ನವದೆಹಲಿ :
ಭಾರತ ಮತ್ತು ಚೀನಾ ತಮ್ಮ ಸೈನ್ಯವನ್ನು ಹಿಂತೆಗೆದುಕೊಳ್ಳಲು ಮತ್ತು ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಗಸ್ತು ತಿರುಗಲು ಹೊಸ ಒಪ್ಪಂದವನ್ನು ಮಾಡಿಕೊಂಡಿವೆ. ಈ ಬಗ್ಗೆ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಮಾತನಾಡಿದ್ದು, 2020ರಲ್ಲಿ ಗಾಲ್ವಾನ್ ಕಣಿವೆ ಘರ್ಷಣೆಗೆ ಮುನ್ನ ಇದ್ದಂತೆ ಪೂರ್ವ ಲಡಾಖ್‌ನಲ್ಲಿ ನೈಜ ನಿಯಂತ್ರಣ ರೇಖೆ (ಎಲ್‌ಎಸಿ) ಉದ್ದಕ್ಕೂ ಗಸ್ತು ವ್ಯವಸ್ಥೆಯನ್ನು ಪುನಃಸ್ಥಾಪಿಸಲು ಪರಸ್ಪರ ಒಪ್ಪಿಗೆ ಇದೆ. ಮೊದಲು ಅವರಿಗೆ ತಮ್ಮನ್ನು ತಾವು ಸಾಬೀತುಪಡಿಸಿಕೊಳ್ಳಲು ಅವಕಾಶ ನೀಡುತ್ತೇವೆ, ಅವರ ಮೇಲೆ ನಂಬಿಕೆ ಬಂದಲ್ಲಿ ಮುಂದಿನ ಹೆಜ್ಜೆ ಇಡಲಾಗುವುದು ಎಂದರು. ಈ ಒಪ್ಪಂದವು ಡೆಪ್ಸಾಂಗ್ ಮತ್ತು ಡೆಮ್ಚೋಕ್ ಪ್ರದೇಶಗಳಿಗೆ ಅನ್ವಯಿಸುತ್ತದೆ ಎಂದಿದ್ದಾರೆ.
ಶೀಘ್ರದಲ್ಲೇ ಎರಡೂ ದೇಶಗಳು ತಮ್ಮ ಸೈನ್ಯವನ್ನು ಹಿಂತೆಗೆದುಕೊಳ್ಳಲು ಪ್ರಾರಂಭಿಸುತ್ತವೆ, ಇದನ್ನು ಮಿಲಿಟರಿ ಪರಿಭಾಷೆಯಲ್ಲಿ ಡಿಎಂಗೇಜ್‌ಮೆಂಟ್ ಎಂದು ಕರೆಯಲಾಗುತ್ತದೆ. ಈ ಕುರಿತು ಸೋಮವಾರ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಮಾಹಿತಿ ನೀಡಿದ್ದರು. ಗಸ್ತು ವ್ಯವಸ್ಥೆಗೆ ಸಂಬಂಧಿಸಿದಂತೆ ಉಭಯ ದೇಶಗಳ ನಡುವಿನ ಒಪ್ಪಂದದಿಂದಾಗಿ 2020 ರಲ್ಲಿ ಪೂರ್ವ ಲಡಾಖ್‌ನಲ್ಲಿ ಉದ್ಭವಿಸಿದ ಉದ್ವಿಗ್ನತೆಯನ್ನು ಕ್ರಮೇಣ ಪರಿಹರಿಸಲಾಗುತ್ತಿದೆ ಎಂದು ಹೇಳಿದ್ದರು. ಉಭಯ ದೇಶಗಳ ನಡುವೆ ಗಡಿಯಲ್ಲಿ ಶಾಂತಿ ಇಲ್ಲದಿದ್ದರೆ ದ್ವಿಪಕ್ಷೀಯ ಸಂಬಂಧ ಹೇಗೆ ಸುಧಾರಿಸುತ್ತದೆ ಎಂದರು.
ಆಗಸ್ಟ್ 29 ರಂದು ಬೀಜಿಂಗ್‌ನಲ್ಲಿ ಚೀನಾ ಮತ್ತು ಭಾರತ ನಡುವಿನ ಗಡಿ ಕುರಿತು ಸಭೆ ನಡೆಯಿತು. ಎಲ್‌ಎಸಿಗೆ ಸಂಬಂಧಿಸಿದಂತೆ ಉಭಯ ದೇಶಗಳ ನಡುವೆ ಆರಂಭವಾದ ವಿವಾದಕ್ಕೆ ಪರಿಹಾರ ಕಂಡುಕೊಳ್ಳಲು ಮತ್ತು ಭಿನ್ನಾಭಿಪ್ರಾಯಗಳನ್ನು ಕೊನೆಗೊಳಿಸಲು ಚರ್ಚೆಗಳು ನಡೆದವು.
ಇದಕ್ಕೂ ಮುನ್ನ ಸೆ.12ರಂದು ಜಿನೀವಾದಲ್ಲಿ ನಡೆದ ಶೃಂಗಸಭೆಯಲ್ಲಿ ಭಾರತ ಮತ್ತು ಚೀನಾ ನಡುವಿನ ಶೇ.75ರಷ್ಟು ವಿವಾದ ಬಗೆಹರಿದಿದೆ ಎಂದು ವಿದೇಶಾಂಗ ಸಚಿವರು ಹೇಳಿದ್ದರು. 2020 ರಲ್ಲಿ ಗಾಲ್ವಾನ್‌ನಲ್ಲಿ ಚೀನಾ ಮತ್ತು ಭಾರತದ ನಡುವೆ ಘರ್ಷಣೆ ನಡೆದಿತ್ತು. ಜೂನ್‌ನಲ್ಲಿ ಗಲ್ವಾನ್‌ನಲ್ಲಿ ನಡೆದ ಈ ಘರ್ಷಣೆಯಲ್ಲಿ 20 ಭಾರತೀಯ ಯೋಧರು ಹುತಾತ್ಮರಾಗಿದ್ದರು.