ಪಾವಗಡ :
ಸಮಾಜ ಕಲ್ಯಾಣ ಇಲಾಖೆ ವತಿಯಿಂದ 24 ಕೋಟಿ ರೂ. ವೆಚ್ಚದಲ್ಲಿ ಆರ್ಯವೈಶ್ಯ ಸ್ಮಶಾನದ ಬಳಿ ನಿರ್ಮಾಣ ಮಾಡು ತ್ತಿರುವ ವಸತಿ ನಿಲಯದ ಕಟ್ಟಡವನ್ನು ಸ್ಥಳಾಂತರಿಸುವಂತೆ ಒತ್ತಾಯಿಸಿ ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಪ್ರತಿಭಟನೆ ನಡೆಸಿದರು.
ಪಟ್ಟಣದ ತುಮಕೂರು ರಸ್ತೆಯ ಆರ್ಯವೈಶ್ಯ ಸ್ಮಶಾನದ ಬಳಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಎಂಟುನೂರು ವಿದ್ಯಾರ್ಥಿಗಳ ಸಾಮಥ್ರ್ಯದ ನಾಲ್ಕು ಅಂತಸ್ತಿನ ವಸತಿ ನಿಲಯದ ಕಟ್ಟಡವನ್ನು ಕಟ್ಟಲಾಗುತ್ತಿದೆ. ಬೇಡವೆಂದರೂ ತಮ್ಮ ಮನವಿಯನ್ನು ಪರಿಶೀಲನೆ ಮಾಡದೆ, ಏಕಾಏಕಿ 24 ಕೋಟಿ ರೂ. ವೆಚ್ಚದ ಕಟ್ಟಡ ನಿರ್ಮಾಣಕ್ಕೆ ಮುಂದಾಗಿರುವುದನ್ನು ವಿರೋಧಿಸಿ ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಕಾಮಗಾರಿ ಸ್ಥಳದಲ್ಲಿ ಪ್ರತಿಭಟನೆ ನಡೆಸಿ, ಕಾಮಗಾರಿ ನಡೆಸಲು ಬಿಡುವುದಿಲ್ಲ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ.
ಇಲ್ಲಿ ಕಾಮಗಾರಿ ಮುಂದುವರೆಸಿದರೆ ಮಕ್ಕಳಿಗೆ ತೊಂದರೆ ಆಗುವ ಬಗ್ಗೆ ಸಂಬಂಧಪಟ್ಟವರಿಗೆ ಮನವಿ ಮಾಡಲಾಗಿದೆ. ಅಲ್ಲದೆ ಕಟ್ಟಡ ನಿರ್ಮಾಣಕ್ಕೆ ಪಟ್ಟಣದ ಬಳ್ಳಾರಿ ರಸ್ತೆಯ ಸರಕಾರಿ ಬಸ್ ಡಿಪೋ ಬಳಿಯೆ ಖಾಲಿ ಸ್ಥಳವಿರುವ ಬಗ್ಗೆ ಸ್ಥಳೀಯ ಶಾಸಕರಿಗೆ, ಇಲಾಖೆಗೆ ಮನವಿ ಮಾಡಿದೆ. ಸ್ಥಳೀಯ ಜನಪ್ರತಿನಿಧಿಗಳು ಪ್ರತಿಷ್ಠೆಗೋಸ್ಕರ ಕಟ್ಟಡ ನಿಮಾಣಕ್ಕೆ ಮುಂದಾಗಿರುವುದು ದುರಂತದ ಸಂಗತಿ ಎಂದ ಅವರು, ಕಟ್ಟಡ ಸ್ಥಳಾಂತರವಾಗದಿದ್ದಲ್ಲಿ ನ್ಯಾಯಕ್ಕಾಗಿ ಸ್ಥಳದಲ್ಲೆ ಧರಣಿ ಸತ್ಯಾಗ್ರಹ ನಡೆಸುತ್ತೇನೆಂದರು.
ಜೆಡಿಎಸ್ ತಾ.ಅಧ್ಯಕ್ಷ ಬಲರಾಮರೆಡ್ಡಿ ಮಾತನಾಡಿ, ಹಲವು ಬಾರಿ ಕಟ್ಟಡ ನಿರ್ಮಾಣದಿಂದ ಇಲ್ಲಾಗುವ ಸಮಸ್ಯೆಗಳ ಬಗ್ಗೆ ಲಿಖಿತವಾಗಿ ಸಂಬಂಧಪಟ್ಟವರಿಗೆ ಮನವರಿಕೆ ಮಾಡಿದೆ. ಆದರೂ ಪ್ರತಿಷ್ಠೆಗೋಸ್ಕರ ಕಟ್ಟಡ ನಿರ್ಮಾಣಕ್ಕೆ ಮುಂದಾಗಿ ದ್ದಾರೆ. ಇದನ್ನು ವಿರೋಧಿಸಿ, ಪಕ್ಷಾತೀತ ಹೋರಾಟಕ್ಕೆ ಮುಂದಾಗುತ್ತೇವೆಂದರು.
ಈ ಸಂದರ್ಭದಲ್ಲಿ ಜಿ.ಎ.ವೆಂಕಟೇಶ್, ಮಣಿ, ಗಂಗಾಧರ್ ನಾಯ್ಡು, ರಾಜಶೇಖರಪ್ಪ, ಜಯಂತ್‍ನಾಗಣ್ಣ, ಸುಹೇಲ್ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
