ಪಾವಗಡ :
ವಿಚಿತ್ರ ಕಾಯಿಲೆಯಿಂದ ಕುರಿಮರಿಗಳು ಸಾವನ್ನಪ್ಪಿದ್ದು, ಇಲಾಖೆಯು ಸೂಕ್ತ ಮಾರ್ಗದರ್ಶನ ಮತ್ತು ಚಿಕಿತ್ಸೆ ಕೊಡಲು ವಿಫಲವಾಗಿದೆ ಎಂದು ಆರೋಪಿಸಿ ಉಪ್ಪಾರಹಳ್ಳಿ ಗ್ರಾಮದ ಬಾಧಿತ ರೈತರುಗಳು ಪಟ್ಟಣದ ಪಶುಆಸ್ಪತ್ರೆಯ ಬಳಿ ಸತ್ತ ಕುರಿಮರಿಗಳ ಶವ ಇಟ್ಟು, ಸೋಮವಾರ ಪ್ರತಿಭಟನೆ ನಡೆಸಿದ ಘಟನೆ ಜರುಗಿದೆ.
ಉಪ್ಪಾರಹಳ್ಳಿ ಬಾಧಿತ ರೈತ ಭೀಮಾನಾಯ್ಕ ಮಾತನಾಡಿ, ಕಳೆದ ವಾರದಿಂದ ನನ್ನ ಸುಮಾರು 50 ಕುರಿಮರಿಗಳು ಸತ್ತಿವೆ. ಪಶು ಆಸ್ಪತ್ರೆಗೆ ಬಂದು ವೈದ್ಯರಾದ ಸಿದ್ದಲಿಂಗಯ್ಯನವರನ್ನು ಭೇಟಿ ಮಾಡಿ ಕುರಿಮರಿಗಳು ಸಾಯುತ್ತಿರುವ ಬಗ್ಗೆ ಮಾಹಿತಿ ನೀಡಿದರೂ ಸಹ ಅವರು ಉದಾಸೀನ ತೋರಿದ್ದು, ಚಿಕಿತ್ಸೆಯಾಗಲಿ, ಯಾವುದೇ ರೀತಿಯಾದ ಮಾತ್ರೆಗಳನ್ನಾಗಲಿ ಕೊಟ್ಟಿಲ್ಲ. ಕುರಿಮರಿಗಳನ್ನು ಶಿರಾ ಲ್ಯಾಬ್‍ಗೆ ಕಳುಹಿಸಿ ಎಂದು ತಿರಸ್ಕಾರದಿಂದ ತಿಳಿಸಿದ್ದು, ನಾನು ಸಾಲ ಮಾಡಿ, ಕುರಿಮರಿಗಳನ್ನು ಸಾಕಿದ್ದು, ವಿಮೆಯನ್ನೂ ಸಹ ಮಾಡಿಸಿಲ್ಲ. ನನಗೆ ಆತ್ಮಹತ್ಯೆ ಒಂದೆ ದಾರಿಯಾಗಿದೆ ಎಂದು ವೇದನೆ ವ್ಯಕ್ತಪಡಿಸಿದರು.
ಉಪ್ಪಾರಹಳ್ಳಿ ಗ್ರಾಮದ ಸೇವಾಲಾಲ್ ಯುವಕ ಸಂಘದ ಡಿ.ಕೇಶವನಾಯ್ಕ ಮಾತನಾಡಿ, ಪಾವಗಡ ಪಶು ಆಸ್ಪತ್ರೆಯಲ್ಲಿ ವೈದ್ಯರೆ ಇರುವುದಿಲ್ಲ. ಡಿ ಗ್ರೂಪ್ ನೌಕರರು ಮಾತ್ರ ಇರುತ್ತಾರೆ. ಕಳೆದ ವಾರದಿಂದ ನಮ್ಮ ಗ್ರಾಮದ ಸುಮಾರು ಐದಾರು ರೈತರುಗಳಿಗೆ ಸೇರಿದ 1 ಸಾವಿರ ಕುರಿ ಹಾಗೂ ಕುರಿಮರಿಗಳು ಸಾವನ್ನಪ್ಪಿವೆ. ಪಶು ಆಸ್ಪತ್ರೆಯ ಯಾವುದೇ ಸಿಬ್ಬಂದಿ ಗ್ರಾಮಕ್ಕೆ ಇದುವರೆಗೂ ಭೇಟಿ ನೀಡಿಲ್ಲ. ಆದರೆ ಆಸ್ಪತ್ರೆಯಲ್ಲಿ ಯಾವಾಗ ಬಂದರೂ ಡಿ ಗ್ರೂಪ್ ನೌಕರ ಮಾತ್ರ ಇದ್ದು, ಅವರಿಗೆ ಲಂಚ ಕೊಟ್ಟರೆ ಔಷಧಿ ನೀಡುತ್ತಾರೆ ಎಂದು ದೂರಿದರು.
ಮಳೆ- ಬೆಳೆ ಇಲ್ಲದೆ ತಾಲ್ಲೂಕಿನ ರೈತರು ಕಂಗಾಲಾಗಿದ್ದು, ಹೈನುಗಾರಿಕೆಯಿಂದ ಕುರಿ-ಮೇಕೆ ಸಾಕಾಣಿಕೆಯಿಂದ ಜೀವನವನ್ನು ಸುಧಾರಿಸಲು ಪ್ರಯತ್ನ ಪಡುತ್ತಿರುವ ಸಮಯದಲ್ಲಿ, ವಿಚಿತ್ರ ಕಾಯಿಲೆಯಿಂದ ಕುರಿಮರಿಗಳು ಸಾವನ್ನಪ್ಪ್ಪುತ್ತಿರುವುದರಿಂದ ತಾಲ್ಲೂಕಿನ ಕುರಿ ಸಾಕಾಣಿಕೆದಾರರು ಕಂಗಾಲಾಗಿದ್ದಾರೆ. ಕೂಡಲೆ ಕುರಿಮರಿಗಳ ಸಾವಿಗೆ ಕಾರಣವೇನು ಎಂಬುದನ್ನು ಪತ್ತೆ ಹಚ್ಚಬೇಕು ಎಂದು ರಾಷ್ಟ್ರೀಯ ಕಿಸಾನ್ ಸಂಘದ ತಾಲ್ಲೂಕು ಅಧ್ಯಕ್ಷ ವಿ. ಕೃಷ್ಣರಾವ್ ಒತ್ತಾಯಿಸಿದ್ದಾರೆ.
ಈ ವೇಳೆ ಪಶು ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸಿದ್ದಲಿಂಗಯ್ಯ ಹಾಜರಿರಲಿಲ್ಲ. ಸ್ಥಳಕ್ಕೆ ಪಶು ಆಸ್ಪತ್ರೆಯ ಇನ್‍ಸ್ಪೆಕ್ಟರ್ ಅಂಜಿನಮ್ಮ ಮಾತನಾಡಿ, ಈ ಕುರಿಗಳಿಗೆ ವ್ಯಾಕ್ಸಿನ್ ಹಾಕಲಾಗುತ್ತಿದೆ. ಕಾಯಿಲೆ ಬರುವ ಮೊದಲಿಗೆ ವ್ಯಾಕ್ಸಿನ್ ಹಾಕಬೇಕು. ಕೆಲ ರೈತರು ಕಾಯಿಲೆ ಬಂದಾಗ ವ್ಯಾಕ್ಸಿನ್ ಹಾಕಿಸುತ್ತಿದ್ದಾರೆ. ಉಪ್ಪಾರಹಳ್ಳಿ ಗ್ರಾಮಕ್ಕೆ ಹೋಗಿ ನೋಡಲಾಗುವುದು ಎಂದು ತಿಳಿಸಿದರು.
ಈ ವೇಳೆ ಗ್ರಾಮದ ಪೂಜಾರಪ್ಪ, ಗೋವಿಂದನಾಯ್ಕ, ಭೀಮಾನಾಯ್ಕ, ಜಗದೀಶ್, ಕೇಶವ್ ನಾಯ್ಕ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ