ಪಾವಗಡ :
ದಕ್ಷಿಣ ಭಾರತದ ಎರಡನೆ ಹಂಪೆ ಎಂದು ಖ್ಯಾತಿ ಪಡೆದಿರುವ ನಿಡಗಲ್ ಮಹರ್ಷಿ ವಾಲ್ಮೀಕಿ ಗುರು ಪೀಠಕ್ಕೆ ತುಮಕೂರಿನ ಪತಂಜಲಿ ಯೋಗ ಸಮಿತಿಯ ಪದಾಧಿಕಾರಿಗಳು ಭೇಟಿ ನೀಡಿ ಸಂಜಯ್ ಕುಮಾರ ಸ್ವಾಮೀಜಿಯಿಂದ ಆಶೀರ್ವಾದ ಪಡೆದರು.
ಸ್ವಾಮೀಜಿ ಪತಂಜಲಿ ಯೋಗ ಸಮಿತಿಯ ಪದಾಧಿಕಾರಿಗಳಿಗೆ ಆಶಿರ್ವಚನ ನೀಡಿ, ನಿಡಗಲ್ ದುರ್ಗ ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿದೆ. ಇಲ್ಲಿನ ನೂರಾರು ದೇವಾಲಯಗಳು ಇಲ್ಲಿನ ರಾಜಪರಂಪರೆಗೆ ಹಿಡಿದ ಕನ್ನಡಿಯಾಗಿವೆ. ನಿಡಗಲ್ ದುರ್ಗದಲ್ಲಿ ಆಳ್ವಿಕೆ ನಡೆಸಿದ ರಾಜಮನೆತನಗಳು ಶೈಕ್ಷಣಿಕವಾಗಿ, ಸಾಮಾಜಿಕ ಹಾಗೂ ಧಾರ್ಮಿಕತೆಗೆ ಹೆಚ್ಚು ಒತ್ತು ನೀಡಿರುವುದನ್ನು ನಾವು ಕಾಣಬಹುದೆಂದು ತಿಳಿಸಿದರು.
ನಿಡಗಲ್ ದುರ್ಗವು ಸಮುದ್ರ ಮಟ್ಟಕ್ಕಿಂತ ಎತ್ತರದ ಪ್ರದೇಶವಾಗಿದ್ದು, ಪ್ರಕೃತಿ ದೇವಿಯ ಮಡಿಲಲ್ಲಿ ನೆಲೆಸಿದೆ. ಇಲ್ಲಿ ನಿರಂತವಾಗಿ ಧಾರ್ಮಿಕ ಕಾರ್ಯಗಳು ನಡೆಯುತ್ತಿರುವುದರಿಂದ ಇದೊಂದು ಧಾರ್ಮಿಕ ಪುಣ್ಯಕ್ಷೇತ್ರವಾಗಿದೆ. ರಾಜ್ಯ ಸರಕಾರ ಹಾಗೂ ಜಿಲ್ಲಾಡಳಿತವು ನಿಡಗಲ್ ಉತ್ಸವವನ್ನು ನಡೆಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡು, ನಿಡಗಲ್ ದುರ್ಗ ವನ್ನು ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ದಿ ಪಡಿಸಿದರೆ, ಕಲ್ಪತರು ಜಿಲ್ಲೆಯಲ್ಲೇ ನಿಡಗಲ್ ಸುಂದರ ಧಾರ್ಮಿಕ, ಪ್ರವಾಸೋದ್ಯಮ ಕೇಂದ್ರವಾಗಿ ಮಾರ್ಪಡಲಿದೆ ಎಂದರು.
ಈ ಸಂದರ್ಭದಲ್ಲಿ ಪಿಡಬ್ಲುಡಿ ಅನಿಲ್‍ಕುಮಾರ್, ಸರಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಸತ್ಯರಾವ್, ವಾಲ್ಮೀಕಿ ಜಾಗೃತಿ ವೇದಿಕೆಯ ಅಧ್ಯಕ್ಷ ಲೋಕೇಶ್ ಪಾಳ್ಳೆಗಾರ್, ಗ್ರಾಪಂ ಸದಸ್ಯ ಮಂಜುನಾಥ್, ತಿಮ್ಮಣ್ಣ ಹಾಗೂ ಪತಂಜಲಿ ಯೋಗ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ