ಪಾವಗಡ :
ಹಲವು ವರ್ಷಗಳಿಂದ ಪಟ್ಟಣದ ಟೋಲ್‍ಗೇಟ್‍ನಿಂದ ತಹಸೀಲ್ದಾರ್ ಕಚೇರಿಯ ಮುಂಭಾಗದ ಎಸ್‍ವಿಎಸ್ ಅಂಗಡಿ ಬಳಿ ದೊಳ್ಳರ ಹಳ್ಳಕ್ಕೆs ಸಂಪರ್ಕ ಕಲ್ಪಿಸುವ ದೊಡ್ಡ ಚರಂಡಿ (ರಾಜಗಾಲುವೆ) ತ್ಯಾಜ್ಯದಿಂದ ತುಂಬಿದ್ದು, ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಚರಂಡಿ ನೀರು ಪಟ್ಟಣದ ವಿನಾಯಕ ನಗರದ ಸುಮಾರು 150 ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು.
ನೀರು ಸರಾಗವಾಗಿ ಹರಿಯದೇ ರಸ್ತೆಯಲ್ಲೆ ನಿಂತು ಸಂಚಾರಕ್ಕೆ ತೊಂದರೆಯಾಗಿತ್ತು. ಇದರಿಂದ ಎಚ್ಚೆತ್ತ ಪುರಸಭಾ ಅಧಿಕಾರಿಗಳು ಕೊನೆಗೂ ಸಾಕಷ್ಟು ವಿರೋಧದ ನಡುವೆಯೂ ಪೆಟ್ಟಿಗೆ ಅಂಗಡಿಗಳವರು ಒತ್ತುವರಿ ಮಾಡಿಕೊಂಡಿದ್ದ ಚರಂಡಿಯ ದುರಸ್ತಿ ಕಾರ್ಯಕ್ಕೆ ಮುಂದಾಗಿದ್ದಾರೆ.
ಡಿಸಿಸಿ ಬ್ಯಾಂಕ್‍ನವರು, ಡೀಲಕ್ಸ್ ಬೇಕರಿಯವರು, ಪಿಎಲ್‍ಡಿ ಬ್ಯಾಂಕ್‍ನವರು ಸೇರಿದಂತೆ ಹಲವರು ಚರಂಡಿಯ ಮೇಲೆ ಸ್ಲ್ಯಾಬ್‍ಗಳನ್ನು ಹಾಕಿದ್ದರು. ಕೆಲವರು ಪೆಟ್ಟಿಗೆ ಅಂಗಡಿ, ಗೂಡಂಗಡಿಗಳನ್ನು ಇಟ್ಟುಕೊಂಡಿದ್ದರು. ಇದರಿಂದಾಗಿ ಚರಂಡಿ ಕಾಣದಂತೆ ಮಾಯವಾಗಿ, ಚರಂಡಿಯಲ್ಲಿ ಹೂಳು ತುಂಬಿ ಗಬ್ಬು ದುರ್ವಾಸನೆ ಹೊರ ಹೊಮ್ಮತ್ತಿತ್ತು.
ಚರಂಡಿಯ ಮೇಲೆ ಇಟ್ಟಿದ್ದ ಗೂಡಂಗಡಿಗಳನ್ನು, ಪೆಟ್ಟಿಗೆ ಅಂಗಡಿಗಳನ್ನು ತೆರವುಗೊಳಿಸಿ, ಡಿಸಿಸಿಬ್ಯಾಂಕ್‍ಗೆ ಮತ್ತಿತರ ಕಟ್ಟಡಗಳ ಮಾಲೀಕರುಗಳಿಗೆ ತೆರವು ಗೊಳಿಸಲು ಮುಖ್ಯಾಧಿಕಾರಿ ಬಿ.ಸಿ. ಅರ್ಚನಾ ಹಾಗೂ ಅಧ್ಯಕ್ಷರಾದ ರಾಮಾಂಜಿನಪ್ಪ ಗಡುವು ನೀಡಿದ್ದರೂ ಸಹ ಯಾರೂ ತೆರವು ಗೊಳಿಸರಲಿಲ್ಲ. ತೆರವು ಗೊಳಿಸಲು ಪುರಸಭಾ ಆರೋಗ್ಯ ನಿರೀಕ್ಷಕ ಷಂಷುದ್ದೀನ್ ಮತ್ತು ಸಿಬ್ಬಂದಿ ಕಾರ್ಯಾಚರಣೆಗೆ ಇಳಿದಾಗ ಡಿಸಿಸಿ ಬ್ಯಾಂಕ್ ಸಿಬ್ಬಂದಿ ಜೊತೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಈ ವೇಳೆ ಪೋಲೀಸರು ಸ್ಥಳಕ್ಕಾಗಮಿಸಿ ಸಮಸ್ಯೆಯನ್ನು ತಣ್ಣಾಗಾಗಿಸಿದರು. ನಂತರ ಎರಡು ಜೆಸಿಬಿಗಳಿಂದ ಚರಂಡಿ ಹೂಳು ತೆಗೆಯವ ಕಾರ್ಯ ನಡೆಯಿತು.
ಈ ಬಗ್ಗೆ ಮುಖ್ಯಾಧಿಕಾರಿ ಬಿ.ಸಿ. ಅರ್ಚನಾ ಮಾತನಾಡಿ, ಬೆಟ್ಟದ ಮೇಲಿಂದ ಬರುವ ಮಳೆ ನೀರು ಮತ್ತು ಮನೆಗಳ ತ್ಯಾಜ್ಯ ನೀರು ಹರಿದು ರಸ್ತೆಗೂ ಮತ್ತು ಮನೆಗಳಿಗೂ ನುಗ್ಗಿ ತೊಂದರೆಯಾಗುತ್ತಿತ್ತು. ಈ ಚರಂಡಿಯನ್ನು ಒತ್ತುವರಿ ಮಾಡಿಕೊಂಡಿದ್ದರಿಂದ ಚರಂಡಿ ಮುಚ್ಚಿ ಹೋಗಿ, ಮಳೆ ನೀರು ತಗ್ಗು ಪ್ರದೇಶಗಳ ಮನೆಗಳಿಗೆ ಹರಿದು ಅವಾಂತರ ಸೃಷ್ಟಿಸುತ್ತಿತ್ತು. ಹತ್ತಾರು ವರ್ಷಗಳಿಂದ ಈ ಚರಂಡಿ ಗಬ್ಬು ನಾರುತ್ತಿತ್ತು. ಹಲವಾರು ವರ್ಷಗಳಿಂದ ಈ ಚರಂಡಿಯ ಸ್ವಚ್ಛತೆಯ ಕಾರ್ಯಕ್ಕೆ ಸಹ ಅಡ್ಡಿಪಡಿಸಲಾಗುತ್ತಿತ್ತು. ಇದೀಗ ತೆರವು ಕಾರ್ಯ ನಡೆಯುತ್ತಿದೆ. ಇದರ ಜೊತೆಗೆ ಸರ್ಕಾರಿ ಆಸ್ಪತ್ರೆಯ ಮುಂಭಾಗದ ಚರಂಡಿ ಮೇಲೆ ಇಟ್ಟಿರುವ ಪೆಟ್ಟಿಗೆ ಮತ್ತು ಗೂಡಂಗಡಿಗಳನ್ನು ಸಹ ತೆರವುಗೊಳಿಸಲಾಗುವುದು ಎಂದು ತಿಳಿಸಿದರು.
ಹಲವಾರು ವರ್ಷಗಳಿಂದ ಚರಂಡಿ ದುರಸ್ತಿ ಕಾರ್ಯ ಮಾಡದೆ ಪುರಸಭಾ ಅಧಿಕಾರಿಗಳ ಮೇಲೆ ಒತ್ತಡ ಹೇರಲಾಗುತ್ತಿತ್ತು. ಸಾರ್ವಜನಿಕರು ಆದರೆ ಕೊನೆಗೂ ಚರಂಡಿ ದುರಸ್ತಿ ಕಾರ್ಯಕ್ಕೆ ಮುಂದಾಗಿರುವ ಖಡಕ್ ಮುಖ್ಯಾಧಿಕಾರಿ ಅರ್ಚನಾ ಮತ್ತು ಅಧ್ಯಕ್ಷ ರಾಮಾಂಜಿನಪ್ಪ ಮತ್ತು 7 ನೇ ವಾರ್ಡ್ ಸದಸ್ಯ ಬಾಲಸುಬ್ರಹ್ಮಣ್ಯ ರವರಿಗೆ ಅಭಿನಂದನೆ ಸಲ್ಲಿಸಿ, ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ. ಈ ವೇಳೆ ಪುರಸಭಾ ಸಿಬ್ಬಂದಿ ವೇಣುಸ್ವಾಮಿ, ತಿಪ್ಪೇಸ್ವಾಮಿ, ಶಾಂತ್‍ಕುಮಾರ್, ಜಿಲಾನಿ, ಸಿದ್ದಗಂಗಪ್ಪ ಮತ್ತು ಪೌರಕಾರ್ಮಿಕರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ