ಪಾವಗಡ : ಸ್ವಾಮಿ ವಿವೇಕಾನಂದ ಆರೋಗ್ಯ ಕೇಂದ್ರಕ್ಕೆ ಡಿಎಚ್‍ಒ ಭೇಟಿ

 ಪಾವಗಡ : 

      ಜಿಲ್ಲಾ ಆರೋಗ್ಯಾಧಿಕಾರಿಗಳಾದ ಡಾ.ನಾಗೇಂದ್ರಪ್ಪ ರವರು ಶುಕ್ರವಾರ ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರ ಮತ್ತು ಶ್ರೀ ಶಾರದಾದೇವಿ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿ ಕೇಂದ್ರದ ಮುಖ್ಯಸ್ಥರಾದ ಸ್ವಾಮಿ ಜಪಾನಂದಜೀ ರವರೊಂದಿಗೆ ಎಲ್ಲಾ ಯೋಜನೆಗಳ ಬಗ್ಗೆ ಚರ್ಚಿಸಿದರು.

      ಕೋವಿಡ್19 ಭಯಾನಕ ಸ್ಥಿತಿಯಲ್ಲಿಯೂ ನಿರಂತರವಾಗಿ ಗ್ರಾಮಾಂತರ ಜನರಿಗೆ ಸರ್ವ ರೀತಿಯ ಆರೋಗ್ಯ ತಪಾಸಣೆಗಳನ್ನು ನಡೆಸುತ್ತಾ ಬರುತ್ತಿರುವುದು ಹಾಗೂ ಆರೋಗ್ಯ ಇಲಾಖೆಯೊಂದಿಗೆ ಸರ್ವ ರೀತಿಯಲ್ಲಿ ಸಹಕಾರ ನೀಡುತ್ತಾ ಬರುತ್ತಿರುವುದು ಶ್ಲಾಘನೀಯ ಸಂಗತಿಯಾಗಿದೆ.

      ತುಮಕೂರು ಜಿಲ್ಲೆಯಲ್ಲಿಯೇ ಕೇವಲ ಎರಡು ಅಥವಾ ಮೂರು ಕಡೆ ಮಾತ್ರ ಕಣ್ಣಿನ ಶಸ್ತ್ರ ಚಿಕಿತ್ಸೆಗಳು ಎಂದಿನಂತೆ ನಡೆಯುತ್ತಿದ್ದು ಶ್ರೀ ಶಾರದಾದೇವಿ ಕಣ್ಣಿನ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ ಈ ಭಯಾನಕ ಸ್ಥಿತಿಯಲ್ಲಿಯೂ ಎದೆಗುಂದದೆ ಎಲ್ಲ ರೀತಿಯ ಜಾಗರೂಕತೆಗಳನ್ನು ವಹಿಸಿಕೊಂಡು ಅಂದರೆ ವಿಶೇಷವಾದ ಮುಖಗವಸು, ಶುದ್ಧೀಕರಣದ ಸುರಂಗ, ಶುಚಿಯಾದ ಪರಿಸರ ಮತ್ತು ಊಟೋಪಚಾರಗಳ ವ್ಯವಸ್ಥೆ ಹೀಗೆ ಪ್ರತಿಯೊಂದರಲ್ಲಿಯೂ ಹೆಚ್ಚಿನ ಗಮನವನ್ನು ನೀಡುತ್ತಾ ಶಸ್ತ್ರಚಿಕಿತ್ಸೆಯಾದ ನಂತರ ಸಂಸ್ಥೆಯ ವಾಹನದಲ್ಲಿಯೇ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಜನರಿಗೆ ಸಂಚಾರದ ವ್ಯವಸ್ಥೆಯನ್ನು ಮಾಡುತ್ತಿರುವುದನ್ನು ಸ್ವತಃ ಅಧಿಕಾರಿಗಳು ವೀಕ್ಷಿಸಿದರು.

      ಇದೇ ಸಂದರ್ಭದಲ್ಲಿ ಇಡೀ ರಾಜ್ಯದಲ್ಲಿಯೇ ಹಾಗೂ ಜಿಲ್ಲೆಯಲ್ಲಿಯೇ ಅನೇಕ ರೀತಿಯ ತೊಂದರೆ ತೊಡಕುಗಳನ್ನು ಎದುರಿಸುತ್ತಿರುವ ಆರೋಗ್ಯ ಇಲಾಖೆ ತನ್ನ ಕಾರ್ಯಗಳನ್ನು ನೆರವೇರಿಸುವುದರಲ್ಲಿ ಕಷ್ಟಪಡುತ್ತಿರುವ ಸ್ಥಿತಿಯಲ್ಲಿ ಸ್ವಾಮಿ ವಿವೇಕಾನಂದ ಗ್ರಾಮಾಂತರ ಆರೋಗ್ಯ ಕೇಂದ್ರ ಮತ್ತು ಶ್ರೀ ಶಾರದಾದೇವಿ ಕಣ್ಣಿನ ಆಸ್ಪತ್ರೆ ನಡೆಸುತ್ತಿರುವ ನಿರಂತರ ಸೇವೆ ಹಾಗೂ ಮುಖ್ಯವಾಗಿ ಸಂಸ್ಥೆಯ ಎಲ್ಲ ಸಿಬ್ಬಂದಿಯು ಮತ್ತು ಅತಿ ಮುಖ್ಯವಾಗಿ ಮುಖ್ಯ ವೈದ್ಯಾಧಿಕಾರಿಗಳು ತಮ್ಮ ಜೀವನವನ್ನೇ ಪಣವಾಗಿಟ್ಟು ಶಸ್ತ್ರಚಿಕಿತ್ಸೆಗಳನ್ನು ನಡೆಸುತ್ತಿರುವುದು ನಿಜಕ್ಕೂ ಆಶ್ಚರ್ಯಕರವಾಗಿದೆ ಎಂದರು.

      ಜನ ಸಾಮಾನ್ಯರು ತಿಳಿದಂತೆ ಶಸ್ತ್ರಚಿಕಿತ್ಸೆಯನ್ನು ಈ ಭಯಾನಕ ಸ್ಥಿತಿಯಲ್ಲಿ ನಡೆಸುವುದು ಎಂದರೆ ಆರೋಗ್ಯ ಸೇವೆ ನೀಡುವ ಸಿಬ್ಬಂದಿ ಹಾಗೂ ಇತರರಿಗೆ ಸರ್ವ ರೀತಿಯ ಸೋಂಕಿನ ಹರಡುವಿಕೆಯ ಭಯವಿದ್ದರೂ ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ನಡೆಯುತ್ತಿರುವ ಈ ಸಂಸ್ಥೆ ಎಲ್ಲವನ್ನೂ ಮೆಟ್ಟಿ ಧೈರ್ಯವಾಗಿ ಶಸ್ತ್ರಚಿಕಿತ್ಸೆಗಳನ್ನು ಹಾಗೂ ಇತರ ಆರೋಗ್ಯ ಸೇವೆಗಳನ್ನು ನಡೆಸುತ್ತಿರುವುದು ಶ್ಲಾಘನೀಯ ಎಂದು ವಿವರಿಸಿದರು. ಇದೇ ಸಂದರ್ಭದಲ್ಲಿ ಕ್ಷಯರೋಗ, ಕುಷ್ಠರೋಗ ಹಾಗೂ ಅಂಧತ್ವ ನಿವಾರಣೆಯ ಯೋಜನೆಗಳನ್ನು ಪರಿವೀಕ್ಷಿಸಿದರು.

      ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳಾದ ಡಾ.ಚಂದ್ರಕಲಾ, ಡಾ.ಅಭಿಷೇಕ್ ಮತ್ತು ಇತರ ವೈದ್ಯರುಗಳಾದ ಡಾ.ಶ್ರಾವಂತಿ, ಡಾ.ದೀಕ್ಷಾ (ಮಿಂಟೋ ಆಸ್ಪತ್ರೆಯ ಹಿರಿಯ ವೈದ್ಯರುಗಳು) ಮತ್ತಿತರ ಸಿಬ್ಬಂದಿಯೊಂದಿಗೆ ಮಾತನಾಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap