ಪಾವಗಡ :
ಮೀನುಗಾರಿಕೆ ಇಲಾಖೆಯು ಕೆರೆಗಳಲ್ಲಿ ಮೀನುಗಾರಿಕೆಗೆ ಟೆಂಡರ್ ಕರೆಯದೆ, ಇಲಾಖೆಯಿಂದ ಬರುವ ಅನುದಾನ ಮತ್ತು ಸೌಲಭ್ಯಗಳನ್ನು ಫಲಾನುಭವಿಗಳಿಗೆ ತಲುಪಿಸದೆ, ಒಂದು ಕೋಟಿಗೂ ಅಧಿಕ ಹಣವನ್ನು ಗೋಲ್ ಮಾಡಲಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿ, ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ತಹಸೀಲ್ದಾರ್‍ಗೆ ಮನವಿ ಸಲ್ಲಿಸಲಾಗಿದೆ.
ಈ ವೇಳೆ ರೈತ ಸಂಘ-ಹಸಿರು ಸೇನೆ ಅಧ್ಯಕ್ಷ ಪೂಜಾರಪ್ಪ ಮಾತನಾಡಿ, ಪಾವಗಡ ಮೀನುಗಾರಿಕೆ ಇಲಾಖೆಯಲ್ಲಿ ಕೆರೆಗಳಲ್ಲಿ ಮೀನು ಸಾಕಾಣಿಕೆಗೆ ಟೆಂಡರ್ ಕರೆಯದೆ, ಈ ಹಿಂದೆ ಟೆಂಡರ್ ಪಡೆದಿರುವವರ ಬಳಿ ಒಳ ಒಪ್ಪಂದ ಮಾಡಿಕೊಂಡು, ಅಕ್ರಮವಾಗಿ ಟೆಂಡರ್‍ನ್ನು ಮುಂದುವರಿಸಿದ್ದಾರೆ. ಸುಮಾರು ಎಂಟು ವರ್ಷಗಳಿಂದ ಬ್ಯಾಡನೂರು ಗ್ರಾಮದ ಶಂಕರಲಿಂಗೇಗೌಡ ಒಬ್ಬರಿಗೇ ಕೆರೆಯನ್ನು ಕೊಡಲಾಗಿದೆ. ರಾಜ್ಯ ಸರ್ಕಾರದ ವಸತಿ ಯೋಜನೆಯಲ್ಲಿ, ಬಲೆಗಳ ವಿತರಣೆ ಮತ್ತು ಕೇಂದ್ರ ಸರ್ಕಾರದ ಸೈಕಲ್, ಮೋಟಾರ್‍ಬೈಕ್, ಟಾಟಾಏಸ್, ಎಸ್.ಸಿ, ಎಸ್.ಟಿ. ವರ್ಗ ಮತ್ತು ಹಿಂದುಳಿದ ವರ್ಗಕ್ಕೆ ಬಂದಿರುವ ಅನುದಾನದಲ್ಲಿ ಇದುವರೆಗೂ ಇಲಾಖೆಯಿಂದ ಮಂಜೂರಾಗಿರುವ ಹಣವನ್ನು ಮತ್ತು ಸೌಲಭ್ಯಗಳನ್ನು ಫಲಾನುಭವಿಗಳಿಗೆ ತಲುಪಿಸಿಲ್ಲ. ಭಾರಿ ಗೋಲ್ ಮಾಲ್ ನಡೆದಿದೆ. ಕಳೆದ ಹತ್ತು ವರ್ಷಗಳಿಂದ ಇಲ್ಲಿಯವರೆಗೂ ಮಂಜೂರಾಗಿರುವ ಅನುದಾನದ ಬಗ್ಗೆ ಸಂಪೂರ್ಣ ತನಿಖೆ ಮಾಡಬೇಕು. ಇಲಾಖೆಯಲ್ಲಿ ಹೊರಗುತ್ತಿಗೆಯಲ್ಲಿ ಕೆಲಸ ಮಾಡುತ್ತಿರುವ ಪೋತಣ್ಣ ಎನ್ನುವವರನ್ನು ತಕ್ಷಣ ವಜಾಗೊಳಿಸಿ, ಕಾಯಂ ನೌಕರರನ್ನು ನೇಮಿಸಬೇಕು ಎಂದು ತಹಸೀಲ್ದಾರ್ ಕೆ. ಆರ್. ನಾಗರಾಜ್‍ಗೆ ಮನವಿ ಪತ್ರ ಸಲ್ಲಿಸಲಾಯಿತು.
ಮನವಿ ಪತ್ರ ಸ್ವೀಕರಿಸಿದ ತಹಸೀಲ್ದಾರ್ ಕೆ. ಆರ್. ನಾಗರಾಜ್, ಈ ಬಗ್ಗೆ ಮೀನುಗಾರಿಕಾ ಇಲಾಖಾಧಿಕಾರಿಗಳ ಗಮನಕ್ಕೆ ತರಲಾಗುತ್ತದೆ ಎಂದರು. ಈ ವೇಳೆ ಮಹಿಳಾ ರೈತ ಸಂಘದ ಮುಖಂಡೆ ರಾಂಪುರ ಅನ್ನಪೂರ್ಣ, ಶಿವರಾಜ್, ಗೋಪಾಲ್, ನರಸಿಂಹಪ್ಪ, ಸದಾಶಿವಪ್ಪ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ