ಪಾವಗಡ :
ಬರದ ನಾಡಾದ ಪಾವಗಡ ತಾಲ್ಲೂಕಿನಲ್ಲಿ ಭರವಸೆಯ ಹೆಜ್ಜೆ ಎಂಬ ಘೋಷವಾಕ್ಯದೊಂದಿಗೆ ಸಿಪಿಐ ಪಕ್ಷದಿಂದ ಕಾಲ್ನಡಿಗೆ ಜಾಥಾದ ಮೂಲಕ ಸೋಮವಾರ ಪಟ್ಟಣದ ತಹಸೀಲ್ದಾರ್ ಕಛೇರಿಗೆ ಮುತ್ತಿಗೆ ಹಾಕಿ ರಾಜ್ಯ ಸರ್ಕಾರಕ್ಕೆ ತಹಸೀಲ್ದಾರ್ ಕೆ. ಆರ್. ನಾಗರಾಜ್ ಮೂಲಕ ಮನವಿ ಪತ್ರ ಸಲ್ಲಿಸಲಾಯಿತು.
ಈ ವೇಳೆ ರಾಜ್ಯ ಸಿಪಿಐ ಕಾರ್ಯದರ್ಶಿ ಸಾತಿಸುಂದರೇಶ್ ಮಾತನಾಡಿ, ಪಾವಗಡ ತಾಲ್ಲೂಕಿನಲ್ಲಿ ಉದ್ಯೋಗ ಸೃಷ್ಟಿಯಾಗದೆ ಶೇ. 50 ರಷ್ಟು ಮಂದಿ ವಲಸೆ ಹೋಗಿದ್ದಾರೆ. ಕುಡಿಯುವ ನೀರು, ರಸ್ತೆ, ಸುಸಜ್ಜಿತ ಆಸ್ಪತ್ರೆ ಮತ್ತಿತರ ಸಮಸ್ಯೆಗಳು ಬಾಧಿಸುತ್ತಿವೆ. ತಾಲ್ಲೂಕಿನ ಸೇವಾಲಾಲ್ ಪುರದ ತಾಂಡಾದಲ್ಲಿ ಸುಮಾರು 50 ವರ್ಷಗಳಿಂದ ಸಾಗುವಳಿ ಮಾಡಿದ ಭೂಮಿಯನ್ನು ಕರೋನಾ ಸಮಯದಲ್ಲಿ ಅರಣ್ಯ ಇಲಾಖೆ ವಶಪಡಿಸಿಕೊಂಡಿದೆ. ಈ ಬಗ್ಗೆ ಕಂದಾಯ ಇಲಾಖೆ, ಅರಣ್ಯ ಇಲಾಖಾಧಿಕಾರಿಗಳು ಸಭೆ ನಡೆಸಿ ನ್ಯಾಯ ಒದಗಿಸಿಕೊಡಬೇಕು. ಪಾವಗಡ ತಾಲ್ಲೂಕಿನ ಜ್ವಲಂತ ಸಮಸ್ಯೆಗಳನ್ನು ಕೂಡಲೆ ಪರಿಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸಹ ಕಾರ್ಯದರ್ಶಿ ಕೆ.ಎಸ್. ಜನಾರ್ಧನ್ ಮಾತನಾಡಿ, ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆಯಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರ ಜಮೀನುಗಳಲ್ಲಿ ಕಾಮಗಾರಿ ಮಾಡಲು ಅನುವು ಮಾಡಿಕೊಡಬೇಕು. ತಾಲ್ಲೂಕಿನ ಮಹಿಳೆಯರು ಸ್ವಂತ ಉದ್ಯೋಗ ಆರಂಭಿಸಲು ಕೌಶಲ್ಯಾಧಾರಿತ ತರಬೇತಿಯನ್ನು ನೀಡಿ, ಕೇರಳ ರಾಜ್ಯದ ಮಾದರಿಯ ಕುಟುಂಬಶ್ರೀ ಯೋಜನೆಯಂತೆ ತಯಾರಿಸಿದ ಉತ್ಪನ್ನಗಳಿಗೆ ಸರ್ಕಾರದಿಂದ ಮಾರುಕಟ್ಟೆ ಸೌಲಭ್ಯ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಸಿ.ಪಿ.ಐ. ಕಾರ್ಯದರ್ಶಿ ಗಿರೀಶ್ ಮಾತನಾಡಿ, ಪಾವಗಡ ನಗರದಲ್ಲಿ ಅಂಬೇಡ್ಕರ್ ಹೆಸರಿನಲ್ಲಿ ಸುಸಜ್ಜಿತವಾದ ಗ್ರಂಥಾಲಯ ಸ್ಥಾಪನೆಯಾಗಬೇಕು. ಸರ್ಕಾರಿ ನರ್ಸಿಂಗ್, ಪಾಲಿಟೆಕ್ನಿಕ್ ಕಾಲೇಜು ಆರಂಭಿಸಬೇಕು. ತಾಲ್ಲೂಕನ್ನು ಪ್ರವಾಸೋದ್ಯಮ ಇಲಾಖೆಯಿಂದ ಅಭಿವೃದ್ದಿ ಪಡಿಸಬೇಕು. ತಾಲ್ಲೂಕಿನ ಎಸ್.ಸಿ. ಮತ್ತು ಎಸ್.ಟಿ. ಯುವಕ-ಯುವತಿಯರಿಗೆ ಬ್ಯಾಕ್ ಲಾಗ್ ಹುದ್ದೆಗಳಲ್ಲಿ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದರು.
ತಹಸೀಲ್ದಾರ್ ಕೆ. ಆರ್. ನಾಗರಾಜ್ ಗೆ ಮನವಿ ಪತ್ರ ಸಲ್ಲಿಸಲಾಯಿತು. ಮುತ್ತಿಗೆಯಲ್ಲಿ ಆಂಧ್ರ್ರದ ಕಂಬದೂರು ಮಂಡಲ್‍ನ ಪ್ರಜಾ ನಾಟ್ಯ ಮಂಡಲಿಯ ಕಲಾವಿದರು ಹೋರಾಟದ ಹಾಡುಗಳನ್ನು ಹಾಡಿದರು.
ಮುತ್ತಿಗೆಯಲ್ಲಿ ಸಿ.ಪಿ.ಐ. ಮುಖಂಡರಾದ ರಾಮಕೃಷ್ಣ, ಈರದಾಸಣ್ಣ, ಸುಭಾಷ್, ರಮೇಶ್, ಪುರುಷೋತ್ತಮ್, ಅಶ್ವಿನಿ, ಬಿ.ಸಿ. ಅಂಜಿನಪ್ಪ, ನಾಗರಾಜನಾಯಕ ಮತ್ತಿತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ