ಪಾವಗಡ :
ತಾಲ್ಲೂಕಿನಲ್ಲಿ ಪ್ರಥಮ ಸೋಂಕಿತರ ಪರೀಕ್ಷೆ ಸಂಪೂರ್ಣವಾಗಿ ಮಾಡದ ಹಿನ್ನೆಲೆಯಲ್ಲಿ ಸೋಂಕು ಇಳಿಮುಖವಾಗಿದೆಯೇ ಅಥವಾ ಹೆಚ್ಚಾಗಿದೆಯೇ ಎರಡೂ ತಿಳಿಯದ ಪರಿಸ್ಥಿತಿ ಇದೆ. ಇದರಿಂದ ಲಾಕ್‍ಡೌನ್ ಸಡಿಲಗೊಳಿಸಲು ಹೇಗೆ ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಮಾಧುಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.
ಪಾವಗಡ ಪಟ್ಟಣದ ಎಸ್‍ಎಸ್‍ಕೆ ಸಮುದಾಯ ಭವನದಲ್ಲಿ ತಾಲ್ಲೂಕು ಮಟ್ಟದ ಸಭೆಯಲ್ಲಿ ಮಾತನಾಡಿದ ಅವರು, ಕಟ್ಟುನಿಟ್ಟಾಗಿ ಕೋವಿಡ್ ಪರೀಕ್ಷೆಗಳನ್ನು ನಡೆಸಬೇಕೆಂದು ಸೂಚಿಸಿದರು. ನಿಮ್ಮಲ್ಲಿ ಬದಲಾವಣೆ ಕಾಣಿಸಿಲ್ಲ ಹಾಗೂ ಹಾಟ್‍ಸ್ಪಾಟ್ ಗ್ರಾಮಗಳಲ್ಲಿ ಪ್ರತಿ ಕುಟುಂಬದ ಕೋವಿಡ್ ಪರೀಕ್ಷೆ ನಡೆಸಿ ಎಂದರೆ, ನೀವ್ಯಾರೂ ಕಾರ್ಯಗತವಾಗಿಲ್ಲ ಎಂದರೆ, ನಿಮಗೆ ನಾ ಹೇಗೆ ಹೇಳಬೇಕು ಎಂದು ಸಚಿವರಾದ ಮಾಧುಸ್ವಾಮಿ ಗರಂ ಆದರು.
ಜೂನ್ 7ರ ನಂತರ ಲಾಕ್‍ಡೌನ್ ಸಡಿಲವಾದ ನಂತರ ಇಲ್ಲಿ ಒಂದೇ ಸಮನೆ ಸೋಂಕು ಹೆಚ್ಚಾದರೆ ಜನಸಾಮಾನ್ಯರ ಗತಿಯೇನು? ವೈ.ಎನ್.ಹೊಸಕೋಟೆಯಲ್ಲಿ 30 ಹಾಸಿಗೆಗಳ ಆ್ಯಕ್ಸಿಜನ್ ಆಸ್ಪತ್ರೆಯ ವ್ಯವಸ್ಥೆ ಮಾಡಲಾಗಿದ್ದು, ನಾಳೆಯಿಂದ ಕಡ್ಡಾಯವಾಗಿ ಪರೀಕ್ಷೆಗಳನ್ನು ಮಾಡಬೇಕು. ಮಾಡದಿದ್ದಲ್ಲಿ ಮುಲಾಜಿಲ್ಲದೆ ಶಿಸ್ತು ಕ್ರಮ ತಪ್ಪಿದ್ದಲ್ಲ ಎಂದು ಎಚ್ಚರಿಕೆ ನೀಡಿದರು.
ಶಾಸಕ ವೆಂಕಟರವಣಪ್ಪ ಮಾತನಾಡಿ, ಗಡಿನಾಡು ಪಾವಗಡದಲ್ಲಿ ಕೋವಿಡ್ ಎರಡನೆ ಅಲೆಯನ್ನು ಸಮರ್ಪಕವಾಗಿ ಎದುರಿಸಲು ನಿಮಗೆ ಎದುರಾಗುವ ಸಮಸ್ಯೆಗಳಿದ್ದಲ್ಲಿ ಹೇಳಿ, ನಾವು ಬಗೆಹರಿಸುತ್ತೇವೆ. ಜನ ಸಾಮಾನ್ಯರ ಜೀವಗಳೊಂದಿಗೆ ಚೆಲ್ಲಾಟವಾಡುವ ಕೆಲಸ ಮಾಡಿದರೆ ಮುಂದಾಗುವ ಆನಾಹುತಕ್ಕೆ ನೀವೇ ನೆರ ಹೊಣೆಗಾರರು. ನಿಮಗೆ ವಹಿಸಿದ ಕೆಲಸವನ್ನೆ ಮಾಡಿಲ್ಲವೆಂದರೆ ಸೋಂಕು ಇಳಿಮುಖವಾದ ಬಗ್ಗೆ ಹೇಗೆ ತಿಳಿಯಲು ಸಾಧ್ಯ? ತಹಸೀಲ್ದಾರ್ ಹೇಳಿದ ಒಂದು ಕೆಲಸ ಕೂಡ ಸಕಾಲದಲ್ಲಿ ಮಾಡದ ಕಾರಣ ಕೊವಿಡ್ ನಿಯಂತ್ರಣದಲ್ಲಿ ವಿಪಲವಾಗಿದೆ ಎಂದರು.
ತಿರುಮಣಿ ಸಿಪಿಐ ವೆಂಕಟೇಶ್‍ಗೆ ರಾತ್ರಿ ಇಡೀ ಅಂಗಡಿಗಳನ್ನು ಸುತ್ತುವುದೇ ತನ್ನ ಕೆಲಸವಾಗಿದ್ದು, ಹಳ್ಳಿಗಳಲ್ಲಿ ಸಣ್ಣಪುಟ್ಟ ವ್ಯಾಪಾರಸ್ಥರ ಮೇಲೆ ಕೇಸು ದಾಖಲಿಸಿ, ಜನಸಾಮಾನ್ಯರ ಜೀವನಕ್ಕೆ ಕುತ್ತು ತರುವಂತ ಕೆಲಸ ಮಾಡುತ್ತಿದ್ದಾರೆ. ಸಿದ್ದಾಪುರದಲ್ಲಿ ನಡೆದ ಘಟನೆಗೆ ಡಿವೈಎಸ್ಪಿ ಸಮುಖದಲ್ಲಿ ರಾಜಿ ಮಾಡಿಸಿದ ಘಟನೆಯನ್ನೆ ಪ್ರಕರಣ ದಾಖಲಿಸಿದ್ದು, ಪೋಲೀಸರ ಮೇಲಿನ ನಂಬಿಕೆ ಜನರಲ್ಲಿ ಕಳಚುವಂತಾಗಿದೆ ಎಂದು ಇವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಸಚಿವರನ್ನು ಒತ್ತಾಯಿಸಿದರು.
ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಮಾತನಾಡಿ, ಪ್ರತಿ ಗ್ರಾಮದಲ್ಲಿ ಇಂದಿನಿಂದ ಕೋವಿಡ ಪರೀಕ್ಷೆ ನಡೆಸಲೆಬೇಕು. ಹಾಟ್‍ಸ್ಪಾಟ್ ರೆಡ್ ಝ್ಹೋನ್‍ಗಳಲ್ಲಿ ಪ್ರತಿ ಕುಟುಂಬವನ್ನು ಪರೀಕ್ಷೆಗೆ ಒಳಪಡಿಸಬೇಕು. ಈ ಪ್ರದೇಶಗಳಲ್ಲಿ ಇಂದಿನಿಂದ ಕಮಾಂಡರ್, ನೋಡಲ್ ಅಧಿಕಾರಿ, ಪಿಡಿಓಗಳು ಕಡ್ಡಾಯವಾಗಿ ಸ್ಥಳದಲ್ಲೇ ಇರುವಂತೆ ಸೂಚನೆ ನೀಡಿದರು.
ಜಿಪಂ ಸಿಇಒ ವಿದ್ಯಾಕುಮಾರಿರವರು ಮಾತನಾಡಿ, ನೋಡಲ್ ಅಧಿಕಾರಿಗಳು, ಪಿಡಿಓಗಳಿಗೆ ಎಷ್ಟು ಹೇಳಿದರೂ ಕೂಡ ನಿಮಗೆ ವಹಿಸಿದ ಕೆಲಸ ಮಾಡುತ್ತಿಲ್ಲ ಎಂದು ಶಾಸಕರೆ ಹೇಳಿದ್ದಾರೆ. ನೀವು ಮಾಡಿರುವ ಕೆಲಸದ ಬಗ್ಗೆ ಯಾರ ಬಳಿಯೂ ಸಮರ್ಪಕ ಮಾಹಿತಿ ಇಲ್ಲ ಎಂದರೆ ನಿಮಗೆ ನಾಚಿಕೆ ಆಗದಿರುವುದು ಲೇಸು ಎಂದು ಆಸಮಾಧಾನ ವ್ಯಕ್ತಪಡಿಸಿದರು.
ಸಭೆಯಲ್ಲಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ, ಡಿಹೆಚ್‍ಓ ನಾಗೇಂದ್ರಪ್ಪ, ಮಧುಗಿರಿ ಎಸಿ ಸೋಮಪ್ಪ ಕಡಕೋಳ, ಡಿವೈಎಸ್ಪಿ ರಾಮಕೃಷ್ಣಪ್ಪ, ತಹಸೀಲ್ದಾರ್ ಕೆ.ಆರ್.ನಾಗರಾಜು, ಟಿಹೆಚ್‍ಓ ತಿರುಪತಯ್ಯ, ಇಓ ಶಿವರಾಜಯ್ಯ, ಸಿಪಿಐ ಲಕ್ಷ್ಮೀಕಾಂತ್ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಗ್ರಾಪಂ ಪಿಡಿಓಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








