ಪಾವಗಡ :
ಕುರಿ ಸಾಕಾಣಿಕೆದಾರರು ಮರಿಗಳನ್ನು ಶುದ್ದವಾದ ವಾತಾವರಣ ಇರುವ ಸ್ಥಳಗಳಲ್ಲಿ ಸಾಕಬೇಕು ಎಂದು ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಜಿಲ್ಲಾ ಸಹಾಯಕ ನಿರ್ದೇಶಕ ಡಾ.ನಾಗಣ್ಣ ತಿಳಿಸಿದರು.
ಪಾವಗಡ ತಾಲ್ಲೂಕು ಉಪ್ಪಾರಹಳ್ಳಿಯಲ್ಲಿ ಫೆ.16 ರಂದು ಭೀಮಾನಾಯ್ಕ್ ರವರಿಗೆ ಸೇರಿರುವ ಕುರಿ ಮರಿಗಳು ವಿಚಿತ್ರ ಜ್ವರಕ್ಕೆ ಸಾವನ್ನಪಿದ್ದವು ಎಂದು ಪ್ರಗತಿಯಲ್ಲಿ ಪ್ರಕಟಗೊಂಡ ವರದಿಯ ಆಧಾರದ ಮೇರೆಗೆ ಬುಧವಾರ ನಿರ್ದೇಶಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಆಗ ಮಾತನಾಡಿದ ಅವರು ಕುರಿ ಸಾಕಾಣಿಕೆ ಮಾಡುವ ರೈತರು ಶುದ್ದವಾದ ನೀರು ಕುಡಿಸಬೇಕು. ಮಣ್ಣು ಇಲ್ಲದ ಜಾಗದಲ್ಲಿ ಮರಿಗಳನ್ನು ಸಾಕಾಣಿಕೆ ಮಾಡಬೇಕು. ಮರಿಗಳು ಮಣ್ಣು ತಿನ್ನುವುದರಿಂದ ಅನಾರೋಗ್ಯವಾಗಿ ನಿಮೋನಿಯಾ ಕಾಯಿಲೆಗೆ ಸಾವನ್ನಪ್ಪುತ್ತವೆ ಎಂದು ತಿಳಿಸಿದರು.
ಕುರಿಗಳು ಮತ್ತು ಮರಿಗಳು ರೋಗಕ್ಕೆ ತುತ್ತಾದಾಗ ಕ್ರಮಬದ್ದವಾಗಿ ವ್ಯಾಕ್ಸಿನ್ ಹಾಕಿಸಿ, ಟಾನಿಕ್ ಕುಡಿಸಬೇಕು. ಪಶುವೈದ್ಯರ ಸಲಹೆಯಂತೆ ಮರಿಗೆ ಎಷ್ಟು, ಕುರಿಗೆ ಎಷ್ಟು ಔಷದಿ ಬಳಸಬೇಕು ಎಂಬುವುದನ್ನು ತಿಳಿದು ಕುರಿ ಸಾಕಾಣಿಕೆದಾರರು ತಿಳಿದುಕೊಳ್ಳಬೇಕು ಎಂದರು.
ಗ್ರಾ.ಪಂ.ನಿಂದ ಕುರಿ ಸಾಕಾಣಿಕೆಯ ಕೊಟ್ಟಿಗೆಗೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ 68 ಸಾವಿರ ರೂ. ವೆಚ್ಚದಲ್ಲಿ ಮೇಕೆ ಮತ್ತು ಕುರಿ ದೊಡ್ಡಿ ನಿರ್ಮಾಣ ಮಾಡಿಕೊಳ್ಳಲು ಅವಕಾಶ ಇದೆ. ಈ ಯೋಜನೆ ಮೂಲಕ ಕುರಿ ಕೊಟ್ಟಿಗೆಯನ್ನು ನಿರ್ಮಾಣ ಮಾಡಿಕೊಂಡು ಕುರಿಗಳು ರೋಗಕ್ಕೆ ತುತ್ತಾಗದಂತೆ ನೋಡಿಕೊಳ್ಳಬಹುದು. ಈ ಹಿಂದೆ ಸರ್ಕಾರ ಕುರಿಗಳು ಸಾವನ್ನಪ್ಪಿದರೆ 5 ಸಾವಿರ, ಮರಿಗಳು ಸತ್ತರೆ 2500 ರೂ.ಗಳು ಸಹಾಯ ಧನ ನೀಡುತ್ತಿದ್ದರು. ಒಂದು ವರ್ಷದಿಂದ ಯೋಜನೆ ನಿಲ್ಲಿಸಿದ್ದಾರೆ. ಇದರ ಸೌಲಭ್ಯವನ್ನು ಮತ್ತೆ ರೈತರಿಗೆ ನೀಡಬೇಕೆಂದು ಮುಂದೆ ಬರುವ ಬಜೆಟ್‍ನಲ್ಲಿ ಮುಂದುವರಿಸಲು ಸಂಘ ಸಂಸ್ಥೆಗಳಿಂದ ಮತ್ತು ನಾವು ಒತ್ತಾಯಿಸಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾ.ಪಂ.ಸದಸ್ಯ ಮಂಜುಳದೇವಾನಾಯ್ಕ್, ಪಶು ಸಹಾಯಕ ನಿರ್ದೇಶಕ ಡಾ.ಸಿದ್ದಗಂಗಯ್ಯ, ಗ್ರಾ.ಪಂ. ಶ್ರೀನಿವಾಸ್‍ನಾಯ್ಕ್, ರೈತ ಭೀಮಾನಾಯ್ಕ್ ಕುರಿ ಸಾಕಾಣಿಕೆದಾರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ