ಪಾವಗಡ :
ತಾಲ್ಲೂಕಿನ 33 ಗ್ರಾಮ ಪಂಚಾಯಿತಿಗಳ ಚುನಾವಣೆಯ ಮತ ಎಣಿಕೆ ಕಾರ್ಯವು ಪಟ್ಟಣದ ಚಳ್ಳಕೆರೆ ಮಾರ್ಗದ ವೈಇಆರ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಜರುಗಿತು.
ಸುಮಾರು 750 ಮತ ಎಣಿಕೆ ಸಿಬ್ಬಂದಿ ಮತ್ತು 100 ಕ್ಕೂ ಅಧಿಕ ಪೊಲೀಸ್ ಹಾಗೂ ಅಗ್ನಿಶಾಮಕ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿತ್ತು, ಒಟ್ಟು 33 ಗ್ರಾಮ ಪಂಚಾಯಿತಿಗಳಲ್ಲಿ 526 ಸ್ಥಾನಗಳ ಪೈಕಿ, 16 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದು, 510 ಸ್ಥಾನಗಳಿಗೆ ಇದೇ 22 ರಂದು ಚುನಾವಣೆ ನಡೆದಿತ್ತು. 1230 ಅಭ್ಯರ್ಥಿಗಳು ಕಣದಲ್ಲಿದ್ದರು, 30 ರಂದು ನಡೆದ ಮತ ಎಣಿಕೆ ಕಾರ್ಯದಲ್ಲಿ ರಾತ್ರಿಯವರೆಗೂ ಸಾಗಿತ್ತು.
ಬಿಗಿ ಪೋಲೀಸ್ ಭದ್ರತೆ :
ಇನ್ನು ಮತ ಎಣಿಕೆ ನಡೆಯುವ ಕಾಲೇಜಿನ ಸುತ್ತಮುತ್ತ ಭಾರಿ ಪೋಲೀಸ್ ಭದ್ರತೆಯನ್ನು ಏರ್ಪಡಿಸಲಾಗಿತ್ತು, ಅಭ್ಯರ್ಥಿ ಪರ ಏಜೆಂಟರಿಗೆ ಮಾತ್ರ ಎಣಿಕೆ ಕೊಠಡಿಗೆ ಪ್ರವೇಶ ನೀಡಲಾಗಿತ್ತು. ಆದರೆ ಮಾಧ್ಯಮದವರನ್ನು ಹೊರಗಿಟ್ಟು ಎಣಿಕೆಯ ಮಾಹಿತಿ ಸಿಗದೆ ಪತ್ರಕರ್ತರು ಪರದಾಡುವಂತಾಯಿತು.
ತಿಂಡಿ-ಊಟ ಇಲ್ಲದೆ ಎಣಿಕೆ ಸಿಬ್ಬಂದಿ ಆಕ್ರೋಶ :
ಗ್ರಾಮ ಪಂಚಾಯ್ತಿ ಮತ ಎಣಿಕೆ ಕಾರ್ಯಕ್ಕೆ ನಿಯೋಜನೆಗೊಂಡ ಸಿಬ್ಬಂದಿಗೆ ಬೆಳಗಿನ ತಿಂಡಿಯೂ ಇಲ್ಲ, ಮಧ್ಯಾಹ್ನದ ಊಟವೂ ಇಲ್ಲದೆ ಮಧುಗಿರಿ ಉಪವಿಭಾಗಾದಿಕಾರಿಗಳ ಸಮ್ಮುಖದಲ್ಲೆ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಬುಧವಾರ ಬೆಳಗ್ಗೆ 8 ರಿಂದಲೆ ಮತ ಎಣಿಕೆ ಕಾರ್ಯ ಆರಂಭವಾದರೂ, ಸುಮಾರು 6 ಗಂಟೆಯಿಂದಲೆ ಕರ್ತವ್ಯಕ್ಕೆ ಹಾಜರಿದ್ದ ನೂರಾರು ಸಿಬ್ಬಂದಿಗೆ ಬೆಳಗಿನ ತಿಂಡಿಯೂ ಸಿಗದೇ ಪರದಾಡುವಂತಾಗಿತ್ತು. ಇದನ್ನು ತಹಸೀಲ್ದಾರ್ ನಾಗರಾಜು ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಮತ ಎಣಿಕೆಯ ಸಿಬ್ಬಂದಿ ತಾಲ್ಲೂಕು ಆಡಳಿತದ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಸಿಟ್ಟಾದರು.
ಹೆಸರು ಹೇಳಲಿಚ್ಛಿಸದ ಮತ ಎಣಿಕೆಯ ಸಿಬ್ಬಂದಿ ಮಾತನಾಡಿ ನಮಗೆ ವಯಸ್ಸಾಗಿದೆ, ಶುಗರ್, ಬಿಪಿ ಇದೆ. ಸಮಯಕ್ಕೆ ಸರಿಯಾಗಿ ತಿಂಡಿ ಊಟವಿಲ್ಲದೆ ಹೋದರೆ ನಮ್ಮ ಗತಿಯೇನು? ಮತ ಎಣಿಕೆ ತಡವಾದರೆ ಅಧಿಕಾರಿಗಳಿಂದ ಒತ್ತಡ, ಇಂತಹ ಕಾಟಾಚಾರದ ತಿಂಡಿ-ಊಟ ವ್ಯವಸ್ಥೆ ಏತಕ್ಕೆ ಮಾಡಬೇಕು? ಇಲ್ಲಿಗೆ ಕರ್ತವ್ಯಕ್ಕೆ ಆಗಮಿಸುವ ಸಿಬ್ಬಂದಿಯ ಬಗ್ಗೆ ನಿಖರವಾದ ಮಾಹಿತಿ ಲಭ್ಯವಿದೆ. ತಿನ್ನುವ ಅನ್ನದಲ್ಲಿ ಉಳಿಸುವುದೆ ಎಂದ ಅವರು, ಮೊನ್ನೆ ನಡೆದ ಚುನಾವಣೆ ತರಬೇತಿ ಸಮಯದಲ್ಲೂ ಕೂಡ ತಿಂಡಿ ಊಟ ನೀಡದೆ ನಮ್ಮನ್ನು ಸಾಯುವ ಪರಿಸ್ಥಿತಿಗೆ ಸಿಲುಕುವಂತೆ ತಹಸೀಲ್ದಾರ್ ಮಾಡಿದ್ದರು. ಮತ್ತೆ ಇಂದು ಕೂಡ ಅದೇ ರೀತಿ ಮಾಡಿದ್ದಾರೆ ಎಂದರೆ ಇದರೆ ಅರ್ಥವೇನು ಎಂದು ತಹಸೀಲ್ದಾರ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳದಲ್ಲೇ ಇದ್ದ ಮಧುಗಿರಿ ಉಪವಿಭಾಗಾಧಿಕಾರಿ ಸೋಮಪ್ಪ ಕಡಕೋಳ ಮತ ಎಣಿಕೆಯ ಸಿಬ್ಬಂದಿಯನ್ನು ಸಮಾಧಾನಪಡಿಸಿ, ಎಲ್ಲಾ ಸಿಬ್ಬಂದಿಗೂ ಊಟದ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದರು.
ಅಡುಗೆಯವರನ್ನು ಮತ್ತು ಫೋಟೋಗಾಫರ್‍ಗಳನ್ನು ಹಾಗೂ ಚುನಾವಣೆಗೆ ಬೇಕಾದ ಇತರೆ ಸಾಮಗ್ರಿಗಳನ್ನು ತುಮಕೂರಿನಿಂದ ಕರೆಯಿಸಿ, ಸ್ಥಳೀಯರನ್ನು ಕಡೆಗಣಿಸಿದ್ದಾರೆ ಎಂದು ಸಾರ್ವಜನಿಕರು ತಹಸೀಲ್ದಾರ್ ಕೆ. ಆರ್. ನಾಗರಾಜ್ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ