ಖಾಸಗಿ ಶಾಲಾ ಶಿಕ್ಷಕರು : 105 ಕೋಟಿ ರೂ. ಪ್ಯಾಕೇಜ್

 ಪಾವಗಡ :    

      ಕೊವಿಡ್ ಸಂಕಷ್ಟ ಸಮಯದಲ್ಲಿ ಖಾಸಗಿ ಶಾಲಾ ಶಿಕ್ಷಕರ ಬದುಕಿಗೆ ಕಗ್ಗತ್ತಲು ಕವಿದಂತಾಗಿದೆ. ಈ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಮಾಡಿದ್ದರಿಂದ, ರಾಜ್ಯದ 3 ಲಕ್ಷ ಶಿಕ್ಷಕರಿಗೆ ತಲಾ 5 ಸಾವಿರದಂತೆ 105 ಕೋಟಿ ರೂ. ಕೋವಿಡ್ ಪ್ಯಾಕೇಜ್ ಘೋಷಣೆ ಮಾಡಿದೆ. ಇಂತಹ ನೆರವು ನೀಡಿದ್ದು ದೇಶದಲ್ಲೇ ಮೊಟ್ಟ ಮೊದಲ ರಾಜ್ಯ ಬಿಜೆಪಿ ಸರಕಾರ ಎಂದು ವಿಧಾನ ಪರಿಷತ್ ಸದಸ್ಯ ಡಾ.ವೈ.ಎ.ನಾರಾಯಣ ಸ್ವಾಮಿ ತಿಳಿಸಿದರು.

     ಪಟ್ಟಣದ ವಿ.ಎಸ್.ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ಡಾ.ವೈ.ಎ.ಎನ್ ಮತ್ತು ಚಿದಾನಂದ ಎಂ.ಗೌಡ ಅಭಿಮಾನ ಬಳಗದ ವತಿಯಿಂದ ಪಡಿತರ ಕಿಟ್ ವಿತರಣೆಯಲ್ಲಿ ಅವರು ಮಾತನಾಡಿದರು. ಕೊವಿಡ್ ಸಂಕಷ್ಟದಿಂದ ಶಿಕ್ಷಣ ಕ್ಷೇತ್ರ ಡೋಲಾಯಮಾನವಾಗಿದ್ದು, ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ಸಕಾಲದಲ್ಲಿ ವೇತನವಿಲ್ಲ. ಖಾಸಗಿ ಶಾಲಾ ಶಿಕ್ಷಕರಿಗೆ ಶಾಲೆಗಳಿಲ್ಲದೆ ಸಂಬಳವಿಲ್ಲದಂತಾಗಿ ಅತ್ಯಂತ ಸಂಕಷ್ಟವನ್ನು ಶಿಕ್ಷಕರು ಎದುರಿಸುತ್ತಿರುವುದು ದುರಂತವಾಗಿದೆ ಎಂದರು.

      ಕರ್ನಾಟಕ ರಾಜ್ಯದ ಬಿಜೆಪಿ ಸರಕಾರ ನೂರಕ್ಕೆ ನೂರರಷ್ಟು ಶಿಕ್ಷಕರಿಗೆ ವೇತನ ನೀಡುತ್ತಿದೆ. ಕಾರಣ ಈ ಸಮಾಜವನ್ನು ಕಟ್ಟಲಿಕ್ಕೆ ಶಿಕ್ಷಕರ ಪಾತ್ರ ಅತ್ಯಮೂಲ್ಯವೆಂದ ಅವರು, ರಾಜ್ಯದಲ್ಲಿ 1 ಕೋಟಿ ವಿದ್ಯಾರ್ಥಿಗಳು ಸರಕಾರಿ ಶಾಲೆಗಳಲ್ಲಿ ಕಲಿಯುತ್ತಿದ್ದಾರೆ. ಶಿಕ್ಷಕರಿಗೆ ನೀಡಿರುವ ಕೊವಿಡ್ ಪ್ಯಾಕೇಜ್‍ನ್ನು ಪಾರದರ್ಶಕತೆಯಿಂದ ವಿತರಣೆ ಮಾಡಿ, ಶಿಕ್ಷಕರಿಗೆ ಹೆಲ್ತ್ ಕಾರ್ಡ್ ಕೊಡಿಸಲಿದ್ದೇವೆ. ಕೋವಿಡ್‍ನಿಂದ ಸಾವನ್ನಪ್ಪಿದ ಶಿಕ್ಷಕರ ಕುಟುಂಬಗಳಿಗೆ ನಾನು ಮತ್ತು ಚಿದಾನಂದ ಗೌಡರು ಸೇರಿ ಪ್ರತಿ ಕುಟುಂಬಕ್ಕೆ 10 ಸಾವಿರ ರೂ. ವಿತರಣೆ ಮಾಡಲಿದ್ದೇವೆ. ಎರಡನೆ ಅಲೆಯಲ್ಲಿ ಆ್ಯಕ್ಸಿಜನ್ ಇಲ್ಲದೆ ನಮ್ಮವರನ್ನು ನಾವು ಕಳೆದು ಕೊಂಡಿದ್ದೇವೆ. ಕಾರಣ ನಾವು ಪ್ರಕೃತಿಯ ಮೇಲೆ ನಡೆಸಿದ ನಿರಂತರ ಅತ್ಯಾಚಾರದಿಂದ ಈ ಪರಿಸ್ಥಿತಿ ನಮಗೆ ಬಂದಿದೆ. ನಾವು ಬದುಕಲು ಗಾಳಿ ಹಾಗೂ ನೀರನ್ನು ಖರೀದಿಸಿ ಬದುಕುವ ಸ್ಥಿತಿಗೆ ಬಂದು ತಲುಪಿದ್ದೇವೆ. ಈಗಲಾದರು ನಾವು ಎಚ್ಚೆತ್ತುಕೊಳ್ಳಬೇಕೆಂದರು.

      ಆಗ್ನೇಯ ಪದವೀಧರರ ಕ್ಷೇತ್ರ ಶಾಸಕ ಚಿದಾನಂದ್ ಎಂ.ಗೌಡ ಮಾತನಾಡಿ, ಸಮಾಜದ ಮುಖ್ಯವಾಹಿನಿಯಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು 27 ಸಾವಿರ ಶಾಲೆಗಳಲ್ಲಿ 3 ಲಕ್ಷ ಶಿಕ್ಷಕರು ದುಡಿಯುತ್ತಿದ್ದಾರೆ. ಶಿಕ್ಷಣ ಸಚಿವರೊಂದಿಗೆ ಸಭೆ ನಡೆಸಿ ಶಿಕ್ಷಕರಿಗೆ 25 ಸಾವಿರ ರೂ. ಕೋವಿಡ್ ಪ್ಯಾಕೇಜ್ ನೀಡಲು ನಿರಂತರವಾದ ಶ್ರಮ ವಹಿಸಿದರೂ ಕೊನೆಗೆ ಸ್ವಲ್ಪಮಟ್ಟಿಗೆ ಬೇಡಿಕೆ ಈಡೇರಿದೆ. ನಮ್ಮ ಕ್ಷೇತ್ರ ವ್ಯಾಪ್ತಿಯ ಖಾಸಗಿ ಶಾಲಾ ಶಿಕ್ಷಕರಿಗೆ ಪಡಿತರ ವಿತರಣೆ ಮಾಡುತ್ತಿದ್ದು, ನಮ್ಮ ಅವಧಿಯಲ್ಲಿ ಖಾಸಗಿ ಶಾಲಾ ಶಿಕ್ಷಕರಿಗೆ ಕನಿಷ್ಠ ವೇತನ ಜಾರಿಗೆ ತರುತ್ತೇವೆ. ಕಳೆದ ಮೂರು ವರ್ಷಗಳಿಂದ ಖಾಸಗಿ ಶಾಲೆಗಳು ಸಂಕಷ್ಟಕ್ಕೆ ಸಿಲುಕಿವೆ ಎಂದು ವಿಷಾದ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ನಾಲ್ಕು ನೂರಕ್ಕೂ ಹೆಚ್ಚು ಖಾಸಗಿ ಶಾಲಾ ಶಿಕ್ಷಕರಿಗೆ ಪಡಿತರ ವಿತರಣೆ ಮಾಡಲಾಯಿತು.

      ಮಧುಗಿರಿ ಡಿಡಿಪಿಐ ರೇವಣಸಿದ್ದಪ್ಪ, ಬಿಇಓ ಅಶ್ವತ್ಥನಾರಾಯಣ, ವುಮೆನ್ಸ್ ಕಾಲೇಜಿನ ಪ್ರಾಂಶುಪಾಲರಾದ ಕೆ.ಓ.ಮಾರಪ್ಪ, ಬಿಸಿಯೂಟ ಯೋಜನಾಧಿಕಾರಿ ಹನುಮಂತರಾಯಪ್ಪ, ಖಾಸಗಿ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮುನಿಸ್ವಾಮಿ, ಬಿಜಿಪಿ ತಾ.ಅಧ್ಯಕ್ಷ ರವಿಶಂಕರ್ ನಾಯ್ಕ್, ಮುಖಂಡರಾದ ಡಾ.ಜಿ.ವೆಂಕಟರಾಮಯ್ಯ, ಕೃಷ್ಣನಾಯ್ಕ್, ಶಿಕ್ಷಕರಾದ ಯತೀಶ್‍ಕುಮಾರ್ ಮುಂತಾದವರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap