ಪಾವಗಡ :
ರಸ್ತೆಯ ಭಾರ ಮಿತಿಯನ್ನು ಉಲ್ಲಂಘಿಸಿ ಪ್ರತಿದಿನ ಆಂಧ್ರ ಗಡಿಭಾಗ ಕಂಬದೂರಿನಿಂದ ಜಿಗಣಿಗೆ ಹತ್ತು ಲೋಡ್ ಲಾರಿಗಳು ಓಡಾಡುತ್ತಿವೆ. ಕೋಟ್ಯಂತರ ರೂಪಾಯಿ ವೆಚ್ಚದ ಕೆ-ಶಿಪ್ ರಸ್ತೆಯ ಬಿರುಕಿಗೂ ನಮಗೂ ಸಂಬಂಧವಿಲ್ಲವೆಂಬಂತೆ ಕೈ ಚೆಲ್ಲುತ್ತಿರುವ ಅಧಿಕಾರಿ ವರ್ಗ ಸಾರ್ವಜನಿಕರ ಆಕ್ರೋಶಕ್ಕೆ ಈಡಾಗಿದೆ.
ಹೌದು, ಕಳೆದ ಎರಡು ವರ್ಷಗಳಿಂದ ಆಂಧ್ರ್ರ ಗಡಿಭಾಗ ಕಂಬದೂರಿನಿಂದ ಬೆಂಗಳೂರು ಬಳಿಯ ಜಿಗಣಿಗೆ ಪ್ರತಿ ದಿನ 30 ಟನ್‍ಗೂ ಹೆಚ್ಚು ಭಾರವಿರುವ ಬಂಡೆಗಳನ್ನು ಹೇರಿಕೊಂಡು ಹತ್ತು ಲಾರಿಗಳು ಓಡಾಡುತ್ತಿವೆ. ಅಜಾಗರೂಕತೆ ಹಾಗೂ ಅತಿಯಾದ ವೇಗದಲ್ಲಿ ನಿತ್ಯ ಪಾವಗಡದ ಮಾರ್ಗದಲ್ಲಿ ಸಂಚರಿಸುತ್ತಿವೆ. ಸಾರ್ವಜನಿಕರು ಪ್ರಶ್ನಿಸಿದರೆ, ಕಲ್ಲು ಬಂಡೆಗಳ ಮಾಲೀಕರು ಜನತೆಯ ಮೇಲೆ ದೌರ್ಜನ್ಯಕ್ಕೆ ಇಳಿಯುತ್ತಿದ್ದಾರೆ. ಸಂಬಂಧಪಟ್ಟವರು ಇವರ ಮೇಲೆ ಸೂಕ್ತ ಕ್ರಮ ಕೈಗೊಳ್ಳ ಬೇಕೆಂಬ ಒತ್ತಾಯ ಕೇಳಿ ಬಂದಿದೆ.
ವೈ.ಎನ್.ಹೊಸಕೋಟೆ, ಪಾವಗಡ, ತಿರುಮಣಿ, ಮಿಡಿಗೇಶಿ, ಮಧುಗಿರಿ, ಕೊರಟಗೆರೆ ಪೋಲೀಸರಿಗೆ ಪ್ರತಿ ವಾರ ಮಾಮೂಲಿ ನೀಡಿ, ಬಂಡೆ ಸಾಗಿಸಲಾಗುತ್ತಿದೆ ಎಂಬ ದರ್ಪದಿಂದ ಗ್ರಾನೈಟ್ ಬಂಡೆ ಮಾಲೀಕ ಮಂಜುನಾಥ ಸಾರ್ವಜನಿಕರ ಮೇಲೆ ದೌರ್ಜನ್ಯಕ್ಕೆ ಮುಂದಾಗುತ್ತಿದ್ದಾರೆ. ಮಧುಗಿರಿ ಎಆರ್‍ಟಿಓ ಸೇರಿದಂತೆ ನೀವು ಯಾರನ್ನು ಬೇಕಾದರೂ ಕರೆಸಿ, ನಾವು ಅವರ ಮುಂದೆಯೆ ಬಂಡೆಯ ಲಾರಿಗಳನ್ನು ಓಡಿಸುತ್ತೇವೆ ಎಂದು ದಬ್ಬಾಳಿಕೆ ನಡೆಸಿದ ಘಟನೆ ದೊಡ್ಡಹಳ್ಳಿ ಗ್ರಾಮದಲ್ಲಿ ನಡೆದಿದೆ. ಬಂಡೆಗಳನ್ನು ಸಾಗಿಸುವ ಲಾರಿಗಳಿಗೆ ಪ್ರತಿನಿತ್ಯ ಪರ್ಮಿಟ್ ಹಾಗೂ ಸರಕಾರಕ್ಕೆ ರಾಯಲ್ಟಿ ಪಾವತಿಸಬೇಕಿದೆ. ಆದರೆ ಎರಡು ಲಾರಿಗಳಿಗೆ ಪರವಾನಗಿ ಪಡೆದು, ಕಳ್ಳದಾರಿಯಲ್ಲಿ ಹತ್ತು ಲಾರಿಗಳನ್ನು ಓಡಿಸಲಾಗುತ್ತಿದೆ. ಬೃಹತ್ ಬಂಡೆಗಳ ಸಾಗಾಣಿಕೆಯಿಂದ ಕರ್ನಾಟಕ ಗಡಿಯಿಂದ ಪಾವಗಡದವರೆಗೂ ಕೆ-ಶಿಪ್ ರಸ್ತೆ ಹಾಳಾಗುತ್ತಿದೆ. ಕೆ-ಶಿಪ್ ವತಿಯಿಂದ 40 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ರಸ್ತೆಯಲ್ಲಿ ಗುಂಡಿಗಳು ಬಿದ್ದಿವೆ. ಗುಂಡಿಗಳಿಗೆ ತ್ಯಾಪೆ ಹಾಕುವ ಬದಲು ರಸ್ತೆಯನ್ನು ರಕ್ಷಣೆ ಮಾಡುವ ಕಡೆಗೆ ಇಲಾಖೆ ಗಮನ ಹರಿಸಬೇಕಿದೆ.
ಶಿವಮೊಗ್ಗ, ಚಿಕ್ಕಬಳ್ಳಾಪುರ ಜಿಲ್ಲೆಯ ಹಿರೆನಾಗವಲ್ಲಿ ಗ್ರಾಮದಲ್ಲಿ ಜಿಲೆಟಿನ್ ಬ್ಲಾಸ್ಟ್ ಆಗಿ ನಾಲ್ಕು ಮಂದಿ ಸಾವಪ್ಪಿದ್ದರು. ನಂತರ ರಾಜ್ಯದಲ್ಲಿ ಕಲ್ಲು ಗಣಿಗಾರಿಕೆಗೆ ಕಡಿವಾಣ ಹಾಕಿ ವಾರಕ್ಕೊಮ್ಮೆ ಕಲ್ಲು ಬ್ಲಾಸ್ಟ್ ಮಾಡಲು ಅವಕಾಶ ನೀಡಿದ ನಂತರ, ನಮ್ಮ ಪಾವಗಡ ಗಡಿ ಆಂಧ್ರ್ರಪ್ರದೇಶದಿಂದ ಬೆಂಗಳೂರಿನ ಜಿಗಣಿಗೆ ಗ್ರಾನೈಟ್ ಬಂಡೆ ಸಾಗಾಣಿಕೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಸರಕಾರದ ಬೊಕ್ಕಸಕ್ಕೆ ನಷ್ಟವಾದರೆ, ಪೋಲೀಸ್ ಇಲಾಖೆ ಹಾಗೂ ಎಆರ್‍ಟಿಒಗಳಿಗೆ ವರದಾನವಾಗಿದೆ. ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳ ವೈಫÀಲ್ಯದಿಂದ ಪೋಲಿಸ್ ಇಲಾಖೆಯು ವಾಮ ಮಾರ್ಗದಲ್ಲಿ ಸಹಕಾರ ನೀಡುತ್ತಿದೆ ಎಂಬ ಕೂಗು ಕೇಳಿ ಬಂದಿದೆ.
-ಅನಿಲ್‍ಕುಮಾರ್, ಲೋಕೋಪಯೋಗಿ ಇಲಾಖೆ ಎಇಇ, ಪಾವಗಡ
ಬೃಹತ್ ಗಾತ್ರದ ಕಲ್ಲು ಬಂಡೆಗಳ ಸಾಗಾಣಿಕೆಯಿಂದ ರಸ್ತೆ ಬಿರುಕು ಬಿಟ್ಟು ಹಾಳಾಗಿ ಗುಂಡಿಗಳು ಬಿದ್ದಿವೆ, ಸಂಬಂಧಪಟ್ಟವರು ಅಗತ್ಯ ಕ್ರಮ ಕೈಗೊಳ್ಳದ ಪಕ್ಷದಲ್ಲಿ ಗ್ರಾನೈಟ್ ಲಾರಿಗಳನ್ನು ತಡೆದು ನಿಲ್ಲಿಸಲಾಗುವುದು.
-ಲಕ್ಷ್ಮೀವೀರೇಶ್, ಅಧ್ಯಕ್ಷರು, ಚಿಕ್ಕಹಳ್ಳಿ ಗ್ರಾಪಂ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
