ಪಾವಗಡ : ತಹಸೀಲ್ದಾರ್‍ ರಿಂದ ಅಂಗಡಿ ಮುಂಗಟ್ಟು ತೆರವು

 ಪಾವಗಡ : 

      ಕೋವಿಡ್-19 ಎರಡನೆ ಅಲೆಯ ಸೋಂಕನ್ನು ಕಟ್ಟಿ ಹಾಕಲು ಜಾರಿ ಗೊಳಿಸಿರುವ ಕಫ್ರ್ಯೂ ಅಂಗವಾಗಿ ಪಟ್ಟಣದ ಹೊಸಬಸ್ ನಿಲ್ದಾಣದಲ್ಲಿರುವ ಹಣ್ಣು ಮತ್ತು ಹೂವು, ಕಾಫಿ, ಟೀ ಅಂಗಡಿಗಳನ್ನು ತಹಸೀಲ್ದಾರ್ ಕೆ. ಆರ್. ನಾಗರಾಜ್, ಪುರಸಭಾ ಮುಖ್ಯಾಧಿಕಾರಿ ಬಿ.ಸಿ. ಅರ್ಚನಾ, ಪೋಲಿಸ್ ಸರ್ಕಲ್ ಇನ್‍ಸ್ಪೆಕ್ಟರ್ ಲಕ್ಷ್ಮೀಕಾಂತ್ ಮತ್ತು ಪೋಲೀಸ್ ಸಿಬ್ಬಂದಿ ಶನಿವಾರ ಬೆಳ್ಳಂಬೆಳಗ್ಗೆ ತೆರವುಗೊಳಿಸಲು ಮುಂದಾದಾಗ ಫುಟ್‍ಪಾತ್ ವ್ಯಾಪಾರಸ್ಥರಿಂದ ತೀವ್ರ ವಿರೋಧ ವ್ಯಕ್ತವಾಯಿತು.

      ಈ ವೇಳೆ ಹೊಸ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ಹೊಸ ಪಾರ್ಕ್ ನಲ್ಲಿ ಹೂವು ಮಾರಾಟ ಮಾಡಲು ಸ್ಥಳಾಂತರಿಸಲಾಯಿತು. ಹಣ್ಣಿನ ವ್ಯಾಪಾರಿಗಳು ಪಟ್ಟಣದ ಬಳ್ಳಾರಿ ರಸ್ತೆಯ ಮಾರ್ಗದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣಕ್ಕೆ ಸ್ಥಳಾಂತರಿಸಬೇಕೆಂದಾಗ ಹಣ್ಣಿನ ವ್ಯಾಪಾರಸ್ಥರಿಂದ ತೀವ್ರ ಅಕ್ರೋಶ ವ್ಯಕ್ತವಾಯಿತು.

      ತಹಸೀಲ್ದಾರ್ ಕೆ. ಆರ್. ನಾಗರಾಜ್ ಮಾತನಾಡಿ, ಜಿಲ್ಲಾಧಿಕಾರಿಗಳ ಆದೇಶದಂತೆ ತರಕಾರಿ ಮತ್ತು ಹೂವು, ಹಣ್ಣು ಅಂಗಡಿಗಳನ್ನು ಪಟ್ಟಣದ ಬಳ್ಳಾರಿ ರಸ್ತೆಯ ಮಾರ್ಗದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣಕ್ಕೆ ಸ್ಥಳಾಂತರಿಸಲಾಗುವುದು ಎಂದು ತಿಳಿಸಿದಾಗ ಸುಮಾರು ಐದು ನೂರಕ್ಕೂ ಹೆಚ್ಚು ವ್ಯಾಪಾರಿಗಳು ಆತಂಕ ವ್ಯಕ್ತ ಪಡಿಸಿದರು.

      ಹೂವು ಮಾರುವ ಮಹಿಳೆ ಮುತ್ಯಾಲಮ್ಮ ಮಾತನಾಡಿ, ಹೊಸಬಸ್ ನಿಲ್ದಾಣದಲ್ಲಿ ಕಳೆದ 10 ವರ್ಷಗಳಿಂದ ಹೂವಿನ ವ್ಯಾಪಾರ ಮಾಡುತ್ತಿದ್ದು, ಈಗ ಏಕಾಏಕಿ ನಮಗೆ ದೂರದ ಸ್ಥಳಕ್ಕೆ ಸ್ಥಳಾಂತರಿಸಿದರೆ ವ್ಯಾಪಾರವಾಗದೆ ನಷ್ಟ ಅನುಭವಿಸಬೇಕಾಗುತ್ತ್ತದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.

       ಮಹಿಳಾ ಬೀದಿ ವ್ಯಾಪಾರಿಗಳ ಸಂಘದ ಅಧ್ಯಕ್ಷೆ ಶಶಿಕಲಾ ಮಾತನಾಡಿ, ಬಹುತೇಕ ಮಹಿಳೆಯರು ಅದರಲ್ಲೂ ವಿಧವೆಯರು, ವಯಸ್ಸಾದವರು ಮತ್ತು ದಲಿತ ಬಡ ಮಹಿಳೆಯರು ಹಣ್ಣಿನ ವ್ಯಾಪಾರ ಮಾಡುತ್ತಿದ್ದು ಈಗ ಹೊಸಬಸ್ ನಿಲ್ದಾಣದಲ್ಲಿ ಇಟ್ಟಿರುವ ಹಣ್ಣಿನ ಅಂಗಡಿಗಳನ್ನು ಆರ್.ಎಂ.ಸಿ. ಯಾರ್ಡ ಗೆ ಸ್ಥಳಾಂತರ ಗೊಳಿಸಿದರೆ ಪಟ್ಟಣಕ್ಕೆ ಒಂದು ಕಿಲೋಮೀಟರ್ ದೂರವಾಗುತ್ತದೆ. ಅಲ್ಲಿಗೆ ಬಂದು ಯಾರೊಬ್ಬರು ವ್ಯಾಪಾರ ಮಾಡುವುದಿಲ್ಲ. ಇದರಿಂದ ಹಣ್ಣಿನ ವ್ಯಾಪಾರವಾಗದೆ ನಾವು ನಷ್ಟ ಅನುಭವಿಸಬೇಕಾಗುತ್ತದೆ. ಆದ್ದರಿಂದ ಕೋವಿಡ್-19 ಹಾವಳಿ ಕೊನೆಗೊಂಡ ನಂತರ ನಮಗೆ ಪುನಃ ವ್ಯಾಪಾರ ಮಾಡಲು ಅವಕಾಶ ಮಾಡಿಕೋಡಬೇಕು ಎಂದು ಮನವಿ ಮಾಡಿಕೊಂಡರು.

      ಈ ವೇಳೆ ಜೆ.ಡಿ.ಎಸ್. ಮುಖಂಡ ಕಾವಲಗೇರಿರಾಮಾಂಜಿನಪ್ಪ ಮಾತನಾಡಿ, ಹೊಸಬಸ್ ನಿಲ್ದಾಣದಲ್ಲಿ ಖಾಲಿ ಜಾಗ ಇದ್ದು, ಈ ಜಾಗದಲ್ಲಿ ಅಂಗಡಿ ರೂಂಗಳನ್ನು ನಿರ್ಮಿಸಿಕೊಟ್ಟರೆ ಅನುಕೂಲವಾಗುತ್ತದೆ ಎಂದು ಒತ್ತಾಯಿಸಿದರು. ಇದೇ ವೇಳೆ ಕಾಫಿ, ಟೀ ಮತ್ತಿತರ ಅಂಗಡಿಗಳ ನ್ನು ಜೆ.ಸಿ.ಬಿಯಿಂದ ತೆರವುಗೊಳಿಸಲಾಯಿತು.

      ಈ ವೇಳೆ ಪುರಸಭಾ ಸದಸ್ಯರಾದ ಗೊರ್ತಿನಾಗರಾಜ್, ಮಾಜಿ ಸದಸ್ಯರಾದ ಮನುಮಹೇಶ್, ಬೀದಿ ಬದಿ ವ್ಯಾಪಾರಿಗಳ ಸಂಘದ ಮುಖಂಡರಾದ ಗೇಟ್ ಕುಮಾರ್, ಉಮೇಶ್, ಚಂದ್ರಶೇಖರ್ ಮತ್ತಿತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap