ಪಾವಗಡ : ಜ್ವರ-ನೆಗಡಿ ಬಂದರೂ ಆಸ್ಪತ್ರೆಗೆ ಹೋಗಲು ಜನರ ಹಿಂದೇಟು

ಪಾವಗಡ : 

      ತಾಲ್ಲೂಕಿನಲ್ಲಿ ಕೊರೋನಾ ಆರ್ಭಟದ ಹಿನ್ನೆಲೆಯಲ್ಲಿ ಸಾರ್ವಜನಿಕರು ಜ್ವರ, ನೆಗಡಿ, ತಲೆನೋವು ಯಾವುದೇ ಕಾಯಿಲೆ ಬಂದರೂ ಕೊರೋನಾ ವೈರಸ್‍ಗೆ ಹೆದರಿ, ನಮ್ಮನ್ನೂ ಸೋಂಕಿತರೆಂದು ಗುರುತಿಸುತ್ತಾರೇನೊ ಎಂಬ ಭಯಕ್ಕೆ ಆಸ್ಪತ್ರೆಗಳ ಕಡೆ ಮುಖ ಮಾಡದೆ ಭಯದಿಂದ ತತ್ತರಿಸಿದ್ದಾರೆ.

      ಜ್ವರ, ನೆಗಡಿ ಬಂದು ಚಿಕಿತ್ಸೆಗೆಂದು ಆಸ್ಪತ್ರೆಗೆ ಹೋದವರಿಗೆಲ್ಲ ಕೊರೋನಾ ಸೋಂಕು ದೃಢ ಪಟ್ಟರೆ ಕ್ವಾರೆಂಟೈನ್‍ಗೆ ಸೇರಿಸುತ್ತಾರೆ ಎಂದು ಭಯದಿಂದ ಸಾರ್ವಜನಿಕರು ಚಿಕಿತ್ಸೆಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

      ಪಾವಗಡ ತಾಲ್ಲೂಕಿನಲ್ಲಿ 34 ಗ್ರಾಪಂ ಕೇಂದ್ರಗಳಿವೆ. ಗ್ರಾಮೀಣ ಪ್ರದೇಶದಲ್ಲಿ ಕೊರೋನಾ ವೈರಸ್ ಕಾಯಿಲೆ ಬಗ್ಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ, ಆಶಾ ಕಾರ್ಯಕರ್ತರು, ಶಿಕ್ಷಕರು, ಗ್ರಾಮ ಸಹಾಯಕರು, ಅಂಗನವಾಡಿ ಕಾರ್ಯಕರ್ತರು ಸೇರಿ ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಿದ್ದಾರೆ. ಇದಕ್ಕಾಗಿ ತಾಲ್ಲೂಕು ಆಡಳಿತ ಒಂದು ತಂಡವನ್ನೆ ರಚಿಸಿದೆಯಾದರೂ ಅರಿವು ಕೊರತೆಯಿಂದ ಸಾರ್ವಜನಿಕರು ಆಸ್ಪತ್ರೆಯಲ್ಲಿ ತೋರಿಸಿಕೊಳ್ಳಲು ಹಿಂದೆ ಮುಂದೆ ನೋಡುತ್ತಿದ್ದಾರೆ ಎಂಬು ಪ್ರಜ್ಞಾವಂತ ನಾಗರಿಕರ ಅಭಿಪ್ರಾಯವಾಗಿದೆ.

       2020 ರ ಮಾರ್ಚಿ ತಿಂಗಳ ತನಕ ಸೋಂಕಿತರ ಸಂಖ್ಯೆ 3091, ಬಿಡುಗಡೆ ಗೊಂಡವರ ಸಂಖ್ಯೆ 2504, ಒಟ್ಟು ಸಕ್ರಿಯ ಪ್ರಕರಣಗಳು 544, ಕೋವಿಡ್ ಕಾರಣದಿಂದ ಸತ್ತವರು 25, ಕೋವಿಡ್ ಜೊತೆ ಅನ್ಯ ಕಾರಣದಿಂದ ಮರಣ ಹೊಂದಿದವರು ಸಂಖ್ಯೆ 18, ಒಟ್ಟು ಮರಣ 43 ಇತ್ತು. ಇತ್ತೀಚೆಗೆ ಕೊರೋನಾ ಆರ್ಭಟ ಜೋರಾಗಿದ್ದು, ಜನ ಸಾಮಾನ್ಯರು ಹಗಲು ರಾತ್ರಿಯೆನ್ನದೆ ಭಯಾಂತಂಕದಿಂದ ಜೀವನ ಮಾಡುವಂತಾಗಿದೆ.

      ಆಂಧ್ರದ ಗಡಿ ಭಾಗದಿಂದ ಬರುವ ಜನರನ್ನು ತಪಾಸಣೆ ನಡೆಸಿ ತಾಲ್ಲೂಕಿನಲ್ಲಿ ಬಿಡುತ್ತಿದ್ದರು. ಇದನ್ನು ಸಹ ತಾಲ್ಲೂಕು ಆಡಳಿತ ಮಾಡುತ್ತಿಲ್ಲ ಎಂಬ ಮಾಹಿತಿ ತಿಳಿದು ಬಂದಿದ್ದು, ತಾಲ್ಲೂಕಿನ ಗಡಿ ಭಾಗದಲ್ಲಿ ಚೆಕ್ ಪೋಸ್ಟ್ ಇಟ್ಟರೂ ಸಹ, ಒಳಗಡೆ ಬರುವ ವ್ಯಕ್ತ್ತಿಗಳಿಗೆ ಕೋವಿಡ್ ತಪಾಸಣೆ ನಡೆಸಿದೆಯೋ ಇಲ್ಲವೋ ಎಂದು ತನಿಖೆ ಮಾಡಿ, ನಂತರ ಇವರನ್ನು ಗಡಿ ಒಳಗೆ ಬಿಡಬೇಕಿತ್ತು. ಇದನ್ನು ತಾಲ್ಲೂಕು ಅಧಿಕಾರಿಗಳು ಮಾಡುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

      ಈ ಹಿಂದೆ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಗಡಿ ಭಾಗದಲ್ಲಿ ಕಟ್ಟುನಿಟ್ಟಾಗಿ ತಾಲ್ಲೂಕು ಆಡಳಿತ ಬಿಗಿ ಬಂದೊಬಸ್ತ್ ಮಾಡುತ್ತಿದ್ದರು. ಆದರೆ ತಾಲ್ಲೂಕಿನಲ್ಲಿ ಕೋವಿಡ್ ವೈರಸ್ ಹೆಚ್ಚಿದ್ದರೂ ಏಕೆ ಕ್ರಮ ವಹಿಸುತ್ತಿಲ್ಲ ಎಂಬ ಪ್ರಶ್ನೆ ವ್ಯಕ್ತವಾಗಿದೆ.

      ಆಂಧ್ರದಿಂದ ಮದ್ಯಪನ ಚಟಕ್ಕಾಗಿ ತಾಲ್ಲೂಕಿನ ಗಡಿ ಭಾಗದ ಗ್ರಾಮಗಳಿಗೆ ಪ್ರತಿನಿತ್ಯ ಜನರು ಬರುತ್ತಿದ್ದು, ಚೆಕ್ ಪೋಸ್ ತಪ್ಪಿಸಿ, ಕಳ್ಳ ದಾರಿಯಲ್ಲಿ ಬಂದು ಹೋಗುತ್ತಿದ್ದಾರೆ ಎಂಬ ಮಾಳ್ಳಿದೆ. ಇಂತಹ ದಾರಿಗಳಿಗೆ ಕಡಿವಾಣ ಹಾಕಲು ಅಬಕಾರಿ ಇಲಾಖೆ ಮುಂದಾಗಬೇಕಾಗಿದೆ. ಆದರೆ ಅಬಕಾರಿ ಇಲಾಖೆ ಈ ಕೆಲಸ ಮಾಡುವಲ್ಲಿ ವಿಫಲವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಗಡಿ ಗ್ರಾಮಗಳಲ್ಲಿ ರಾಜಾರೋಷ ಮದ್ಯ ಮಾರಾಟ :

      ಕೊರೋನಾ ವೈರಸ್‍ನಿಂದ ತಾಲ್ಲೂಕಿನ ಜನತೆ ಭಯ ಭಿತರಾಗಿದ್ದಾರೆ. ಇಂತಹ ಸಮಯದಲ್ಲಿ ಗಡಿ ಭಾಗಗಳಾದ, ವಿರುಪಸಮುದ್ರ, ಅರಸೀಕೆರೆ, ರಾಜವಂತಿ, ಕೊಡಮಡಗು, ದೊಡ್ಡಹಳ್ಳಿ, ವೈ.ಎನ್.ಹೊಸಕೋಟೆ, ಲಿಂಗದಹಳ್ಳಿ ಇನ್ನೂ ಮುಂತಾದ ಹಳ್ಳಿಗಳ ಚಿಲ್ಲರೆ ಅಂಗಡಿಗಳಲ್ಲಿ ದುಬಾರಿ ಬೆಲೆಗೆ ಮದ್ಯ ಮಾರಾಟ ನಡೆಯುತ್ತಿದೆ. ಗ್ರಾಮೀಣರು ಹಾಗೂ ಆಂಧ್ರದಿಂದ ಕುಡುಕರು ಪ್ರತಿನಿತ್ಯ ಬಂದು-ಹೋಗುತ್ತಿದ್ದಾರೆ ಎಂದು ಗಡಿ ಗ್ರಾಮಸ್ಥರು ಆರೋಪಿಸಿದ್ದಾರೆ.

ದುಬಾರಿ ಬೆಲೆಗೆ ಮದ್ಯ ಮಾರುವ ವರ್ತಕರು :

      ಸರ್ಕಾರ 14 ದಿನಗಳ ಕಾಲ ಲಾಕ್ ಡೌನ್ ಮಾಡಿದ ನಂತರ ದಿನ ಬಳಕೆ ವಸ್ತುಗಳ ಬೆಲೆ ತಾಲ್ಲೂಕಿನಲ್ಲಿ ದಿಢೀರನೆ ಹೇರಿಕೆಯಾಗಿದೆ. ವರ್ತಕರನ್ನು ಅತಿ ಹೆಚ್ಚು ಬೆಲೆ ಬಗ್ಗೆ ಜನತೆ ಪ್ರಶ್ನಿಸಿದರೆ, ಸ್ಟಾಕ್ ಇಲ್ಲ, ಬೇಕಾದ್ರೆ ತಗೊಳ್ಳಿ ಇಲ್ಲದಿದ್ದರೆ ಬಿಡಿ ಎಂದು, ವಿಧಿ ಇಲ್ಲದೆ ಹೆಚ್ಚು ಬೆಲೆ ತೆತ್ತು ಕೊಳ್ಳುವವರಿಗೆ ಸರಕು ನೀಡುವ ಮೂಲಕ ಸುಲಿಗೆ ಮಾಡುತ್ತಿದ್ದಾರೆ ಎಂದು ಗ್ರಾಹಕರು ತಮ್ಮ ಅಳಲು ಆಗ್ರಹಿಸಿದ್ದಾರೆ.

ಗುಟ್ಕ ಐಟಮ್ ಕೊಳ್ಳುವವರಿಗೆ ದುಪ್ಪಟ್ಟು ಬೆಲೆ :

      ತಾಲ್ಲೂಕಿನಲ್ಲಿ ಹೋಲ್‍ಸೇಲ್ ವ್ಯಾಪಾರದ ಏಜೆಂಟ್‍ಗಳು ಗೋಡಾನ್‍ಗಳಲ್ಲಿ ಸರಕುಗಳನ್ನು ಶೇಖರಿಸಿ, ವಸ್ತುಗಳಿಗೆ ಬೇಡಿಕೆ ಸೃಷ್ಟಿಸಿಕೊಂಡು ದುಪ್ಪಟ್ಟು ಬೆಲೆಗೆ ಚಿಲ್ಲರೆ ಅಂಗಡಿ ಮಾಲೀಕರಿಗೆ ಮಾರುತ್ತಿದ್ದಾರೆ. ಗ್ರಾಹಕರಿಗೆ ದುಬಾರಿ ಬೆಲೆಗೆ ಚಿಲ್ಲರೆ ಅಂಗಡಿ ಮಾಲೀಕರು ಮಾರುತ್ತಿದ್ದು, ಇದನ್ನು ಪ್ರಶ್ನಿಸಿದರೆ ನಮಗೂ ಲಾಭ ಬೇಡವೆ ಎಂದು ಗ್ರಾಹಕರಿಗೇ ತಿರುಗಿ ಪ್ರಶ್ನಿಸುತ್ತಿದ್ದಾರೆ ಎಂದು ಸಾರ್ವಜನಿಕರು ವಾಸ್ತವವನ್ನು ಮುಂದಿಡುತ್ತಿದ್ದಾರೆ.

       ಗುಟ್ಕ ಏಜೆಂಟರ ಗೋಡಾನ್‍ಗಳಲ್ಲಿ ತನಿಖೆ ಮಾಡಿದರೆ ಸಾಕು ಎಷ್ಟು ಸ್ಟಾಕ್ ಇದೆ ಎಂದು ಬಯಲಾಗುವುದರಲ್ಲಿ ಸಂಶಯವಿಲ್ಲ. ಕೊರೊನಾ ವೈರಸ್‍ನಿಂದ ಜನತೆ ಕೆಲಸ ಇಲ್ಲದೆ ಮನೆಯಲ್ಲಿ ಕುಳಿತು ಕಾಲಹರಣ ಮಾಡಲು, ದುಷ್ಟ ವ್ಯಸನಗಳಿಂದ ಚಟ ತೀರಿಸಿಕೊಳ್ಳುವ ಕೆಲ ಜನ ಬೀಡಿ, ಸಿಗರೇಟ್, ಹನ್ಸ್, ಪಾನ್‍ಬೀಡಗಳನ್ನು ದುಬಾರಿ ಬೆಲೆ ತೆತ್ತು ಕೊಳ್ಳುತ್ತಿದ್ದಾರೆ. ಈ ದೌರ್ಬಲ್ಯವನ್ನು ವಂಚಕರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಗ್ರಾಹಕರು ಕಂಗೆಟ್ಟಿದ್ದು, ಏಜೆಂಟರು ದುಬಾರಿ ಬೆಲೆಗೆ ಮಾರುವುದಲ್ಲದೆ ಗೋಡಾನ್‍ಗಳಲ್ಲಿ ಸ್ಟಾಕ್ ಮಾಡಿಕೊಂಡು, ಅಭಾವ ಸೃಷ್ಟಿಸಿ ಬೇಡಿಕೆ ಹೆಚ್ಚಿಸಿಕೊಂಡು ಗ್ರಾಹಕರಿಗೆ ಮೋಸವೆಸಗುತ್ತಿದ್ದಾರೆ. ಇಂತಹವರ ಮೇಲೆ ಸಂಬಂಧಪಟ್ಟ ಅಧಿüಕಾರಿಗಳು ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಪ್ರಜ್ಞಾವಂತ ನಾಗರಿಕರು ಒತ್ತಾಯಿಸಿದ್ದಾರೆ.

ತಾಲ್ಲೂಕಿನ 7 ಗ್ರಾಪಂಗಳು ಹಾಟ್ ಸ್ವಾಟ್ ಜ್ಹೋನ್‍ನಲ್ಲಿ :

      ಪಾವಗಡ ತಾಲ್ಲೂಕಿನಲ್ಲಿ ಹೆಚ್ಚು ಕೊರೊನಾ ಪ್ರಕರಣಗಳಿರುವ 7 ಗ್ರಾಮ ಪಂಚಾಯಿತಿಗಳನ್ನು ಕೊರೊನಾ ಹಾಟ್ ಸ್ಪಾಟ್ ಎಂದು ಜಿಲ್ಲಾಡಳಿತ ಗುರುತಿಸಿದೆ. ಈ ಗ್ರಾಪಂಗಳಲ್ಲಿ ಸೋಂಕು ವ್ಯಾಪಕವಾಗಿ ಹರಡುತ್ತಿರುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ
ಇಲ್ಲಿನ ಜನರು ಅನಗತ್ಯವಾಗಿ ಯಾವುದೇ ಕಾರಣಕ್ಕೂ ಮನೆಯಿಂದ ಹೊರಬಾರದೆ ಕಟ್ಟುನಿಟ್ಟಾಗಿ ನಿಯಮ ಪಾಲಿಸುವಂತೆ ನೋಡಿ ಕೊಳ್ಳುವ ಜವಾಬ್ದಾರಿ ತಾಲ್ಲೂಕು ಆಡಳಿತಕ್ಕೆ ನೀಡಿದ್ದಾರೆ.

ಕೊರೋನಾ ಹಾಟ್ ಸ್ಪಾಟ್ ಗ್ರಾಪಂಗಳು :

      ವೆಂಕಟಾಪುರ, ರಾಜವಂತಿ, ಕನ್ನಮೇಡಿ, ಕೆ.ಟಿ.ಹಳ್ಳಿ, ವೈ.ಎನ್. ಹೊಸಕೋಟೆ, ಅಚ್ಚಮ್ಮನಹಳ್ಳಿ, ಕೋಟಗುಡ್ಡ ಗ್ರಾಮ ಪಂಚಾಯಿತಿಗಳನ್ನು ಹಾಟ್‍ಸ್ಪಾಟ್ ಪ್ರದೇಶಗಳೆಂದು ಗುರುತಿಸಲಾಗಿದೆ. ಈ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸಾರ್ವಜನಿಕರು ಮನೆ ಬಿಟ್ಟು ಹೊರಗಡೆ ಬಾರದೆ, ಕಟ್ಟುನಿಟ್ಟಾಗಿ ನಿಯಮ ಪಾಲಿಸಬೇಕೆಂದು ತಾಲ್ಲೂಕು ಆಡಳಿತ ಸೂಚಿಸಿದೆ.

ತಾಲ್ಲೂಕು ವೈದ್ಯಾಧಿಕಾರಿಗಳ ಸಿಬ್ಬಂದಿ ಸಹಕರಿಸುತ್ತಿಲ್ಲ :

      ತಾಲ್ಲೂಕು ವೈದ್ಯಾಧಿಕಾರಿಗಳ ಸಿಬ್ಬಂದಿ ಸಹಕರಿಸುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಸಿಬ್ಬಂದಿ ಸಹಕಾರ ನೀಡಲಿಲ್ಲವೆಂದರೆ ಕೊರೊನಾ ವೈರಸ್‍ನ್ನು ಯಾವ ರೀತಿ ನಿಯಂತ್ರಿಸಲು ಸಾಧ್ಯ? ಆರೋಗ್ಯ ಇಲಾಖೆ ಅಧಿಕಾರಿಗಳು ಕೊರೊನಾ ಸೆಂಟರ್‍ಗಳಿಗೆ ಹಾಗೂ ಹಾಟ್‍ಸ್ಪಾಟ್ ಗ್ರಾಪಂಗಳಿಗೆ ಭೇಟಿ ನೀಡಬೇಕಾದರೆ ಎರಡು ವಾಹನಗಳು ಮಾತ್ರ ಇವೆ ಎಂಬ ಮಾಹಿತಿ ಇದ್ದು, ಯಾವ ರೀತಿ ಜನರಿಗೆ ಸೇವೆ ಸಲ್ಲಿಸಲು ಸಾಧ್ಯ? ಜಿಲ್ಲಾಧಿಕಾರಿಗಳು ತಕ್ಷಣವೆ ಮಾಹಿತಿ ಸಂಗ್ರಹಿಸಿ ಬೇರೆ ಇಲಾಖೆಗಳ ವಾಹನಗಳನ್ನು ಬಳಸಿಕೊಂಡು ಜನ ಸೇವೆ ಮಾಡಲು ಮುಂದಾಗ ಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.

      ಖಾಸಗಿ ಬಸ್ ನಿಲ್ದಾಣ ಜನಸಂದಣಿಯಿಂದ ಕೂಡಿರುತ್ತಿತ್ತು. ಸರ್ಕಾರ 14 ದಿನಗಳ ಕಾಲ ಲಾಕ್‍ಡೌನ್ ಘೋಷಣೆ ಮಾಡಿದ ತಕ್ಷಣ ಜನ ಇಲ್ಲದೆ ಬಿಕೋ ಎನ್ನುತ್ತಿದೆ. ಜನರು ಅಗತ್ಯ ಇರುವ ಕಾರ್ಯಗಳಿಗೂ ಬರಲು ಸಾಧ್ಯವಿಲ್ಲದೆ, ಬಸ್ ಸೌಲಭ್ಯ ಇಲ್ಲದೆ ಪರದಾಡುವಂತಹ ಪರಿಸ್ಥಿತಿ ಉಂಟಾಗಿದೆ.

-ಎಚ್.ರಾಮಾಂಜಿನಪ್ಪ

Recent Articles

spot_img

Related Stories

Share via
Copy link
Powered by Social Snap