ಪಾವಗಡ : ಸೋಲಾರ್ ಪಾರ್ಕ್‍ಗೆ ಜಮೀನು ನೀಡಿದವರಿಗೆ ಗುತ್ತಿಗೆ ಹಣ ಹೆಚ್ಚಳ

 ಪಾವಗಡ : 

        ಸೋಲಾರ್ ಪಾರ್ಕ್ ಸ್ಥಾಪನೆಗಾಗಿ ಗುತ್ತಿಗೆ ಆಧಾರದಲ್ಲಿ ಜಮೀನು ನೀಡಿದ ಭೂ ಮಾಲೀಕರ ಖಾತೆಗೆ ವಾರ್ಷಿಕ ಪ್ರತಿ ಎಕರೆಗೆ ನೇರವಾಗಿ ಜಮಾ ಮಾಡಲಾಗುತ್ತಿರುವ 21,000 ರೂ.ಗಳನ್ನು ಹೆಚ್ಚುಗೊಳಿಸಲಾಗುವುದು ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್ ಕುಮಾರ್ ಭರವಸೆ ನೀಡಿದರು.

     ಪಾವಗಡದ ಸೋಲಾರ್‍ಪಾರ್ಕ್‍ಗಿಂದು ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಸಚಿವರು, ಸೋಲಾರ್ ಪಾರ್ಕ್ ನಿರ್ಮಾಣಕ್ಕಾಗಿ ಜಮೀನು ನೀಡಿದ ಗ್ರಾಮಗಳಲ್ಲಿ ಕುಡಿಯುವ ನೀರು, ರಸ್ತೆ, ಶಿಕ್ಷಣ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಗೊಳಿಸಲಾಗುವುದು ಎಂದರು.

     ಪಾವಗಡದಲ್ಲಿ ನಿರ್ಮಾಣವಾಗಿರುವ ಅತೀ ದೊಡ್ಡ ಸೋಲಾರ್ ಪಾರ್ಕ್‍ನಿಂದ ಇಂಧನ ಇಲಾಖೆಯಲ್ಲಿ ಬೃಹತ್ ಪ್ರಮಾಣದಲ್ಲಿ ಅಭಿವೃದ್ಧಿ ಚಟುವಟಿಕೆಗಳಾಗುತ್ತಿವೆ. ಈ ಸೋಲಾರ್ ಪಾರ್ಕ್ ದೇಶದ ಗಮನ ಸೆಳೆದಿದ್ದು, ಪಾವಗಡ ತಾಲೂಕು ಪ್ರಪಂಚದ ಭೂಪಟದಲ್ಲಿ ಜಗಮಗಿಸುತ್ತಿದೆ. ಈ ಭಾಗದ ರೈತರು ಸುಮಾರು ಹನ್ನೆರಡೂವರೆ ಸಾವಿರ ಎಕರೆ ಜಮೀನನ್ನು ನೀಡಿದ್ದರ ಫಲವಾಗಿ 2050 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

     ಪಾವಗಡದ ಸೋಲಾರ್ ಪಾರ್ಕ್‍ನಿಂದ ದೇಶ ಹಾಗೂ ರಾಜ್ಯದ ಇತರೆ ಭಾಗಗಳಿಗೆ ವಿದ್ಯುತ್ ಸರಬರಾಜು ಮಾಡಲಾಗುತ್ತಿದ್ದು, ಪಾರ್ಕ್ ನಿರ್ಮಾಣಕ್ಕೆ ಜಮೀನು ನೀಡಿದವರೆಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಸೋಲಾರ್ ಪಾರ್ಕ್ ನಿರ್ಮಾಣಕ್ಕಾಗಿ ಜಮೀನು ನೀಡಿದ ಸಂದರ್ಭದಲ್ಲಿ ಸರ್ಕಾರ, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕೊಟ್ಟ ಮಾತಿಗೆ ಈಗಲೂ ಬದ್ಧ. ಅಂದು ಕೊಟ್ಟ ಮಾತು, ಒಪ್ಪಂದಗಳನ್ನು ಹಂತ ಹಂತವಾಗಿ ಖಂಡಿತವಾಗಿ ಈಡೇರಿಸುತ್ತೇನೆ ಎಂದರು. ಸೋಲಾರ್ ಪಾರ್ಕಿನಲ್ಲಿ ಸ್ಥಳೀಯರಿಗೆ ಉದ್ಯೋಗ ಕಲ್ಪಿಸಬೇಕು ಎಂಬ ಬಹುದೊಡ್ಡ ಬೇಡಿಕೆಯಿದ್ದು, ಸ್ಥಳೀಯರಿಗೆ ಉದ್ಯೋಗ ಕಲ್ಪಿಸುವಲ್ಲಿ ಹಿಂದೆ ಸರಿಯುವ ಮಾತೇ ಇಲ್ಲ. ಅಧಿಕಾರಿಗಳ ಮಾಹಿತಿ ಪ್ರಕಾರ ಈಗಾಗಲೇ 1200 ರಿಂದ 1500 ಜನರಿಗೆ ಸೋಲಾರ್ ಪಾರ್ಕಿನಲ್ಲಿ ಉದ್ಯೋಗ ಒದಗಿಸಲಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸುತ್ತೇನೆ ಎಂದು ಹೇಳಿದರು. ವಿದ್ಯುತ್ ಉತ್ಪಾದನೆ ಜೊತೆಗೆ ಸ್ಥಳೀಯರಿಗೆ ಉದ್ಯೋಗ ಒದಗಿಸುವುದೇ ಸೋಲಾರ್ ಪಾರ್ಕ್ ಮುಖ್ಯ ಉದ್ದೇಶವಾಗಿದೆ.

          ಡಿಪ್ಲೊಮೊ, ಐಟಿಐ ಹಾಗೂ ಪದವಿ ಪಡೆದ ಆಸಕ್ತರು ಸೋಲಾರ್ ಪಾರ್ಕಿನಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿದ್ದರೆ ನನ್ನ ಗಮನಕ್ಕೆ ತನ್ನಿ. ಅಂತಹವರಿಗೆ ಮೊದಲಾದ್ಯತೆಯಲ್ಲಿ ಉದ್ಯೋಗ ನೀಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು ಎಂದರು. ಇಂಧನ ಇಲಾಖೆಯ ಜವಾಬ್ದಾರಿ ವಹಿಸಿಕೊಂಡ ಬಳಿಕ ಎರಡು ತಿಂಗಳ ಅವಧಿಯಲ್ಲಿ ಇಲಾಖಾ ವ್ಯಾಪ್ತಿಯಲ್ಲಿ ಬರುವ ಯೋಜನಾನುಷ್ಠಾನಗಳ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡುವ ಕೆಲಸ ಮಾಡುತ್ತಿದ್ದೇನೆ. ಈ ಹಿನ್ನೆಲೆಯಲ್ಲಿ ವಿಶ್ವದಲ್ಲಿ 3ನೇ ಹಾಗೂ ದೇಶದಲ್ಲಿ ಒಂದೇ ಸ್ಥಳದಲ್ಲಿ ನಿರ್ಮಾಣವಾಗಿರುವ ಮೊದಲನೇ ಅತೀ ದೊಡ್ಡ ಸೋಲಾರ್ ಪಾರ್ಕ್‍ಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲೇ ಪರಿಹಾರವಾಗಬಹುದಾದ ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಮಾಡಿದ್ದೇನೆ. ಸ್ಥಳದಲ್ಲೇ ಇತ್ಯರ್ಥವಾಗದ ಸಮಸ್ಯೆಗಳನ್ನು ಅಧಿಕಾರಿಗಳ ಮಟ್ಟದಲ್ಲಿ ಚರ್ಚಿಸಿ ಪರಿಹರಿಸಲಾಗುವುದು ಎಂದರು.

     ಶಾಸಕ ವೆಂಕಟರಮಣಪ್ಪ ಮಾತನಾಡಿ, ಸೋಲಾರ್ ಪಾರ್ಕಿನಲ್ಲಿ ಉದ್ಯೋಗ ಒದಗಿಸಲು ಸ್ಥಳೀಯರಿಗೆ ಆದ್ಯತೆ ನೀಡದೆ ಹೊರಗಿನವರಿಗೆ ಹೆಚ್ಚು ಪ್ರಾಶಸ್ತ್ಯ ನೀಡಲಾಗುತ್ತಿದೆ ಎಂಬ ಆರೋಪವಿದ್ದು, ಸ್ಥಳೀಯರಿಗೆ ಉದ್ಯೋಗ ನೀಡಲು ಹಾಗೂ ಇಡೀ ಪಾವಗಡ ತಾಲೂಕಿನಲ್ಲಿ ಐಟಿಐ, ಇಂಜಿನಿಯರಿಂಗ್ ಮಾಡಿದವರಿಗೆ ಮೊದಲಾದ್ಯತೆಯಲ್ಲಿಯೇ ಉದ್ಯೋಗ ಒದಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಬೇಕು. ಅಲ್ಲದೆ, ವೆಂಕಟಮನಹಳ್ಳಿ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿನ ರೈತರು ಹೆಚ್ಚುವರಿಯಾಗಿ ಸುಮಾರು 2000 ಎಕರೆ ಜಮೀನು ನೀಡಲು ಮುಂದೆ ಬಂದಿದ್ದು, ಆ ಜಮೀನುಗಳನ್ನು ಗುತ್ತಿಗೆ ಪಡೆಯಬೇಕು ಎಂದು ಸಚಿವರಿಗೆ ಮನವಿ ಮಾಡಿದರು.

     ಇನ್ನೊಂದು ವಾರದಲ್ಲಿ ತಿರುಮಣಿ ಹಾಗೂ ವಳ್ಳೂರು ಗ್ರಾಮ ಪಂಚಾಯತ್ ಅಭಿವೃದ್ಧಿಗಾಗಿ ಶಾಲೆ, ಸಿಸಿ ರಸ್ತೆ, ಕುಡಿಯುವ ನೀರು, ಶೌಚಾಲಯ, ಚರಂಡಿ ಸೇರಿದಂತೆ ಮತ್ತಿತರ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಈಗಾಗಲೇ 25 ಕೋಟಿ ರೂ. ಮಂಜೂರಾಗಿದ್ದು, ಟೆಂಡರ್ ಕರೆಯಲಾಗಿದೆ. ಶೀಘ್ರದಲ್ಲೇ ಅಭಿವೃದ್ಧಿ ಕಾರ್ಯಗಳನ್ನು ಕಾರ್ಯಗತಗೊಳಿಸಲಾಗುವುದು ಎಂದರು.

ಹೆಚ್ಚುವರಿ ಹಣ ನೀಡುವ ಭರವಸೆ:-

     ಕಾರ್ಯಕ್ರಮದ ಬಳಿಕ ರೈತರ ಸಮಸ್ಯೆ ಹಾಗೂ ಬೇಡಿಕೆಗಳನ್ನು ಆಲಿಸಿದ ಸಚಿವರು, ಸೋಲಾರ್ ಪಾರ್ಕ್ ಸ್ಥಾಪನೆಗಾಗಿ ಗುತ್ತಿಗೆ ಆಧಾರದಲ್ಲಿ ಜಮೀನು ನೀಡಿದವರಿಗೆ ವರ್ಷಕ್ಕೆ ಪ್ರತಿ ಎಕರೆಗೆ 21 ಸಾವಿರ ನೀಡಲಾಗುತ್ತಿದೆ. ಸಂಬಂಧಿಸಿದ ಕಂಪನಿಯೊಂದಿಗೆ ಚರ್ಚಿಸಿ ಈ ಮೊತ್ತವನ್ನು ಹೆಚ್ಚಿಸಲಾಗುವುದು ಎಂದು ಭರವಸೆ ನೀಡಿದರು. ಶಾಲಾ-ಕಾಲೇಜು ನಿರ್ಮಿಸಲು ರೈತರು ಬೇಡಿಕೆ ಇಟ್ಟಾಗ, ಈ ಭಾಗದಲ್ಲಿನ ಗ್ರಾಮಗಳಲ್ಲಿ ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳ ಸಮೀಕ್ಷೆ ಮಾಡಿ, ಶಾಲಾ-ಕಾಲೇಜಿನ ಸ್ಥಾಪನೆಗೆ ಶಿಕ್ಷಣ ಸಚಿವರೊಂದಿಗೆ ಚರ್ಚಿಸಲಾಗುವುದು.

      ಬರದ ನಾಡಿನ ಪಾವಗಡದಲ್ಲಿ ಸ್ಥಳೀಯ ಅಭಿವೃದ್ಧಿ ಕಾಮಗಾರಿಗಳಲ್ಲಿಯೂ ಸ್ಥಳೀಯರಿಗೆ ಹೆಚ್ಚು ಆದ್ಯತೆ ನೀಡಲು ಅಧಿಕಾರಿಗಳಿಗೆ ನಿರ್ದೇಶನ ನೀಡುತ್ತೇನೆ. ಗ್ರಾಮದಿಂದ ಗ್ರಾಮದ ನಡುವಿನ ರಸ್ತೆಯಲ್ಲಿ ಸೋಲಾರ್ ಬೀದಿ ದೀಪಗಳನ್ನು ಕಲ್ಪಿಸಲು ಇಂದೇ ಆದೇಶ ನೀಡುತ್ತೇನೆ. ಅಗ್ನಿಶಾಮಕ ಘಟಕ ಸ್ಥಾಪನೆಗೂ ಗೃಹ ಇಲಾಖೆಯೊಂದಿಗೆ ಚರ್ಚಿಸಿ ನಿರ್ಣಯ ಕೈಗೊಳ್ಳುತ್ತೇನೆ ಎಂದರಲ್ಲದೆ ಸೋಲಾರ್ ಘಟಕದ ಪ್ರದೇಶದಲ್ಲಿ ಕನ್ನಡದಲ್ಲೇ ನಾಮಫಲಕ ಅಳವಡಿಸಲು ಕನ್ನಡ ಮತ್ತು ಸಂಸ್ಕøತಿ ಇಲಾಖಾಧಿಕಾರಿಗಳಿಗೆ ಸೂಚಿಸಿದರು. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರ ಹಾಗೂ ಶಾಲೆಗಳಲ್ಲಿ ಕೊರತೆಯಿರುವ ಶಿಕ್ಷಕರ ನೇಮಕ ಮಾಡಲು ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿ ಕ್ರಮ ವಹಿಸುತ್ತೇನೆ. ಒಟ್ಟಾರೆ ಎಲ್ಲಾ ಬೇಡಿಕೆಗಳನ್ನು ಸಮರ್ಪಕವಾಗಿ ಈಡೇರಿಸಿ ಈ ಭಾಗದ ಜನಜೀವನ ಸುಧಾರಿಸುವ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

     ಕಾರ್ಯಕ್ರಮದಲ್ಲಿ ತಹಸೀಲ್ದಾರ್ ನಾಗರಾಜ್, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಶಿವರಾಜಯ್ಯ, ಡಿವೈಎಸ್‍ಪಿ ರಾಮಕೃಷ್ಣಯ್ಯ, ಕರ್ನಾಟಕ ಸೌರಶಕ್ತಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರುದ್ರಪ್ಪ, ಸಿಇಒ ಶ್ರೀನಿವಾಸಪ್ಪ, ಪ್ರಧಾನ ವ್ಯವಸ್ಥಾಪಕ ಅಮರ್‍ನಾಥ್, ಹನುಮಂತಪ್ಪ, ಇಇ ಪ್ರಕಾಶ್, ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಮಹೇಶ್, ಬೆಸ್ಕಾಂ ಮುಖ್ಯ ಇಂಜಿನಿಯರ್ ಗೋವಿಂದಪ್ಪ, ಕೆಪಿಟಿಸಿಎಲ್ ಇಂಜಿನಿಯರ್‍ಗಳಾದ ಪ್ರಶಾಂತ್ ಕೂಡ್ಲಿಗಿ ಸೇರಿದಂತೆ ಇತರರು ಭಾಗವಹಿಸಿದ್ದರು.

     ಕಾರ್ಯಕ್ರಮದ ಬಳಿಕ ಸೌರಶಕ್ತಿ ಅಭಿವೃದ್ಧಿ ನಿಗಮದ ಸಬ್‍ಸ್ಟೇಷನ್-5 ಹಾಗೂ 2; ಪಿಜಿಸಿಐಎಲ್ ಸಬ್‍ಸ್ಟೇಷನ್; ಫೋರ್ಟಮ್, ಸಾಫ್ಟ್ ಬ್ಯಾಂಕ್ ಎನರ್ಜಿ ಹಾಗೂ ರೀ ನ್ಯೂ ಪವರ್ ಸೋಲಾರ್ ಕಂಪನಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap