸದಸ್ಯತ್ವ ಅಭಿಯಾನದ ಜಿಲ್ಲಾಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಬೇರೆ ಪಕ್ಷಗಳಿಗೆ ಹೋಲಿಸಿದರೆ, ಬಿಜೆಪಿ ಬೆಳೆದು ಬಂದ ದಾರಿಯೇ ವಿಭಿನ್ನವಾಗಿದೆ. ಜನಸಂಘದ ಕಾಲದಿಂದ ಇಂದಿನವರೆಗೂ ರಾಷ್ಟ್ರೀಯತೆಯನ್ನು ಪ್ರತಿಪಾದಿಸಿಕೊಂಡೇ, ಅಧಿಕಾರ ಹಿಡಿದಿದೆ. ಇದಕ್ಕೆ ಪಕ್ಷದ ಕಾರ್ಯಕರ್ತರೇ ಪ್ರಮುಖ ಕಾರಣ ಎಂಬುದರಲ್ಲಿ ಅನುಮಾನವಿಲ್ಲ ಎಂದು ಹೇಳಿದರು.

     ಕಾಂಗ್ರೆಸ್ ಪಕ್ಷ ಕಾರ್ಯಕರ್ತರನ್ನು ಮರೆತಿರುವ ಕಾರಣಕ್ಕಾಗಿಯೇ ಲೋಕಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲಲು ಕಾರಣವಾಗಿದೆ. ಹೀಗಾಗಿ ಬಿಜೆಪಿ ಪಕ್ಷವು ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಇತರೆ ಪಕ್ಷಗಳಿಗಿಂತ ವಿಭಿನ್ನವಾದದ್ದು. ಆದ್ದರಿಂದ ಕಾರ್ಯಕರ್ತರು ಬಿಜೆಪಿಯನ್ನು ಬೇರೆ ಪಕ್ಷಗಳೊಂದಿಗೆ ಹೋಲಿಕೆ ಮಾಡಿಕೊಳ್ಳಬಾರದು ಎಂದು ಕಿವಿಮಾತು ಹೇಳಿದರು.

     ಅಧಿಕಾರ, ಹಣ, ದಬ್ಬಾಳಿಕೆ ಮೂಲಕ ಅಧಿಕಾರ ಅನುಭವಿಸಿದವರು ಈಗ ಹೇಗಾಗಿದ್ದಾರೆ ಎಂಬುದನ್ನು ನೋಡುತ್ತಿದ್ದೇವೆ. ಆದರೆ, ಬಿಜೆಪಿ ರಾಷ್ಟ್ರಕ್ಕಾಗಿ ಕೆಲಸ ಮಾಡಿ ಅಧಿಕಾರಕ್ಕೆ ಬಂದಿದೆ ಎಂದ ಅವರು, ಬಿಜೆಪಿ ಪಕ್ಷವು 11 ಕೋಟಿ ಕಾರ್ಯಕರ್ತರನ್ನು ಹೊಂದುವ ಮೂಲಕ ಜಗತ್ತಿನಲ್ಲಿಯೇ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಎಂದರು.

      ಅಮಿತ್ ಶಾ ಮತ್ತು ನರೇಂದ್ರ ಮೋದಿಯವರ ಕಾರ್ಯತತ್ಪರತೆಯಿಂದ ಇದು ಸಾಧ್ಯವಾಗಿದೆ. ಕಾರ್ಯಕರ್ತರ ಬಲವನ್ನು ಹೆಚ್ಚಿಸಲು ಜುಲೈ 6ರಿಂದ ಆಗಸ್ಟ್ 11ರವರೆಗೆ ರಾಜ್ಯಾದ್ಯಂತ ಸದಸ್ಯತ್ವ ಅಭಿಯಾನ ಹಮ್ಮಿಕೊಳ್ಳಲಾಗಿದೆ. ರಾಜ್ಯದ 58 ಸಾವಿರ ಬೂತ್‍ಗಳಲ್ಲೂ ಅಭಿಯಾನ ನಡೆಯಲಿದೆ ಎಂದರು.

       ದಾವಣಗೆರೆ ಜಿಲ್ಲೆಯಲ್ಲಿ 5 ಲಕ್ಷ ಸದಸ್ಯತ್ವ ಹೊಂದುವ ಗುರಿ ಹಾಕಿಕೊಳ್ಳಲಾಗಿದೆ. ಸದಸ್ಯತ್ವ ಅಭಿಯಾನ ಕಾರ್ಯಕರ್ತರಿಗೆ ಹಬ್ಬವಿದ್ದಂತೆ. ಪ್ರತಿಯೊಬ್ಬ ಕಾರ್ಯಕರ್ತರೂ ತಮ್ಮ ವಾರ್ಡ್, ಕೇರಿಯಲ್ಲಿರುವ ಎಲ್ಲಾ ವರ್ಗಗಳ ಜನರನ್ನು ಭೇಟಿ, ಪಕ್ಷದೊಂದಿಗೆ ಜೋಡಿಸಬೇಕು. ಜನರ ಕಷ್ಟಗಳಿಗೆ ಸ್ಪಂದಿಸುವ ಮೂಲಕ ಬಿಜೆಪಿಯನ್ನು ಸಾಮಾನ್ಯರ ಬಳಿಗೆ ಕೊಂಡೊಯ್ಯಬೇಕು ಎಂದು ಸಲಹೆ ನೀಡಿದ ಅವರು, ಕೇಂದ್ರದಲ್ಲಿನ ನರೇಂದ್ರ ಮೋದಿ ಸರ್ಕಾರ ಪರಿಶಿಷ್ಟ ಪಂಗಡಕ್ಕೆ ಗ್ಯಾಸ್, ವಿದ್ಯುತ್, ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಗಳನ್ನು ಕೊಡುವ ಮೂಲಕ ಜನಸಾಮಾನ್ಯರ ಮತ್ತು ದೇಶದ ಪ್ರಗತಿಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಹೀಗಾಗಿ, ಕಾರ್ಯಕರ್ತರು ಸದಸ್ಯತ್ವ ಅಭಿಯಾನದ ಸಂದರ್ಭದಲ್ಲಿ ಮೋದಿ ಸರ್ಕಾರದ ಸಾಧನೆಗಳನ್ನು ತಿಳಿಸಿ, ಸದಸ್ಯರನ್ನಾಗಿ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.

        ಶಾಸಕ ಎಸ್.ಎ.ರವೀಂದ್ರನಾಥ ಮಾತನಾಡಿ, ಹಿಂದೆ ಜನಸಂಘವಿದ್ದ ಕಾಲದಲ್ಲಿ ಪಕ್ಷಕ್ಕೆ ಸದಸ್ಯತ್ವ ಮಾಡಿಸುವುದು ಕಷ್ಟವಾಗಿತ್ತು. ಆದರೆ ಇಂದು ಕಾಲ ಬದಲಾಗಿದೆ. ಜಿಲ್ಲೆಗೆ ನೀಡಿರುವ 5 ಲಕ್ಷ ಸದಸ್ಯತ್ವ ಗುರಿ ತಲುಪುವ ವಿಶ್ವಾಸವಿದೆ. ಅಭಿಯಾನದ ಸಂದರ್ಭದಲ್ಲಿ ಜನರ ಸಮಸ್ಯೆ, ಕಷ್ಟಗಳನ್ನು ಆಲಿಸಬೇಕು. ಅವುಗಳನ್ನೆಲ್ಲಾ ಪುಸ್ತಕದಲ್ಲಿ ನಮೂದಿಸಿಕೊಂಡರೆ, ಸಮಸ್ಯೆ ಬಗೆಹರಿಸಲು ಸಾಧ್ಯವಾಗುತ್ತದೆ ಎಂದರು.
ಅಧ್ಯಕ್ಷತೆಯನ್ನು ಜಿಲ್ಲಾ ಬಿಜೆಪಿ ಅಧ್ಯಕ್ಷ ಯಶವಂತರಾವ್ ಜಾಧವ್ ವಹಿಸಿದ್ದರು.

       ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ.ಎ.ಹೆಚ್.ಶಿವಯೋಗಿಸ್ವಾಮಿ, ಮಾಯಕೊಂಡ ಮಾಜಿ ಶಾಸಕ ಬಸವರಾಜ ನಾಯ್ಕ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶೈಲಜಾ ಬಸವರಾಜ್, ತಾಪಂ ಅಧ್ಯಕ್ಷೆ ಮಮತಾ ಮಲ್ಲೇಶಪ್ಪ, ಮುಖಂಡರಾದ ಹೆಚ್.ಎನ್.ಶಿವಕುಮಾರ, ಧನಂಜಯ ಕಡ್ಲೇಬಾಳ್, ಎನ್.ರಾಜಶೇಖರ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link