ಪಾವಗಡ : ‘ಅಧಿಕಾರಿಗಳು ಸದಸ್ಯರ ಮಾತೆ ಕೇಳುತ್ತಿಲ್ಲ’ – ಆರೋಪ!!

ಪಾವಗಡ :

      ಪುರಸಭಾ ಅಧಿಕಾರಿಗಳು ಚುನಾಯಿತ ಸದಸ್ಯರಿಗೆ ಯಾವುದೇ ಗೌರವ ನೀಡುತ್ತಿಲ್ಲ ಎಂದು ಸಭೆಯಲ್ಲಿ ಪುರಸಭಾ ಅಧ್ಯಕ್ಷರ ಎದುರೆ ಸದಸ್ಯರು ಅಧಿಕಾರಿಗಳ ಮೇಲೆ ಗರಂ ಆದ ಘಟನೆ ನಡೆಯಿತು.

      ಪಟ್ಟಣದ ಪುರಸಭೆಯ ಸಭಾಂಗಣದಲ್ಲಿ ಅಧ್ಯಕ್ಷ ರಾಮಾಂಜನಪ್ಪ ರವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ 17ನೆ ವಾರ್ಡ್‍ನ ಪುರಸಭಾ ಸದಸ್ಯ ಮಹಮ್ಮದ್ ಇಮ್ರಾನ್ ಮಾತನಾಡಿ, ಪುರಸಭಾ ಅಧಿಕಾರಿಗಳು ಚುನಾಯಿತ ಪ್ರತಿನಿಧಿಗಳ ಮಾತುಗಳನ್ನು ಕೇಳುತ್ತಿಲ್ಲ. ಇಂತಹ ಅಧಿಕಾರಿಗಳು ಪುರಸಭೆಯಲ್ಲಿರುವ ಕಾರಣದಿಂದ ಸಾರ್ವಜನಿಕರ ಸಮಸ್ಯೆಗಳನ್ನು ಹೇಗೆ ಪರಿಹಾರ ಮಾಡಲು ಸಾಧ್ಯ? ಇಲ್ಲಿನ ಅಧಿಕಾರಿವರ್ಗ ಇಷ್ಟ ಬಂದ ಹಾಗೆ ವರ್ತನೆ ಮಾಡುತ್ತಿರುವ ಕಾರಣ, ಇವರಿಂದ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯವಿಲ್ಲ. ಅಧ್ಯಕ್ಷರು ಅಧಿಕಾರಿಗಳನ್ನು ಸರಿದಾರಿಗೆ ತಂದು ಪಟ್ಟಣದ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದರು.

      1ನೆ ವಾರ್ಡ್‍ನ ಸದಸ್ಯ ನಾಗಭೂಷಣರೆಡ್ಡಿ ಮಾತನಾಡಿ, ಸದಸ್ಯರ ಗಮನಕ್ಕೆ ತರದೆ ಅಧಿಕಾರಿಗಳು ತಮಗೆ ಇಷ್ಟ ಬಂದಂತೆ ವರ್ತಿಸುತ್ತಿದ್ದಾರೆ. 23 ಸದಸ್ಯರ ಎಲ್ಲಾ ವಾರ್ಡ್‍ಗಳಲ್ಲಿನ ಸಮಸ್ಯೆಗಳ ಬಗ್ಗೆ ಅಧ್ಯಕ್ಷರು ಗಮನಹರಿಸಿ ಸಕಾಲದಲ್ಲಿ ಅಗತ್ಯ ಕ್ರಮಕೈಗೊಳ್ಳಬೇಕು. ಇಲ್ಲಿನ ಅಧಿಕಾರಿಗಳು ಪ್ರಭಾವಿಗಳ ವಾರ್ಡ್‍ಗಳ ಬಗ್ಗೆ ಮಾತ್ರ ಹೆಚ್ಚು ಗಮನ ಹರಿಸುತ್ತಿದ್ದರೆ, ಉಳಿದ ವಾರ್ಡ್‍ಗಳ ಗತಿಯೇನು ಎಂದು ಪ್ರಶ್ನಿಸಿದ ಅವರು, ಪುರಸಭೆಯಲ್ಲಿ ವರ್ಗಾವಣೆಗೊಂಡ ಅಧಿಕಾರಿಗಳ ಅವಧಿಯಲ್ಲಿ ನಡೆದಾ ಭ್ರಷ್ಟಾಚಾರದ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಸಭೆಯಲ್ಲಿ ಒತ್ತಾಯಿಸಿದರು.

ಸದಸ್ಯ ರಾಜೇಶ್, ಸದಸ್ಯರು ಆರೋಪ ಮಾಡಿದ ಹಾಗೆ ಅಧಿಕಾರಿಗಳು ಸದಸ್ಯರಿಗೆ ಗೌರವ ಕೊಡುತ್ತಿಲ್ಲ ಎಂಬುದು ಒಂದು ನೋವಿನ ಸಂಗತಿ. ಅಧಿಕಾರಿಗಳು ಸದಸ್ಯರ ವಿಶ್ವಾಸವನ್ನು ಪಡೆದು, ಯಾವ ವಾರ್ಡ್‍ನಲ್ಲಿ, ಏನು ಸಮಸ್ಯೆ ಇದೆ ಎಂಬುದನ್ನು ಸದಸ್ಯರಿಂದ ಮಾಹಿತಿ ಪಡೆದು, ಕಾರ್ಯ ನಿರ್ವಹಿಸಬೇಕು. ಆದರೆ ಚುನಾಯಿತ ಸದಸ್ಯರ ಗಮನಕ್ಕೆ ತರದಂತೆ ನೀವು ಮಾಡುವ ಕಾರ್ಯದ ಬಗ್ಗೆ ನನ್ನ ಆಕ್ಷೇಪವಿದ್ದು, ಇದು ಮುಂದುವರೆದರೆ ಸೂಕ್ತ ಕ್ರಮಕ್ಕೆ ಒತ್ತಾಯಿಸುವುದಾಗಿ ಆಗ್ರಹಿಸಿದ್ದಾರೆ.

ಸದಸ್ಯ ಸುದೇಶ್‍ಬಾಬು ಮಾತನಾಡಿ, ಪುರಸಭೆಯ ಅಂಗಡಿ ಮಳಿಗೆಗಳ ಬಾಡಿಗೆ ಹಣ, ಕರೆಂಟ್ ಬಿಲ್‍ಗಳ ಬಗ್ಗೆ ಅಧಿಕಾರಿಗಳು ಸರಿಯಾದ ಕ್ರಮ ಜರುಗಿಸುತ್ತಿಲ್ಲ. ಬಾಡಿಗೆ ನೀಡದೆ ಇರುವ ಅಂಗಡಿಗಳಿಗೆ ಬೀಗ ಹಾಕಿ ಎಂದು ಹೇಳಿದರು.
ಕಚೇರಿಯಲ್ಲಿ ಅಧಿಕಾರಿಗಳನ್ನು ಯಾವುದಾದರು ವಿಷಯದ ಬಗ್ಗೆ ಸದಸ್ಯರು ಹೋಗಿ ಕೇಳಿದರೆ, ಸಮರ್ಪಕ ಉತ್ತರ ನೀಡುವುದಿಲ್ಲ. ಮುಖ್ಯಾಧಿಕಾರಿಗಳು ಕೂಡ ಸದಸ್ಯರ ಸಮಸ್ಯೆಗಳ ಬಗ್ಗೆ ಗಮನ ಹರಿಸುತ್ತಿಲ್ಲ. ಕೇವಲ ಸಭೆಯಲ್ಲಿ ಮಾತ್ರ ಭರವಸೆ ನೀಡಿ ಸುಮ್ಮನಾಗುವುದರಿಂದ ಜನತೆಗೆ ಸಕಾಲದಲ್ಲಿ ಸೌಲಭ್ಯಗಳನ್ನು ವಾರ್ಡ್ ಸಮಸ್ಯೆಗಳನ್ನು ಸರಿಪಡಿಸಲು ಸಾಧ್ಯವಾಗುತ್ತಿಲ್ಲ ಎಂದು ವೇಲುರಾಜ್, ವೆಂಕಟರಮಣ, ರವಿಕುಮಾರ್, ಟೆಂಕಾಯಲ ರವಿ, ಗಂಗಮ್ಮ, ಲಕ್ಷ್ಮೀದೇವಿ, ಮಾಲಿನ್‍ತಾಜ್, ಶಶಿಕಲಾ, ಗೋರ್ತಿ ನಾಗರಾಜು, ವಿಜಯಕುಮಾರ್ ಮುಖ್ಯಾಧಿಕಾರಿಗಳ ಕಾರ್ಯ ವೈಫಲ್ಯದ ಬಗ್ಗೆ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಮುಖ್ಯಾಧಿಕಾರಿ ಅರ್ಚನಾ, ಯಾವುದೇ ಸದಸ್ಯರಿಗೆ ತೊಂದರೆ ಆಗದಂತೆ ಸದಸ್ಯರ ಗಮನಕ್ಕೆ ತಂದು ಪಟ್ಟಣದ ಅಭಿವೃದ್ದಿಗೆ ಶ್ರಮಿಸಲಾಗುವುದೆಂದು ತಿಳಿಸಿದರು.

      ಪುರಸಭಾ ಅಧ್ಯಕ್ಷ ರಾಮಾಂಜಿನಪ್ಪ, ಚುನಾಯಿತ ಸದಸ್ಯರ ಗಮನಕ್ಕೆ ತರದಂತೆ ಯಾವುದೇ ವಾರ್ಡ್‍ನಲ್ಲಿ ಅಧಿಕಾರಿವರ್ಗ ಕೆಲಸ ಮಾಡುವ ವೇಳೆ ಅಲ್ಲಿನ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ಸದಸ್ಯರ ಗಮನಕ್ಕೆ ತಂದು ಕೆಲಸ ಮಾಡಬೇಕು. ಸದಸ್ಯರು ಹಾಗೂ ಅಧಿಕಾರಿಗಳ ಮಧ್ಯೆ ಬಿರುಕು ಉಂಟಾದರೆ, ಅಭಿವೃದ್ದಿ ನಿರೀಕ್ಷಿಸಲು ಸಾಧ್ಯವಿಲ್ಲ. ಮುಂದೆ ಇಂತಹ ಅನಾಹುತಗಳಾಗದಂತೆ ಎಚ್ಚರ ವಹಿಸಬೇಕೆಂದು, ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಿದರು.
 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link