ಪಾವಗಡ :
ಪ್ರತಿ ತಿಂಗಳು ತಾಪಂ ಸಭಾಂಗಣದಲ್ಲಿ ನಡೆಯುವ ಕೆಡಿಪಿ ಸಭೆಯ ಬಗ್ಗೆ ಸೂಚನೆ ನೀಡಿದರೂ, ಸಭೆಗೆ ಹಾಜರಾಗದ ಅಧಿಕಾರಿ ವರ್ಗದ ಧೋರಣೆಯ ಬಗ್ಗೆ ಹಾಗೂ ತಡವಾಗಿ ಆಗಮಿಸಿದ ಅಧಿಕಾರಿಗಳನ್ನು ಶಾಸಕ ವೆಂಕಟರವಣಪ್ಪ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಶುಕ್ರವಾರ ಶಾಸಕರ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ ನಡೆಯುವಾಗ ತಡವಾಗಿ ಆಗಮಿಸಿದ ತಹಸೀಲ್ದಾರ್ ಕೆ.ಆರ್.ನಾಗರಾಜು, ಸಿಪಿಐ ನಾಗರಾಜು ಇಬ್ಬರನ್ನು ಶಾಸಕರು ತರಾಟೆಗೆ ತೆಗೆದುಕೊಂಡು, ಸಭೆಯ ಬಗ್ಗೆ ಎಷ್ಟು ನಿರ್ಲಕ್ಷ್ಯ ಇದೆ ನಿಮ್ಮಲ್ಲಿ ಎಂದು ಪ್ರಶ್ನಿಸಿ, ಸಭೆಗೆ ಸೂಕ್ತ ಮಾಹಿತಿಯೊಂದಿಗೆ ಪ್ರತಿ ತಿಂಗಳು ಕಡ್ಡಾಯವಾಗಿ ಹಾಜಾರಾಗುವಂತೆ ಸೂಚಿಸಿದರು.
ಶಿಕ್ಷಣಾಧಿಕಾರಿ ಸಿದ್ದಗಂಗಯ್ಯ ಮಾತನಾಡಿ, 6 ರಿಂದ 10 ರವರೆಗೂ ವಿದ್ಯಾಗಮ ಆರಂಭವಾಗಿದ್ದು, 1 ರಿಂದ 5 ರವರೆಗೂ ಶಾಲೆ ಆರಂಭವಾಗಿಲ್ಲ. 705 ಗಂಡು, 1568 ಹೆಣ್ಣು ಮಕ್ಕಳಿಗೆ ಸಮವಸ್ತ್ರದ ಕೊರತೆ ಇದ್ದು, 233 ಪ್ರಾಥಮಿಕ ಶಿಕ್ಷಕರ ಹುದ್ದೆ ಖಾಲಿ ಇವೆ ಎಂದು ತಿಳಿಸಿದರು.
ತಾಲ್ಲೂಕು ಬಿಸಿಯೂಟ ಯೋಜನಾಧಿಕಾರಿ ಹನುಮಂತರಾಯಪ್ಪ ಮಾತನಾಡಿ ಶಾಲೆಗಳು ಇಂದಿಗೂ ಆರಂಭವಾಗದ ಹಿನ್ನೆಲೆಯಲ್ಲಿ 19,727 ಮಕ್ಕಳಿಗೆ ಪ್ರತಿ ತಿಂಗಳು ಆಹಾರ ಪದಾರ್ಥಗಳನ್ನು ಮನೆಗೆ ಪೂರೈಕೆ ಮಾಡಲಾಗುತ್ತಿದೆ ಎಂದರು.
ಸಿಡಿಪಿಒ ಇಲಾಖೆಯ ನಾರಾಯಣರವರು ಮಾತನಾಡಿ, ಅಂಗನಾಡಿ ಕೇಂದ್ರಗಳು ಕೂಡ ಆರಂಭವಾಗದ ಹಿನ್ನೆಲೆಯಲ್ಲಿ ಮಕ್ಕಳಿಗೆ, ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ಮನೆಗಳಿಗೆ ಆಹಾರ ಪೂರೈಕೆ ಮಾಡಲಾಗುತ್ತಿದೆ ಎಂದು ಸಭೆಗೆ ತಿಳಿಸಿದರು. ಆಗ ತಕ್ಷಣ ವೈ.ಎನ್.ಹೊಸಕೋಟೆ ಜಿಪಂ ಸದಸ್ಯೆ ಗೌರಮ್ಮ, ಅಂಗನವಾಡಿಗಳಲ್ಲಿ ಸರಿಯಾಗಿ ಆಹಾರ ಪೂರೈಕೆ ಮಾಡುತ್ತಿಲ್ಲ, ತೂಕದಲ್ಲಿ ಬಹಳಷ್ಠು ಲೋಪ ಕಾಣುತ್ತಿದ್ದರೂ ಇಲಾಖೆ ಜಾಣ ಮೌನಕ್ಕೆ ಜಾರಿದೆ ಎಂದು ಆರೋಪಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಶ್ರೀನಿವಾಸ ಮಾತನಾಡಿ, 13 ವಸತಿ ಶಾಲೆಗಳಲ್ಲಿ 357 ವಿದ್ಯಾರ್ಥಿಗಳು ಹಾಜರಿದ್ದು, ಪ್ರಧಾನ ಮಂತ್ರಿ ಆದರ್ಶ ಯೋಜನೆಯಲ್ಲಿ 8 ಗ್ರಾಮಗಳು ಆಯ್ಕೆಯಾಗಿದ್ದು, ಪ್ರತಿ ಗ್ರಾಮಕ್ಕೆ 40 ಲಕ್ಷ ಅನುದಾನ ಸಿಗಲಿದೆ ಎಂದರು.
ಕೃಷಿ ಇಲಾಖೆ ವತಿಯಿಂದ ಈ ಬಾರಿ ಬೆಳೆ ಸಮೀಕ್ಷೆ ನೂರರಷ್ಟು ಆಗಿದ್ದು, 810 ಕೃಷಿಹೊಂಡ ಹಾಗೂ 110 ಬದು ನಿರ್ಮಾಣಗಳಾಗಿವೆ. ತೋಟಗಾರಿಕೆ ಇಲಾಖೆ ವತಿಯಿಂದ 5.97 ಕೋಟಿ ರೂ. ಹನಿ ನೀರಾವರಿಗೆ ಅನುದಾನ ಬಂದಿದ್ದು, ಇಲಾಖೆಯಿಂದ 290 ನರೇಗಾ ಕಾರ್ಯಕ್ರಮಗಳ ಬಗ್ಗೆ ಸಭೆಗೆ ತಿಳಿಸಿದರು. ಮೀನುಗಾರಿಕೆ ಇಲಾಖೆಯ ಕಾವ್ಯ ಮಾತನಾಡಿ, ಸಿಕೆ.ಪುರ ಹಾಗೂ ಹರಿಹರಪುರ ಕೆರೆಗಳ ಮೀನು ಮಾರಾಟಕ್ಕೆ ಹರಾಜಾಗಿದ್ದು, ಉಳಿದ 33 ಕೆರೆಗಳಲ್ಲಿ 25 ಕೆರೆಗಳಲ್ಲಿ ನೀರಿಲ್ಲ ಎಂದು ಸಭೆಗೆ ತಿಳಿಸಿದರು.
ಭೂಸೇನೆ ವತಿಯಿಂದ ಗ್ರಾಮ ವಿಕಾಸದಲ್ಲಿ 5 ಗ್ರಾಮಗಳ ಕಾಮಗಾರಿ ಮುಗಿದಿದ್ದು, ಮುಖ್ಯಮಂತ್ರಿ ಮಾದರಿ ಗ್ರಾಮದಲ್ಲಿ 2 ಗ್ರಾಮಗಳ ಕಾಮಗಾರಿ ಪೂರ್ಣಗೊಂಡಿದೆ. ಸಣ್ಣ ನೀರಾವರಿ ಇಲಾಕೆಯ ವತಿಯಿಂದ ಕೊರೆದಿದ್ದ 175 ಕೊಳವೆ ಬಾವಿಗಳಿಗೆ ಈ ತಿಂಗಳಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸುವ ಬಗ್ಗೆ ಸಭೆಗೆ ಸೂಚಿಸಿದರು.
ಸಭೆಯಲ್ಲಿ ಅಂಬೇಡ್ಕರ್ ನಿಗಮದ ತಿಮ್ಮರಾಯಪ್ಪ, ಎಪಿಎಂಸಿ ನಾಗರಾಜು, ರೇಷ್ಮೆ ಇಲಾಖೆ, ಪರಿಶಿಷ್ಟ ಪಂಗಡಗಳ ಇಲಾಖೆ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಸಭೆಗೆ ಸೂಕ್ತ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಶಾಸಕರು ಖಾರವಾಗಿ ತರಾಟೆಗೆ ತೆಗೆದುಕೊಂಡು, ಸಭೆಯಿಂದ ಹೊರ ನಡೆಯುವಂತೆ ಸೂಚಿಸಿದ ಘಟನೆಯೂ ಕೂಡ ನಡೆಯಿತು.
ಸಭೆಯಲ್ಲಿ ತಾಪಂ ಅಧ್ಯಕ್ಷೆ ಮಾಳಮ್ಮ ಸುಬ್ಬರಾಯಪ್ಪ, ತಹಸೀಲ್ದಾರ್ ಕೆ.ಆರ್.ನಾಗರಾಜು, ತಾಪಂ ಉಪಾಧ್ಯಕ್ಷ ನಾಗರಾಜು, ಸ್ಥಾಯಿ ಸಮಿತಿ ಅಧ್ಯಕ್ಷೆ ಶಿವಮ್ಮ, ಜಿಪಂ ಸದಸ್ಯರಾದ ಗೌರಮ್ಮ ತಿಮ್ಮಯ್ಯ, ಪಾಪಣ್ಣ, ಇಓ ನರಸಿಂಹಮೂರ್ತಿ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
