ಪಾವಗಡ :
ಪಟ್ಟಣದ ರಸ್ತೆಗಳಲ್ಲಿ ಗುಂಡಿಗಳು ಬಿದ್ದು ರಸ್ತೆ ಹಾಳಾಗಿದ್ದು, ವಾಹನ ಸವಾರರಿಗೆ ಸಂಚರಿಸಲು ತೀವ್ರ ತೊಂದರೆಯಾಗುತ್ತಿದ್ದರೂ, ಈ ಬಗ್ಗೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಪುರಸಭಾ ಎಂಜನಿಯರ್ ಅರುಣ್ ಕುಮಾರ್ ರಿಪೇರಿಗೆ ಮಾತ್ರ ಮುಂದಾಗುತ್ತಿಲ್ಲ ಎಂದು ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂಶಶಿಕಿರಣ್ ಬೇಸರ ವ್ಯಕ್ತ ಪಡಿಸಿದ್ದಾರೆ.
ಅವರು ಮಂಗಳವಾರ ಪಟ್ಟಣದ ಹೊಸ ಬಸ್ ನಿಲ್ದಾಣಕ್ಕೆ ಹೋಗುವ ಬಳ್ಳಾರಿ ರಸ್ತೆಯ ಮಾರ್ಗದಲ್ಲಿ ಬಿದ್ದಿರುವ ಗುಂಡಿಗಳಿಗೆ ತಮ್ಮ ಸಂಸ್ಥೆ ವತಿಯಿಂದ ಜಲ್ಲಿ, ಮಣ್ಣು ಹಾಕಿ ಗುಂಡಿಗಳನ್ನು ಮುಚ್ಚುವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಈ ರಸ್ತೆಯಲ್ಲಿ ಗುಂಡಿ ಬಿದ್ದಿರುವುದರಿಂದ ವಾಹನ ಸವಾರರಿಗೆ ಕಿರಿಕಿರಿಯುಂಟಾಗುತ್ತಿದೆ. ಅಲ್ಲದೆ ಸೋಮವಾರ ರಾತ್ರಿ ಗರ್ಭಿಣಿಯೊಬ್ಬರು ಬೈಕ್ನ ಹಿಂಬದಿ ಕುಳಿತು ಪ್ರಯಾಣ ಮಾಡುವಾಗ ಈ ಗುಂಡಿಯ ಹತ್ತಿರ ಬಿದ್ದು, ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಯಾದಿಂದ ಪಾರಾಗಿದ್ದಾರೆ. ಪಟ್ಟಣದಲ್ಲಿ ಎಲ್ಲಾ ನಾಲ್ಕು ರಸ್ತೆಯ ಮಾರ್ಗಗಳಲ್ಲಿ ರಸ್ತೆಯು ಗುಂಡಿಗಳಿಂದ ಕೂಡಿದ್ದು, ಈ ಬಗ್ಗೆ ಪುರಸಭೆಯ ಎಂಜಿನಿಯರ್ ಅರುಣ್ ಕುಮಾರ್ ಗಮನಕ್ಕೆ ತಂದರೂ ಯಾವುದೆ ಪ್ರಯೋಜನವಾಗುತ್ತಿಲ್ಲ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಮಾನವ ಹಕ್ಕುಗಳ ನಿರ್ದೇಶಕ ಬೇಕರಿನಾಗರಾಜು ಮಾತನಾಡಿ, ಪಟ್ಟಣದ ಶಿರಾ ರಸ್ತೆಯ ನಾಗರಕಟ್ಟೆ ಬಳಿಯ ಕನ್ನಿಕಾಪರಮೇಶ್ವರಿ ದೇವಸ್ಥಾನದ ರಸ್ತೆಯಲ್ಲಿ ಈ ಹಿಂದೆ ಹಾಕಿದ್ದ ಡಾಂಬರು ಹಾಳಾಗಿದೆ. ಕಂಬಿಗಳು ಮೇಲೆದ್ದು ಸಂಚಾರಕ್ಕೆ ತೀವ್ರ ತೊಂದರೆ ಯಾಗುತಿದೆ. ವಿವೇಕಾನಂದ ಕಾಲೇಜಿನ ವಿದ್ಯಾರ್ಥಿಗಳು ಸಂಚರಿಸು ವಾಗ ಅವರಿಗೆ ಕಂಬಿಗಳಿಂದ ಗಾಯಗಳಾಗಿವೆ. ಸಾರ್ವಜನಿಕರು ಹಾಗೂ ಶಿರಡಿಸಾಯಿಬಾಬಾ ಭಕ್ತರು ಇಲ್ಲಿ ಸಂಚರಿಸುತ್ತಿದ್ದು, ಈ ಬಗ್ಗೆ ಕಳೆದ ತಿಂಗಳು ಪುರಸಭೆ ಎಂಜಿನಿಯರ್ ಅರುಣ್ಕುಮಾರ್ ಗಮನಕ್ಕೆ ತಂದು ರಿಪೇರಿ ಮಾಡಲು ಮನವಿ ಸಲ್ಲಿಸಿದರೂ ಕೂಡ ಯಾವುದೆ ಪ್ರಯೋಜನವಾಗಿಲ್ಲ. ಪಟ್ಟಣದಲ್ಲಿ ಹಲವಾರು ಕಡೆ ಇದೇ ರೀತಿ ರಸ್ತೆಯಲ್ಲಿ ಗುಂಡಿ ಬಿದ್ದು, ಸಂಚಾರಕ್ಕೆ ತೊಂದರೆಯಾಗುತ್ತಿದೆ. ರಸ್ತೆಯಲ್ಲಿರುವ ಗುಂಡಿಗಳನ್ನು ಸರಿಪಡಿಸ ದಿದ್ದರೆ, ಮುಂದಿನ ದಿನಗಳಲ್ಲಿ ಪುರಸಭೆಯ ಮುಂಭಾಗ ಧರಣಿ-ಸತ್ಯಾಗ್ರಹ ಹಮ್ಮಿ ಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ಈ ವೇಳೆ ಮಾನವಹಕ್ಕುಗಳ ತಾ. ಅಧ್ಯಕ್ಷ ಪಳವಳ್ಳಿದಿನೇಶ್, ಮುಖಂಡರಾದ ಅನಿಲ್ಕುಮಾರ್, ಮಾನಂಲೋಕೇಶ್, ವಳ್ಳೂರು ಗೋವಿಂದ, ತಿರುಮಲೇಶ್ನಾಯ್ಡು, ಚಿರಂಜೀವಿ, ಮೋಹನ್ ಕುಮಾರ್, ಅರವಿಂದ್, ಬಾಬುರಾಜೇಂದ್ರ ಮತ್ತಿತರರು ಹಾಜರಿದ್ದರು.
ಪಾವಗಡ ಪಟ್ಟಣದ ಹೊಸಬಸ್ ನಿಲ್ದಾಣದ ರಸ್ತೆಯಲ್ಲಿ ಬಿದ್ದಿರುವ ಗುಂಡಿಯನ್ನು ಮುಚ್ಚುತ್ತಿರುವ ಹೆಲ್ಪ್ ಸೊಸೈಟಿಯ ಮಾನಂಶಶಿಕಿರಣ್ ತಂಡ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ