ಪಾವಗಡ : ಹನಿ ನೀರಾವರಿಯಲ್ಲಿ ಭಾರೀ ಅವ್ಯವಹಾರ

ಪಾವಗಡ : 

      ತೋಟಗಾರಿಕೆ ಇಲಾಖೆಯಿಂದ ಸಿಗುವ ಸಹಾಯ ಧನ ರಾಜಕಾರಣಿಗಳ ಹಿಂಬಾಲಕರಿಗೆ ಬಿಟ್ಟರೆ ಸಾಮಾನ್ಯ ರೈತರಿಗೆ ಸಿಗುತ್ತಿಲ್ಲ ಎಂಬ ಮಾಹಿತಿ ಕೃಷಿ ಇಲಾಖೆಯ ದಾಖಲೆಯಿಂದ ತಿಳಿದು ಬಂದಿದೆ.

      ಕೇಂದ್ರ ಮತ್ತು ರಾಜ್ಯ ಸರ್ಕಾರದ ಆರ್.ಕೆ.ವಿ.ವೈ ಯೋಜನೆಯಡಿ ಯಲ್ಲಿ ತಾಲ್ಲೂಕಿಗೆ 9 ಕೃಷಿ ಹೊಂಡ ಮಂಜೂರಾಗಿ, 30ಲಕ್ಷ ರೂ. ಬಿಡುಗಡೆಯಾಗಿತ್ತು. ಈ ಯೋಜನೆಯ ಫಲಾನುಭವಿಗಳಲ್ಲಿ ಸಾಮಾನ್ಯ ರೈತ ಯಾರು ಕಂಡು ಬಂದಿಲ್ಲ. ರಾಜಕೀಯ ಪಕ್ಷಗಳ ಕಾರ್ಯಕರ್ತರು ಮತ್ತು ಕಿಲಾಡಿ ರೈತರು ಮಾತ್ರ ಈ ಸೌಲಭ್ಯ ಪಡೆದುಕೊಂಡಿರ ಬಹುದೆಂಬ ಆರೋಪಗಳು ಕೇಳಿ ಬರುತ್ತಿವೆ.
ಸರ್ಕಾರದಿಂದ ಬರುವ ದೊಡ್ಡ ಮೊತ್ತದ ಸಹಾಯ ಧನವು ರಾಜಕಾರಣಿಗಳ ಹಿಂಬಾಲಕರ ಕೈ ಸೇರಿ, ಸಣ್ಣ ಪುಟ್ಟ ಸಹಾಯ ಧನವನ್ನು ಸಣ್ಣ ಮತ್ತು ಸಾಮಾನ್ಯ ರೈತರಿಗೆ ನೀಡುತ್ತಿದ್ದಾರೇನೊ ಎಂಬ ಅನುಮಾನ ಕಾಡುತ್ತಿದೆ. ರಾಜಕೀಯ ಕೈವಾಡ ಇಲ್ಲದೆ ಮೇಲಧಿಕಾರಿಗಳು ತನಿಖೆ ನಡೆಸಿದರೆ ಮಾತ್ರ ಈ ಸೌಲಭ್ಯದಲ್ಲಿ ಸಹಾಯ ಧನ ಪಡೆದ ಬಲಿಷ್ಠ ರೈತರು ಬಯಲಾಗುತ್ತಾರೆ.

      ಹಗಲು ರಾತ್ರಿಯೆನ್ನದೆ ಬೆವರು ಸುರಿಸುವ ಸಣ್ಣ ಮತ್ತು ಸಾಮಾನ್ಯ ರೈತರಿಗೆ ನೀಡಿದ್ದರೆ, ಯೋಜನೆಗೆ ಒಂದು ಅರ್ಥ ಬರುತ್ತಿತ್ತು. ಸರ್ಕಾರ ನೀಡುತ್ತಿರುವ ಸಹಾಯಧನ ದುರುಪಯೋಗವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ರೈತರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

      2020-21 ನೆ ಸಾಲಿನಲ್ಲಿ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ರೈತರಿಟ್ಟ ಬೆಳೆಗಳು ಮಾರುಕಟ್ಟೆ ಇಲ್ಲದ ಸಂದರ್ಭದಲ್ಲಿ ರೈತರಿಗೆ ತೋಟಗಾರಿಕೆಯಿಂದ ಸಹಾಯ ಧನ ನೀಡಲು ಸರ್ಕಾರ ಭರವಸೆ ನೀಡಿತ್ತು. ಕರ್ಬೂಜ, ಕಲುಂಗಡಿ,ಟೊಮ್ಯಾಟೊ, ಹೂವು ಇನ್ನೂ ವಿವಿಧ ತರಿಕಾರಿ ಮತ್ತು ಹಣ್ಣು ಬೆಳೆಗಳು ಮಾರಾಟವಾಗದೆ ಹೊಲದಲ್ಲಿ ನಿಂತು ಹೋಗಿತ್ತು. ಇಂತಹ ವರದಿಗಳು ಮಾಧ್ಯಮದಲ್ಲಿ ಪ್ರಕಟಣೆ ಆದನಂತರ ಅಧಿಕಾರಿಗಳು ಮತ್ತು ಕಂದಾಯ ಇಲಾಖೆ ಜಂಟಿ ತನಿಖೆ ನಡೆಸಿ ಬೆಳೆಗಾರರಿಗೆ ಸಹಾಯ ಧನ ಬಿಡುಗಡೆ ಮಾಡಿದ್ದರು. ನಿಜವಾದ ರೈತರಿಗೆ ಫಲ ಸಿಗದೆ ಹಣದ ಆಸೆಗಾಗಿ ಕೆಲವು ರೈತರು ಸುಳ್ಳು ದಾಖಲಾತಿ ನೀಡಿ ಸಹಾಯ ಧನ ಪಡೆದಿದ್ದಾರೆ ಎಂದು ನಷ್ಟವುಂಟಾದ ರೈತರು ಆರೋಪಿಸಿದ್ದಾರೆ.

      ಲಾಕ್ ಡೌನ್ ಸಂದರ್ಭದಲ್ಲಿ ತಾಲ್ಲೂಕಿನ ಕುರುಬರಹಳ್ಳಿ ರೈತರಾದ ಸುವರ್ಣಮ್ಮ ನಾಗರಾಜು, ನಲಿಗಾನಹಳ್ಳಿ ಗ್ರಾಮದ ಸ.ನ 3ಎ ನ 20 ಗುಂಟೆಯಲ್ಲಿ ಕರ್ಬೂಜ, ಗೋರ್ಸ್‍ಮಾವು ಗ್ರಾಮದ ಚಿನ್ನಪ್ಪಯ್ಯ ಎಂಬ ರೈತ 5 ಎಕರೆಯಲ್ಲಿ ಕರ್ಬೂಜ, ಕಡಮಲಕುಂಟೆ ಸ.ನ.166 ರಲ್ಲಿ 2ಎಕರೆ 20 ಗುಂಟೆ ಜಮೀನಲ್ಲಿ ರೈತ ರಾಮಲಿಂಗಪ್ಪ ಕಲ್ಲಂಗಡಿ ಬೆಳೆ ನಷ್ಟವಾಗಿದ್ದ ಬಗ್ಗೆ ಪತ್ರಿಕೆಯಲ್ಲಿ ವರದಿಯಾಗಿತ್ತು. ಆದರೆ ಇವರಿಗೆ ಸಹಾಯ ಧನ ನೀಡಿಲ್ಲ, ಬೆಳೆ ಇಲ್ಲದಿದ್ದರೂ ಸಹ ಬೇರೆ ರೈತರಿಗೆ ನೀಡಿದ್ದು, ಅಧಿಕಾರಿಗಳು ಕರೆದು ಪರಿಶೀಲಿಸಿದರು ಸಹ ಸಹಾಯ ಸಿಗದೆ ಸಾಲಗಾರರಾಗಿದ್ದೇವೆ ಎಂದು ಸುವರ್ಣಮ್ಮ ನಾಗರಾಜು ಆರೋಪಿಸಿದ್ದಾರೆ.

      ಸಹಾಯ ಧನ ನಿಜವಾದ ರೈತರಿಗೆ ಸಿಗದೆ ಸುಳ್ಳು ದಾಖಲಾತಿಗೆ ದೊರೆತ್ತಿರುವುದನ್ನು ದಾಖಲಾತಿಯಲ್ಲಿ ನಾವು ಕಾಣ ಬಹುದಾಗಿದೆ.
ಕೊರೊನಾ ವೈರಸ್‍ನಿಂದ ರಾಜ್ಯದಲ್ಲಿ ಲಾಕ್ ಡೌನ್‍ನಲ್ಲಿ ರೈತರು ಬೆಳೆ ಬೆಳೆದು ನಷ್ಟ ಅನುಭವಿಸಿದ ರೈತರಿಗೆ ಸರ್ಕಾರ ಸಹಾಯ ಧನ ನೀಡಬೇಕೆಂಬ ಉದ್ದೇಶದಿಂದ ಸಹಾಯ ಧನ ಬಿಡುಗಡೆ ಮಾಡಿತ್ತು. ಆದರೆ ನಿಜವಾದ ರೈತರಿಗೆ ನಷ್ಟ ಪರಿಹಾರ ಸಿಕ್ಕಿಲ್ಲ. ತೋಟಗಾರಿಕೆ ಇಲಾಖೆಯಿಂದ ಬೆಳೆನಷ್ಟ ಪರಿಹಾರ ಸಹಾಯ ಧನ ಪಡೆದ ರೈತರಲ್ಲಿ 407 ಹೂವಿನ ಬೆಳೆಗಾರ ರೈತರಿಗೆ ಸಹಾಯ ಧನ 24 ಲಕ್ಷ 50 ಸಾವಿರ, ಹಣ್ಣು ಬೆಳೆದ 191 ರೈತರಿಗೆ ಬೆಳೆಗಾರರ ಸಹಾಯ ಧನ 18 ಲಕ್ಷ 57 ಸಾವಿರ, ತರಕಾರಿ ಬೆಳೆದ 757 ರೈತರಿಗೆ ಬೆಳೆಗಾರರ ಸಹಾಯ ಧನ 60 ಲಕ್ಷ 84ಸಾವಿರದ 761 ರೂ. ನಷ್ಟ ಪರಿಹಾರ ಸಲ್ಲಿಸಿರುವುದಾಗಿ ದಾಖಲಾತಿಯಲ್ಲಿ ಮಾಹಿತಿ ದೊರೆಯುತ್ತದೆ.

ಹನಿ ನೀರಾವರಿ ಪದ್ದತಿಯಲ್ಲಿ ಭಾರಿ ಅವ್ಯವಹಾರ :

      ರೈತರಿಗೆ ನೀರು ಪೋಲಾಗದಂತೆ ಮತ್ತು ರೈತರು ಹೆಚ್ಚು ಶ್ರಮ ವಹಿಸದಂತೆ ಇರಲಿ ಎಂಬ ಉದ್ದೇಶದಿಂದ ಹನಿ ನೀರಾವರಿ ಯೋಜನೆ ರೂಪಿಸಿ, ರೈತರಿಗೆ ಸಹಾಯ ಧನ ರೂಪದಲ್ಲಿ ಹಣ ಬಿಡುಗಡೆ ಗೊಳಿಸುತ್ತಿದ್ದರು.
ಸರ್ಕಾರ ನೀಡುತ್ತಿರುವ ಸಹಾಯ ಧನ ಶೇ. 25 ರಷ್ಟು ರೈತರಿಗೆ ಸಿಗುತ್ತಿದ್ದು, ಇನ್ನು ಉಳಿದ ಸಹಾಯ ಧನ ಏಜೆನ್ಸಿ ಮಾಲೀಕರ ಕೈ ಸೇರುತ್ತಿದೆ ಎಂದು ರೈತರು ಆರೋಪಿಸಿದ್ದಾರೆ.

      ತಾಲ್ಲೂಕಿನ ಡ್ರೀಪ್ ಇರೀಗೇಷನ್ ಮಾಲೀಕರು ರೈತರ ದಾಖಲಾತಿಗಳನ್ನು ಪಡೆದು, ಸರ್ಕಾರದಿಂದ ಬಂದಂತಹ ಸಹಾಯ ಧನದಲ್ಲಿ ಅರ್ಧದಷ್ಟು ಹಣದಲ್ಲಿ ರೈತರಿಗೆ ಡ್ರಿಪ್ ಅಳವಡಿಸಿ, ಉಳಿದ ಹಣವನ್ನು ಅಧಿಕಾರಿಗಳು ಮತ್ತು ಏಜೆನ್ಸಿ ಮಾಲೀಕರು ಶಾಮೀಲಾಗಿ ತಿಂದು ತೇಗಿರುವ ಘಟನೆಗಳು ನಡೆದು ಹೋಗಿವೆ.

      2021-22 ನೇ ಸಾಲಿನಲ್ಲಿ ರೈತರಿಗೆ ಬಿಡುಗಡೆಗೊಂಡ ಸಹಾಯ ಧನ ಎಷ್ಟು ರೈತರಿಗೆ ನೀಡಿದ್ದಾರೆ? ಎಷ್ಟು ಸಹಾಯ ಧನ ಬಿಡುಗಡೆಗೊಂಡಿದೆ ಎಂಬ ಮಾಹಿತಿ ಪಡೆದು, ರೈತರ ಮನೆ ಬಾಗಿಲಿಗೆ ಹೋದರೆ ಸಾಕು ಇವರ ಭ್ರಷ್ಟಾಚಾರ ಬಯಲಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ರೈತರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

      ಪಾವಗಡ ತಾಲ್ಲೂಕಿನಲ್ಲಿ ಡ್ರಿಪ್ ಇರಿಗೇಷನ್ ಏಜೆನ್ಸಿ ಮಾಲೀಕರುಗಳ ಈ ಹಿಂದೆ ಇದ್ದ ಮನೆ, ಆಸ್ತಿ, ಈಗಿರುವ ಮನೆ, ಆಸ್ತಿ ಲೆಕ್ಕಾಚಾರ ಮಾಡಿದರೆ ಸಾಕು, ಈ ಮನೆ-ಆಸ್ತಿ ಇವರಿಗೆ ಎಲ್ಲಿಂದ ಬಂದಿದೆ ಎಂಬ ಮಾಹಿತಿ ಸಿಗಬಹುದೆಂದು ರೈತರು ಆಗ್ರಹಿಸಿದ್ದಾರೆ.

      ತಾಲ್ಲೂಕಿನ ತೋಟಗಾರಿಕೆ ಇಲಾಖೆಯಲ್ಲಿ ಹುಡುಕುತ್ತಾ ಹೋದರೆ, ಇಲ್ಲಿನ ಜನಪ್ರತಿನಿಧಿಗಳು ಜನರಿಗೋಸ್ಕರ ಆಯ್ಕೆಗೊಂಡಿದ್ದಾರೋ, ಇಲ್ಲವೆಂದರೆ ಅಧಿಕಾರಿಗಳು, ಏಜೆನ್ಸಿ ಮಾಲೀಕರು ಹಾಗೂ ನಾವು ಉದ್ದಾರ ಆಗೋಣ ಅಂತ ಆಯ್ಕೆಗೊಂಡಿದ್ದಾರೊ ಗೊತ್ತಿಲ್ಲ. ಇಲ್ಲಿ ಮಾತ್ರ ಅವ್ಯವಹಾರಗಳಂತೂ ಉಂಟು ಅನ್ನೊ ನಿಜ ಎಂಬ ಮಾಹಿತಿ ತಿಳಿದು ಬಂದಿದೆ.

ಎಚ್.ರಾಮಾಂಜಿನಪ್ಪ

Recent Articles

spot_img

Related Stories

Share via
Copy link
Powered by Social Snap