ಪಾವಗಡ :
ರಾಮಕೃಷ್ಣಾಶ್ರಮದಿಂದ ಇಲ್ಲಿ ಪ್ರತಿ ದಿನ ಕೊರೆಯುವ ಚಳಿಯಲ್ಲಿ ಹೊಟ್ಟೆ ಪಾಡಿಗಾಗಿ ಬೀದಿ ಬೀದಿಯನ್ನು ಸುತ್ತುತ್ತಾ ಹೂವಿನ ವ್ಯಾಪಾರವನ್ನು ಮಾಡುತ್ತಾ ಇರುವ ಸರಿಸುಮಾರು 70 ಜನರಿಗೆ ಕಂಬಳಿ, ಸೋಪು, ಮುಖಗವಸುಗಳನ್ನು ನೀಡಲಾಯಿತು.
ಮುಂಜಾನೆಯೇ ಅನೇಕ ವೃದ್ಧ ಮಹಿಳೆಯರು, ಪುರುಷರು ಹಾಗೂ ಮಕ್ಕಳಾದಿಯಾಗಿ ಶ್ರೀರಾಮಕೃಷ್ಣ ಸೇವಾಶ್ರಮದ ಪ್ರಾಂಗಣದಲ್ಲಿ ಕೊರೆಯುವ ಚಳಿಯಲ್ಲಿ ಸಾಲುಗಟ್ಟಿ ನಿಂತಿದ್ದರು. ಕಾರಣ ಶ್ರೀರಕ್ಷೆ ಯೋಜನೆಯಡಿಯಲ್ಲಿ ಶ್ರೀರಾಮಕೃಷ್ಣ ಸೇವಾಶ್ರಮ ಮತ್ತು ಇನ್ಫೋಸಿಸ್ ಫೌಂಡೇಷನ್, ಸಮರ್ಪಣ ಮತ್ತು ವಿವೇಕ-ಬ್ರಿಗೇಡ್ ರವರು ಟೊಂಕ ಕಟ್ಟಿ ಈ ಸೇವೆಗೋಸ್ಕರ ಎಲ್ಲ ರೀತಿಯಲ್ಲಿ ಅಣಿಮಾಡಿಕೊಂಡಿದ್ದು ಕಂಡು ಬಂದಿತು. ಪ್ರತಿಯೊಬ್ಬರಿಗೂ ಸ್ಯಾನಿಟೈಸರ್ ನೀಡಿ ತದನಂತರ ಮಾಸ್ಕ್ ನೀಡಿ ಜೊತೆಯಲ್ಲಿಯೇ ಶುಚಿತ್ವವನ್ನು ಕಾಪಾಡಿಕೊಳ್ಳಲು ಸೋಪು ನೀಡಲಾಯಿತು. ಇದೇ ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ ಉಪಾಹಾರದ ಪೊಟ್ಟಣಗಳನ್ನು ಹಂಚಲಾಯಿತು.
ಈ ಯೋಜನೆ ಹೂವು ಮಾರುವವರ ಮುಖದಲ್ಲಿ ಮಂದಹಾಸ ಮೂಡಿಸಿ, ಎಂತಹ ಕ್ಲಿಷ್ಟ ಸಮಯದಲ್ಲಿಯೂ ಶ್ರೀರಾಮಕೃಷ್ಣ ಸೇವಾಶ್ರಮ ಜೊತೆಯಲ್ಲಿರುತ್ತದೆ ಎಂಬ ಆತ್ಮವಿಶ್ವಾಸವನ್ನು ಅವರಲ್ಲಿ ತುಂಬಿತ್ತು.
ಅನೇಕ ವೃದ್ಧ ಮಹಿಳೆಯರು ಸ್ವಾಮೀಜಿಯವರನ್ನು ಮನಸಾ ಹರಸಿ ತಮ್ಮ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದುದು ನೋಡುಗರ ಎದೆಯನ್ನು ಭಾರವಾಗಿಸಿತ್ತು. ಈ ಸಂದರ್ಭದಲ್ಲಿ ಜಪಾನಂದಜಿಯವರ ಜೊತೆ ಸರ್ಕಾರಿ ಸಹಾಯಕ ಅಭಿಯೋಜಕ ವಿ.ಮಂಜುನಾಥ್, ಚಿನ್ಮಯ ಸಂಸ್ಥೆಯ ಅಧ್ಯಕ್ಷ ಲೋಕೇಶ್ ಮತ್ತು ಆಶ್ರಮದ ಆಡಳಿತಾಧಿಕಾರಿ ಶ್ರೀಮತಿ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
