ಪಾವಗಡ:
ನಿಜಕ್ಕೂ ನಮ್ಮ ವ್ಯವಸ್ಥೆಯ ಬಗ್ಗೆ ಯಾರಿಗಾದರೂ ಬೇಸರ ಉಂಟಾಗುವುದರಲ್ಲಿ ಸಂದೇಹವಿಲ್ಲ. ಕಾರಣ, ತಾಲ್ಲೂಕಿನ ಅಗ್ನಿಶಾಮಕದಳ ಠಾಣೆಯಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ನೀರಿನ ಬವಣೆ ಇದ್ದಾಗ್ಯೂ ಯಾರೊಬ್ಬರೂ ಇದರ ಬಗ್ಗೆ ಹೆಚ್ಚಿನ ಗಮನ ಕೊಡದೆ ತಾತ್ಸಾರದಿಂದ ಹಾಗೂ ಬೇಜವಾಬ್ದಾರಿಯಿಂದ ನಡೆದುಕೊಂಡಿದ್ದು ಎಂತಹವರಿಗಾದರೂ ಬೇಸರ ಉಂಟು ಮಾಡುತ್ತದೆ. ಜನನಾಯಕರುಗಳಿಂದ ಹಿಡಿದು ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು, ಪುರಸಭೆ ಹೀಗೆ ಎಲ್ಲಾ ಕಛೇರಿಗಳ ಬಾಗಿಲನ್ನು ತಟ್ಟಿ ಸುಸ್ತಾಗಿದ್ದ ಅಗ್ನಿ ಶಾಮಕ ಸಿಬ್ಬಂದಿ ಕೊನೆಗೆ ಸ್ವಾಮಿ ಜಪಾನಂದ ಜೀ ಅವರಿಗೆ ಈ ಕುರಿತು ಮನವಿ ನೀಡಿತ್ತು.
ಸ್ವಾಮಿ ಜಪಾನಂದಜೀ ಅವರು ಸಹ ಅಗ್ನಿಶಾಮಕ ಠಾಣೆಗೆ ನೀರಿನ ವ್ಯವಸ್ಥೆ ಮಾಡಿಸಲು ಅನೇಕ ಇಲಾಖೆ, ಅಧಿಕಾರಿಗಳ ಮೊರೆ ಹೋದರು. ಆದರೇ ಯಾರೂ ಸಹ ಅಗ್ನಿಶಾಮಕ ಠಾಣೆಯ ನೀರಿನ ಕೊರತೆಯನ್ನು ನೀಗಿಸುವ ವಿಚಾರದಲ್ಲಿ ಜವಾಬ್ದಾರಿ ತೆಗೆದುಕೊಳ್ಳಲೇ ಇಲ್ಲ. ಹಾಗಾಗಿ ಕಳೆದ ಕೆಲವು ದಿನಗಳ ಹಿಂದೆ ಸ್ವಾಮಿ ಜಪಾನಂದಜೀ ಅವರು ಇನ್ಫೋಸಿಸ್ ಫೌಂಡೇಷನ್ ಸಹಕಾರದೊಂದಿಗೆ ಕೊಳವೆ ಬಾವಿಯನ್ನು ತೋಡಿಸಿದ್ದಾರೆ. ಕೊಳವೆ ಬಾವಿಯಲ್ಲಿ ಅಪಾರ ನೀರು ಬಂದಿದ್ದು ಬರದ ನಾಡಲ್ಲಿ ನೀರೆಲ್ಲಿ ಬಂದೀತು ಎಂದು ಅನುಮಾನಿಸಿದ್ದವರೀಗ ಆಶ್ವರ್ಯಚಕಿತರಾಗಿದ್ದಾರೆ.
ಪಾವಗಡದ ಹಿರಿಯ ನ್ಯಾಯಾಧೀಶರಾದ ವಿ.ಹನುಮಂತಪ್ಪ, ಸಿವಿಲ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ, ಪುರಸಭೆಯ ಮುಖ್ಯಾಧಿಕಾರಿ ಅರ್ಚನ, ಹಾಗೂ ಸುದೇಶ್ ಬಾಬು, ಮನು ಮಹೇಶ್, ದೇವರಾಜ್ ಲೋಕೇಶ್, ಸತ್ಯ ಲೋಕೇಶ್, ಕೆ.ಆರ್.ಜಯಸಿಂಹ, ಯಜ್ಞನಾರಯಣ ಶರ್ಮ ಹಾಗೂ ವಿವೇಕ ಬ್ರಿಗೇಡಿನ ಸದಸ್ಯರುಗಳೊಂದಿಗೆ ರಾಮನವಮಿ ಹಬ್ಬದ ದಿನ ಕೊಳವೆ ಬಾವಿಗೆ ಚಾಲನೆ ನೀಡಿದರು.
ಸ್ವಾಮೀಜೀಯವರ ಸಹಾಯದ ಮನೋಭಾವ ಹಾಗೂ ಇನ್ಫೋಸಿಸ್ ಸುಧಾಮೂರ್ತಿ ಅವರ ಆರ್ಥಿಕ ನೆರವಿನಿಂದಾಗಿ ಅಗ್ನಿ ಶಾಮಕ ಠಾಣೆಗೆ ಕೊಳವೆಬಾವಿ ಸೌಲಭ್ಯ ದೊರೆತಿದ್ದು, ಭಯಂಕರ ಬಿಸಿಲಿನ ಈ ಬೇಸಿಗೆ ದಿನಗಳಲ್ಲಿ ದಿನಕ್ಕೂ ಅಗ್ನಿ ಅವಗಢಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಅಗ್ನಿಶಾಮಕದಳದ ಠಾಣೆಗೆ ಸಂಜೀವಿನಿಯನ್ನು ನೀಡಿದಂತಿದೆ. ಸ್ವಾಮಿ ಜಪಾನಂದಜೀ ಅವರ ಈ ಸೇವಾಕಾರ್ಯವನ್ನು ಪಾವಗಡ ತಾಲ್ಲೂಕಿನ ಜನತೆಗೆ ಸಮರ್ಪಿಸಿದ್ದಾರೆ.
ನಿನ್ನೆ ಸಂಜೆ ನಡೆದ ಸರಳ ಸಮಾರಂಭದಲ್ಲಿ ತುಮಕೂರು ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿಗಳಾದ ಮಹಾಲಿಂಗಪ್ಪ ಎಸ್.ಎಲ್, ಪಾವಗಡ ತಾಲ್ಲೂಕಿನ ತಹಶೀಲ್ದಾರ್, ಕೆ.ಆರ್.ನಾಗರಾಜು, ಗ್ರೇಡ್2.ತಹಶೀಲ್ದಾರ್ ಎನ್.ಮೂರ್ತಿ, ಪುರಸಭೆಯ ಮುಖ್ಯಾಧಿಕಾರಿ ಅರ್ಚನ, ಪೊಲೀಸ್ ಇನ್ಸ್‍ಪೆಕ್ಟರ್ ಹನುಮಂತರಾಯಪ್ಪ, ಠಾಣಾಧಿಕಾರಿ ಚಾಂದ್‍ಪಾಷಾ, ಕಂದಾಯ ನಿರೀಕ್ಷಕ ರಾಜಗೋಪಾಲ್, ಪ್ರಾಂಶುಪಾಲರಾದ ವೈ.ಎಸ್.ಹನುಮಂತರಾಯ, ಸಾಹಿತಿ ಸಣ್ಣನಾಗಪ್ಪ, ರೈತ ಸಂಘದ ಅಧ್ಯಕ್ಷರಾದ ಪೂಜಾರಪ್ಪ ಹಾಗೂ ಸೇವಾಶ್ರಮದ ಕಾರ್ಯಕರ್ತರು, ಹಿತೈಷಿಗಳು, ವಿವೇಕ ಬ್ರಿಗೇಡಿನ ಸದಸ್ಯರು ಸಮ್ಮುಖದಲ್ಲಿ ಗಂಗಾ ಪೂಜೆ ಸಲ್ಲಿಸಿ ಅಗ್ನಿಶಾಮಕ ಠಾಣೆಗೆ ಸಮರ್ಪಿಸಲಾಯಿತು.
ನಮ್ಮ ವ್ಯವಸ್ಥೆಯಲ್ಲಿ ಅವ್ಯವಸ್ಥೆ ಉಂಟಾದಾಗ ಸ್ವಾಮಿ ಜಪಾನಂದಜೀ ಅವರು ತತಕ್ಷಣ ಸ್ಪಂದಿಸುತ್ತಾರೆ ಎಂಬುದಕ್ಕೆ ನೂರಾರು ಉದಾಹರಣೆಗಳು ಇದ್ದಾಗ್ಯೂ ಇದು ಮತ್ತೊಂದು ಜ್ವಲಂತ ಸಾಕ್ಷಿ ಎನ್ನಬಹುದಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
