ಟೀಮ್ ಇಂಡಿಯಾ ಸೆಮಿಫೈನಲ್​ಗೇರುತ್ತಿದ್ದಂತೆ ಕ್ಯಾತೆ ತೆಗೆದ ಪ್ಯಾಟ್ ಕಮಿನ್ಸ್….!

ನವದೆಹಲಿ 

    2025ರ ಚಾಂಪಿಯನ್ಸ್ ಟ್ರೋಫಿ ನಿರ್ಣಾಯಕ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ ಆತಿಥೇಯ ಪಾಕಿಸ್ತಾನ್ ಮತ್ತು ಬಾಂಗ್ಲಾದೇಶ್ ತಂಡಗಳು ಟೂರ್ನಿಯಿಂದ ಹೊರಬಿದ್ದರೆ, ಭಾರತ ಮತ್ತು ನ್ಯೂಝಿಲೆಂಡ್ ತಂಡಗಳು ಸೆಮಿಫೈನಲ್​ಗೆ ಪ್ರವೇಶಿಸಿದೆ. ಇತ್ತ ಟೀಮ್ ಇಂಡಿಯಾ ನಾಕೌಟ್ ಹಂತಕ್ಕೇರುತ್ತಿದ್ದಂತೆ ಹೊಸ ಚರ್ಚೆಯೊಂದು ಶುರುವಾಗಿದೆ. ಅದು ಕೂಡ ಭಾರತ ತಂಡಕ್ಕೆ ಹೆಚ್ಚಿನ ಅನುಕೂಲವಾಗುತ್ತಿದೆ ಎಂಬ ಪ್ಯಾಟ್ ಕಮಿನ್ಸ್ ಅವರ ಹೇಳಿಕೆಯೊಂದಿಗೆ…!

   ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾ ಒಂದೇ ಮೈದಾನದಲ್ಲಿ ಪಂದ್ಯಗಳನ್ನು ಆಡುತ್ತಿದೆ. ಆದರೆ ಉಳಿದ ತಂಡಗಳನ್ನು ಒಟ್ಟು ಮೂರು ಮೈದಾನದಲ್ಲಿ ಆಡಿಸಲಾಗುತ್ತಿದೆ. ಇಲ್ಲಿ ಭಾರತ ತಂಡವು ಒಂದೇ ಸ್ಥಳದಲ್ಲಿ ಆಡುತ್ತಿರುವುದರಿಂದ ಹೆಚ್ಚಿನ ಅನುಕೂಲ ಪಡೆಯುತ್ತಿದೆ ಎಂದು ಪ್ಯಾಟ್ ಕಮಿನ್ಸ್ ಅಭಿಪ್ರಾಯಪಟ್ಟಿದ್ದಾರೆ.ಭಾರತ ಮೊದಲೇ ಬಲಿಷ್ಠ ತಂಡ. ಇದೀಗ ಅವರು ದುಬೈ ಮೈದಾನದಲ್ಲಿ ಮಾತ್ರ ಆಡುತ್ತಿರುವುದರಿಂದ ಹೆಚ್ಚಿನ ಪ್ರಯೋಜನವನ್ನು ಸಹ ಪಡೆಯುತ್ತಿದ್ದಾರೆ. ಆದರೆ ಉಳಿದ ತಂಡಗಳಿಗೆ ಈ ಅನುಕೂಲ ದೊರೆಯುತ್ತಿಲ್ಲ ಎಂದು ಪ್ಯಾಟ್ ಕಮಿನ್ಸ್ ಹೇಳಿದ್ದಾರೆ.

   ಪ್ಯಾಟ್ ಕಮಿನ್ಸ್ ಹೇಳಿಕೆಯಂತೆ, ಚಾಂಪಿಯನ್ಸ್ ಟ್ರೋಫಿಯಲ್ಲಿ ಕಣಕ್ಕಿಳಿದಿರುವ 8 ತಂಡಗಳಲ್ಲಿ 7 ಟೀಮ್​ಗಳು ರಾವಲ್ಪಿಂಡಿ, ಲಾಹೋರ್ ಹಾಗೂ ದುಬೈನಲ್ಲಿ ಪಂದ್ಯಗಳನ್ನಾಡುತ್ತಿದೆ. ಆದರೆ ಭಾರತ ತಂಡವು ದುಬೈನಲ್ಲಿ ಮಾತ್ರ ಆಡುತ್ತಿದೆ. ಇದಕ್ಕೆ ಮುಖ್ಯ ಕಾರಣ ಈ ಬಾರಿಯ ಚಾಂಪಿಯನ್ಸ್ ಟ್ರೋಫಿ ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಿರುವುದು.

  ಟೀಮ್ ಇಂಡಿಯಾ ಪಾಕಿಸ್ತಾನದಲ್ಲಿ ಟೂರ್ನಿ ಆಡಲು ಹಿಂದೇಟು ಹಾಕಿದ್ದರಿಂದ ಚಾಂಪಿಯನ್ಸ್ ಟ್ರೋಫಿಯನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲಾಗುತ್ತಿದೆ. ಅದರಂತೆ ಭಾರತದ ಪಂದ್ಯಗಳಿಗೆ ದುಬೈ ಸ್ಟೇಡಿಯಂ ಅನ್ನು ನಿಗದಿ ಮಾಡಲಾಗಿದೆ. ಹೀಗಾಗಿ ಟೀಮ್ ಇಂಡಿಯಾ ತನ್ನ ಪಂದ್ಯಗಳನ್ನು ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಮಾತ್ರ ಆಡುತ್ತಿದೆ. 

   ಇದನ್ನೇ ಪ್ರಸ್ತಾಪಿಸಿರುವ ಪ್ಯಾಟ್ ಕಮಿನ್ಸ್, ಒಂದು ತಂಡಕ್ಕೆ ಮಾತ್ರ ಒಂದೇ ಸ್ಟೇಡಿಯಂನಲ್ಲಿ ಆಡಲು ಅನುಕೂಲ ಮಾಡಿ ಕೊಡುತ್ತಿರುವುದು ಸರಿಯಾದ ಕ್ರಮವಲ್ಲ ಎಂಬಾರ್ಥದಲ್ಲಿ ಮಾತನಾಡಿದ್ದಾರೆ. ಪ್ಯಾಟ್ ಕಮಿನ್ಸ್ ಅವರ ಈ ಹೇಳಿಕೆ ಬೆನ್ನಲ್ಲೇ ಹಲವು ಮಾಜಿ ಆಟಗಾರರು ಕೂಡ ಟೀಮ್ ಇಂಡಿಯಾಗೆ ಸಿಕ್ಕಿರುವ ಹೆಚ್ಚುವರಿ ಅನುಕೂಲದ ಬಗ್ಗೆ ಪ್ರಶ್ನೆಗಳೆನ್ನೆತ್ತಿದ್ದಾರೆ. ಇದರೊಂದಿಗೆ ಹೊಸ ಚರ್ಚೆಯೊಂದು ಶುರುವಾಗಿದ್ದು, ಈ ಚರ್ಚೆಯು ಎಲ್ಲಿಗೆ ಬಂದು ನಿಲ್ಲಲಿದೆ ಎಂಬುದನ್ನು ಕಾದು ನೋಡಬೇಕಿದೆ.

Recent Articles

spot_img

Related Stories

Share via
Copy link