ಪಾವಗಡ :
ಕೊವಿಡ್ 2ನೆ ಅಲೆಯ ಸಂಕಷ್ಟದಲ್ಲಿ ಅಧಿಕಾರಿ ವರ್ಗ ತಮಗೆ ನೀಡಿದ ಜವಾಬ್ದಾರಿ ಸಮರ್ಪಕವಾಗಿ ನಿಭಾಯಿಸದ ಹಿನ್ನೆಲೆಯುಲ್ಲಿ ಕೆಂಡಾಮಂಡಲರಾದ ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಅಧಿಕಾರಿಗಳ ಕಾರ್ಯ ವೈಖರಿ ಬಗ್ಗೆ ಗರಂ ಆಗಿ ಎಚ್ಚರಿಕೆ ನೀಡಿದ್ದಾರೆ.
ಅವರು ಸೋಮವಾರ ಪಟ್ಟಣದ ತಾಪಂ ಸಭಾಂಗಣದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ, ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು. ತಾಲ್ಲೂಕಿನಲ್ಲಿ 7 ಗ್ರಾಪಂಗಳು ರೆಡ್‍ಝ್ಹೋನ್‍ನಲಿವೆ. ಸೋಂಕಿತರು ಅನುಕೂಲವಿದ್ದಲ್ಲಿ ಮನೆಯಲ್ಲೇ ಹೋಂ ಕ್ವಾರಂಟೈನ್ ಆಗಬಹುದು, ಇಲ್ಲವೆ ತಾಲ್ಲೂಕು ಕ್ವಾರಂಟೈನ್ ಕೇಂದ್ರದಲ್ಲಿ ಸೇರಬಹುದು. ಪಟ್ಟಣದಲ್ಲಿ 173 ಹಾಸಿಗೆಯ ಕೋವಿಡ್ ಸೆಂಟರ್‍ನಲ್ಲಿ 28 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೆ 50 ಹಾಸಿಗೆಯ ಆಕ್ಸಿಜನ್ ಕೇಂದ್ರದಲ್ಲಿ 25 ಸೋಂಕಿತರು ಮಾತ್ರ ಇದ್ದು 25 ಹಾಸಿಗೆಗಳು ಖಾಲಿ ಇವೆ ಎಂದು ತಿಳಿಸಿದರು.
ಪಾವಗಡ, ಮಧುಗಿರಿ, ಶಿರಾದವರು ಆಯಾ ತಾಲ್ಲೂಕುಗಳಲ್ಲೆ ತಪಾಸಣೆ ಮಾಡಿಸಿಕೊಂಡು, ಸೂಕ್ತ ಚಿಕಿತ್ಸೆ ಪಡೆಯಬೇಕು. ತುಮಕೂರಿಗೆ ಹೋಗುವುದು ಬೇಡ. ಸಚಿವರು ಗ್ರಾಮ ಪಂಚಾಯ್ತಿಗಳ ಪಿಡಿಓಗಳಿಂದ ತಮ್ಮ ವ್ಯಾಪ್ತಿಯಲ್ಲಿ ಒಂದೇ ಮನೆಯಲ್ಲಿ ಇಬ್ಬರು ಅಥವಾ ಮೂವರು ಸೋಂಕಿತರು ಇರುವ ಬಗ್ಗೆ ಮಾಹಿತಿ ಕೇಳಿದರು. ಆಗ ತಮ್ಮ ಗ್ರಾಪಂ ವ್ಯಾಪ್ತಿಯ ಸೋಂಕಿತರ ಪೂರ್ಣ ಮಾಹಿತಿ ನೀಡುವಲ್ಲಿ ಪಿಡಿಓಗಳು ವಿಫಲರಾದಾಗ ಸಿಟ್ಟೆಗೆದ್ದ ಸಚಿವರು ಕೆಂಡಾಮಂಡರಾಗಿ ಮುಲಾಜಿಲ್ಲದೆ ಎಲ್ಲರನ್ನು ಮನೆಗೆ ಕಳಿಸುವೆ ಎಂದು ಎಚ್ಚರಿಕೆ ನೀಡಿದರು.
ಶಾಸಕ ವೆಂಕಟರವಣಪ್ಪ ಮಾತನಾಡಿ, ಗ್ರಾಪಂಗಳ ಪಿಡಿಓಗಳು ಕೋವಿಡ್ ನಿರ್ಮೂಲನೆ ಕೆಲಸ ಮಾಡುತ್ತಿಲ್ಲಲ್ಲಿವರುಗಳು ತಾಲ್ಲೂಕು ಕೇಂದ್ರ ಬಿಟ್ಟು ಕದಲದ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದಲ್ಲಿ ಸೋಂಕು ಹೆಚ್ಚಾಗುತ್ತಿದೆ. ವೈ.ಎನ್.ಹೊಸಕೋಟೆ ಗ್ರಾಪಂ ವ್ಯಾಪ್ತಿಯಲ್ಲಿ ಹೆಚ್ಚು ಹೊರ ರಾಜ್ಯದವರು ಬಂದು ಹೋಗುತ್ತಿದ್ದಾರೆ ಎಂದು ಪಿಡಿಓ ತಿಳಿಸಿದಾಗ ಶಾಸಕ ವೆಂಕಟರವಣಪ್ಪ ಗರಂ ಆಗಿ, ಸಭೆಗೆ ಸುಳ್ಳು ಮಾಹಿತಿ ನೀಡಬೇಡ. ನಮ್ಮವರೆ ವ್ಯಾಪಾರಕ್ಕಾಗಿ ವಿವಿಧ ರಾಜ್ಯಗಳಿಗೆ ತೆರಳಿ ಬರುತ್ತಾರೆ. ಸೂಕ್ತ ತಪಾಸಣೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವುದು ಬಿಟ್ಟು ಬಾಯಿಗೆ ಬಂದಂತೆ ಮಾತಾಡ್ತೀಯ ಎಂದು ಪಿಡಿಓ ವಿರುದ್ದ ಸಿಟ್ಟಾದರು.
ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಮಾತನಾಡಿ, ಗಡಿನಾಡಿಗೆ ಬರುವ ಆಂಧ್ರ ದವರ ಕೋವಿಡ್ ಪರೀಕ್ಷೆ ನಡೆಸಿ ಹಾಗೂ ಗಡಿಗಳನ್ನು ಮತ್ತಷ್ಠು ಬಲಿಷ್ಠಪಡಿಸಿ. ಪಿಡಿಓಗಳನ್ನು ಹಾಗೂ ವಿವಿಧ ಗ್ರಾಪಂಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿದರೂ ಪ್ರಗತಿ ಮಾತ್ರ ಶೂನ್ಯವಾಗಿದೆ. ಇದೇ ರೀತಿ ಮುಂದುವರೆದರೆ ಕ್ರಮ ತಪ್ಪಿದ್ದಲ್ಲ ಎಂದು ಎಲ್ಲಾ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಜಿಪಂ ಸಿಒಇ ವಿದ್ಯಾಕುಮಾರಿ ಮಾತನಾಡಿ, ತಾಲ್ಲೂಕು ಮಟ್ಟದ ವಿವಿಧ ಅಧಿಕಾರಿಗಳ ಹಾಗೂ ಪಿಡಿಓಗಳ ಸಭೆ ನಡೆಸಿ ಕೋವಿಡ್ ಹಿನ್ನೆಲೆಯಲ್ಲಿ ತಮ್ಮ ವ್ಯಾಪ್ತಿಯಲ್ಲಿ ತಾವು ಕೈಗೊಳ್ಳಬೇಕಾದ ಕೆಲಸದ ಬಗ್ಗೆ ಪದೆ ಪದೆ ಹೇಳಿದರು ಕೂಡ ತಾವು ಕೆಲಸ ಮಾಡುವಲ್ಲಿ ವಿಫಲರಾಗಿದ್ದೀರಿ. ನಿಮ್ಮ ವ್ಯಾಪ್ತಿಯ ಸೋಂಕಿತರ ಮಾಹಿತಿ ಇಲ್ಲವಾದಲ್ಲಿ ನೀವು ಮಾಡುತ್ತಿರುವ ಕೆಲಸವೇನು ಎಂದು ಪಿಡಿಓಗಳ ವಿರುದ್ದ ಕಿಡಿ ಕಾರಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ