ಪಾವಗಡ :
ತಾಲ್ಲೂಕಿನ ಗಡಿ ಗ್ರಾಮ ಮುರರಾಯನ ಹಳ್ಳಿಯಲ್ಲಿ ಅವೈಜ್ಞಾನಿಕ ರಸ್ತೆ ತಿರುವಿನಿಂದಾಗಿ ಎರಡು ಬಾರಿ ಗ್ರಾಮದಲ್ಲಿ ಗ್ಯಾಸ್ ಟ್ಯಾಂಕರ್‍ಗಳು ಉರುಳಿಬಿದ್ದಿವೆ. ಹಾಗಾಗಿ ಊರಿನ ಜನರೆಲ್ಲಾ ಗ್ರಾಮವನ್ನು ತೊರೆದು ಭಯಭೀತರಾಗಿ ಯಾವ ಸಮಯದಲ್ಲಿ ಏನು ಅನಾಹುತ ಸಂಭವಿಸುವುದೋ ಎಂಬ ಆತಂಕದಲ್ಲಿ ಬದುಕುತ್ತಿದ್ದೇವೆ. ಆದರೂ ಸಂಬಂಧಿಸಿದ ಲೋಕೋಪಯೋಗಿ ಇಲಾಖೆ, ಸರ್ವೇ ಇಲಾಖೆ ಮತ್ತು ಸಣ್ಣ ನೀರಾವರಿ ಇಲಾಖೆಗಳು ಕಣ್ಣುಮುಚ್ಚಿ ಕುಳಿತಿವೆ ಎಂದು ಆರೋಪಿಸಿ ಮುರರಾಯನಹಳ್ಳಿ ಗ್ರಾಮಸ್ಥರು ಬುಧವಾರ ಗ್ರಾಮದಲ್ಲಿ ಕೆಲಕಾಲ ರಸ್ತೆ ತಡೆ ನಡೆಸಿದರು. ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿ, ನಮ್ಮ ಗ್ರಾಮವನ್ನು ಸೀಮಾಂಧ್ರಕ್ಕೆ ಸೇರಿಸಿ ಎಂದು ಒತ್ತಾಯಿಸಿದ ಘಟನೆ ಜರುಗಿದೆ.
ಸೀಮಾಂಧ್ರದ ಪೆನುಕೊಂಡ ಮತ್ತು ಮಡಕಶಿರಾ ತಾಲ್ಲೂಕುಗಳಿಗೆ ಸಂಪರ್ಕ ಕಲ್ಪಿಸುವ ತಾಲ್ಲೂಕಿನ ದೊಮ್ಮತಮರಿ ಗ್ರಾಪಂಗೆ ಸೇರಿದ ಮುರರಾಯನಹಳ್ಳಿ ಗ್ರಾಮದ ಮೂಲಕ ನಿತ್ಯ ನೂರಾರು ಭಾರಿ ವಾಹನಗಳು ಸಂಚರಿಸುತ್ತಿವೆ. ಸೀಮಾಂಧ್ರದವರೆ ಈ ರಸ್ತೆಯನ್ನು ನಿರ್ಮಾಣ ಮಾಡಿದ್ದು, ಗ್ರಾಮದ ಅಪಘಾತವಾಗುವ ತಿರುವಿನಲ್ಲಿ ಯಾವುದೇ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ. ಈಗಾಗಲೇ 2 ಬಾರಿ ಗ್ಯಾಸ್ ಟ್ಯಾಂಕರ್‍ಗಳು ಹಾಗೂ ಕೆಲವಾಹನಗಳು ಉರುಳಿಬಿದ್ದಿರುವ ಘಟನೆ ಜರುಗಿದೆ.
ಈ ತಿರುವಿನಲ್ಲಿ ಗ್ರಾಮದ ರಾಜಕಾಲುವೆಯ ಮೂಲಕ ಹಾದುಹೋಗುವ ಚರಂಡಿ ನೀರು ಶೇಖರಣೆಯಾಗಿ ಗಬ್ಬುವಾಸನೆ ಬೀರುತ್ತಿದೆ. ಗ್ರಾಮದ ದಲಿತ ಕೇರಿಗೆ ಹಾಗೂ ಸರ್ಕಾರಿ ಶಾಲೆಗೆ ಚರಂಡಿ ನೀರು ಹರಿದು ಕೇರಿಯ ಜನರು ಹಾಗೂ ಶಾಲಾ ಮಕ್ಕಳು ಈ ವಾಸನೆಯಿಂದ ಹೈರಾಣಾಗಿದ್ದಾರೆ.
ಈ ಬಗ್ಗೆ ಗ್ರಾಮದ ಹಿರಿಯ ತಮ್ಮಣ್ಣ ಮಾತನಾಡಿ, ಮೊದಲಿಗೆ ಲೋಕೋಪಯೋಗಿ ಇಲಾಖೆಯಿಂದ ರಸ್ತೆ ಮಾಡಿದ್ದು, ಈ ರಸ್ತೆಯ ಪಕ್ಕದಲ್ಲಿಯೇ ರಾಜಕಾಲುವೆಯಿಂದ ನೀರು ಸರಾಗವಾಗಿ ಹರಿಯದೇ ತಿರುವಿನಲ್ಲಿ ನೀರು ನಿಂತು ಅಪಘಾತಗಳಿಗೆ ಕಾರಣವಾಗಿದೆ ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮಸ್ಥರಿಗೆ ಬೆಂಬಲ ವ್ಯಕ್ತಪಡಿಸಿ ಹೆಲ್ಪ್ ಸೊಸೈಟಿ ಅಧ್ಯಕ್ಷರಾದ ಮಾನಂಶಶಿಕಿರಣ್, ದಲಿತಮುಖಂಡ ನಲಿಗಾನಹಳ್ಳಿ ಮಂಜುನಾಥ್ ಮಾತನಾಡಿ, 2 ಬಾರಿ ಅಪಘಾತವಾದಾಗ ಗ್ರಾಮಕ್ಕೆ ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್, ಜಿಲ್ಲಾ ಎಸ್‍ಪಿ ಡಾ. ಕೋನ ವಂಶಿಕೃಷ್ಣ ಮತ್ತಿತರರು ಭೇಟಿ ನೀಡಿ ಹೋಗಿದ್ದು ಬಿಟ್ಟರೆ, ಯಾವುದೇ ಕ್ರಮ ಕೈಗೊಂಡಿಲ್ಲ. ಗ್ರಾಮಕ್ಕೆ ಅಪಾಯವಾಗುತ್ತಿದೆ ಎಂಬುದನ್ನು ತಿಳಿದಿದ್ದರೂ ಸಹ ತಾಲ್ಲೂಕು ಆಡಳಿತ ಮೌನವಾಗಿದೆ. ಇನ್ನೊಂದು ವಾರದಲ್ಲಿ ಈ ಸಮಸ್ಯೆಗೆ ಪರಿಹಾರ ನೀಡದಿದ್ದ ಪಕ್ಷದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಈ ವೇಳೆ ಗ್ರಾಮಸ್ಥರಾದ ನರಸಿಂಹಮೂರ್ತಿ, ಲಕ್ಷ್ಮಮ್ಮ, ನಂಜಮ್ಮ, ಚಿಕ್ಕಣ್ಣ, ಸುಬ್ರಹ್ಮಣಿ, ಲಕ್ಷ್ಮಾನಾಯ್ಕ, ರಾಮಾಂಜಿನಪ್ಪ, ಇಮಾಮ್ ಸಾಬ್, ನಂಜುಂಡಪ್ಪ, ಹನುಮಂತರಾಯ ಮತ್ತಿತರರಿದ್ದರು.
ಸೀಮಾಂಧ್ರಕ್ಕೆ ಕೇವಲ 1 ಕಿಲೋಮೀಟರ್ ಅಂತರದಲ್ಲಿದೆ ನಮ್ಮ ಗ್ರಾಮ. ಈ ರಸ್ತೆಯಲ್ಲಿ ಕನಿಷ್ಠ ರಸ್ತೆ ಹುಬ್ಬುಗಳನ್ನು ಹಾಕಿ ಎಂದು ಮನವಿ ಮಾಡಿಕೊಂಡರೂ ಪ್ರಯೋಜನವಾಗುತ್ತಿಲ್ಲ. ಮುಖ್ಯವಾಗಿ ರಾಜಕಾಲುವೆಯ ನೀರು ಹರಿದು ತಿರುವುಂಟಾಗಿದೆ. ಸೀಮಾಂಧ್ರದವರಿಗೆ ಹೇಳಿದರೆ ಚರಂಡಿ ನೀರು ತೆಗೆಯಿರಿ, ನಾವು ರಿಪೇರಿ ಮಾಡಿಕೊಡುತ್ತೇವೆ ಎನ್ನುತ್ತಾರೆ. ಲೋಕೋಪಯೋಗಿ ಇಲಾಖೆಗೆ ಕೇಳಿದರೆ, ಈ ರಸ್ತೆ ನಮ್ಮದಲ್ಲ ಎನ್ನುತ್ತಾರೆ. ಆದ್ದರಿಂದ ನಮ್ಮನ್ನು ಸಿಮಾಂಧ್ರಕ್ಕೆ ಸೇರಿಸಿ.
-ಕೃಷ್ಣಪ್ಪ, ಗ್ರಾಮದ ಮುಖಂಡ.