ಪಾವಗಡ :
ಚಿಕ್ಕಹಳ್ಳಿ, ಪೋತಗಾನಹಳ್ಳಿ ಹಾಗೂ ಮರಿದಾಸನ ಹಳ್ಳಿ ಗ್ರಾಪಂಗಳಲ್ಲಿ ಕಂಪ್ಯೂಟರ್ ಆಪರೇಟರ್ ಹಾಗೂ ಬಿಲ್ ಕಲೆಕ್ಟರ್‍ಗಳು ಶಾಮೀಲಾಗಿ ರೈತರಿಗೆ, ಕೂಲಿ ಕಾರ್ಮಿಕರಿಗೆ ಕೆಲಸ ನೀಡದೆ ಕೋಟ್ಯಂತರ ರೂ.ಗಳ ನರೇಗಾ ಕಾಮಗಾರಿ ನಡೆಸಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಸಾಮಾನ್ಯ ಸಭೆಯಲ್ಲಿ ತಾಪಂ ಸದಸ್ಯರು ಪಟ್ಟು ಹಿಡಿದ ಘಟನೆ ನಡೆಯಿತು.
ಮಂಗಳವಾರ ತಾಪಂ ಅಧ್ಯಕ್ಷರಾದ ಮಂಜುಳ ಸೇವಾನಾಯ್ಕ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ತಾಲ್ಲೂಕಿನಾದ್ಯಂತ ಹಲವು ಗ್ರಾಪಂಗಳಲ್ಲಿ ಕಂಪ್ಯೂಟರ್ ಆಪರೇಟರ್ ಹಾಗೂ ಬಿಲ್ ಕಲೆಕ್ಟರ್‍ಗಳು ಶಾಮೀಲಾಗಿ ರೈತರಿಗೆ, ಕೂಲಿ ಕಾರ್ಮಿಕರಿಗೆ ಕೆಲಸ ನೀಡದೆ ಕೋಟ್ಯಂತರ ರೂ. ನರೇಗಾ ಕಾಮಗಾರಿಗಳನ್ನ ಮಾಡಿ ಇಲಾಖೆಗಳನ್ನ ವಂಚಿಸಿದ್ದಾರೆ ಎಂದು ಸದಸ್ಯರು ಆರೋಪಿಸಿದ್ದಾರೆ. ತಾಪಂ ಮಾಜಿ ಅಧ್ಯಕ್ಷ ಸೊಗಡು ವೆಂಕಟೇಶ್ ಮಾತನಾಡಿ, ಈ ಗ್ರಾಪಂಗಳಲ್ಲಿ ನಡೆದ ನರೇಗಾ ಕಾಮಗಾರಿಗಳ ತನಿಖೆಯನ್ನ ಎಸಿಬಿಗೆ ಅಥವಾ ಲೋಕಾಯುಕ್ತಕ್ಕೆ ನೀಡಿ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ತಕ್ಷಣವೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಕೃಷಿ ಇಲಾಖೆಯಲ್ಲಿ ನಡೆಯುವ ಪ್ರತಿ ಕೆಲಸಕ್ಕೂ ಅಧಿಕಾರಿಗಳಿಗೆ ನೇರವಾಗಿ 4 ರಿಂದ 5% ಕಮೀಷನ್ ನೀಡಿ ಕೆಲಸಗಳನ್ನ ಮಾಡಿಸುವ ಅನಿವಾರ್ಯತೆ ಇದೆ. ನರೇಗಾ, ಕೃಷಿಹೊಂಡ ಕಾಮಗಾರಿಗಳು ಅರ್ಹರಿಗೆ ನೀಡಿಲ್ಲ. ಹಣ ನೀಡಿದರೆ ಮಾತ್ರ ಇಲ್ಲಿ ಕೆಲಸ ಆಗುತ್ತದೆ. ಇಲಾಖೆಯ ಪ್ರವೀಣ್ ಎಂಬ ಅಧಿಕಾರಿ ಇಲ್ಲೇ ಬೀಡು ಬಿಟ್ಟು ಕೋಟ್ಯಂತರ ರೂ. ಗಳಿಸಿದ್ದಾನೆ. ತಕ್ಷಣವೆ ಈತನನ್ನು ವರ್ಗಾವಣೆ ಮಾಡಬೇಕೆಂದು ಅವರು ಆಗ್ರಹಿಸಿದರು.
ತಾಪಂಗೆ ಸೇರಿದ 52 ಅಂಗಡಿ ಮಳಿಗೆಗಳಿದ್ದು, ಕಳೆದ 20 ವರ್ಷಗಳಿಂದ ಬಾಡಿಗೆ ಪಡೆದವರು ವ್ಯಾಪಾರ ಮಾಡದೆ ಬೇರೆಯವರಿಗೆ ಭೋಗ್ಯಕ್ಕೆ ನೀಡಿದ್ದಾರೆ. ಹಲವು ಅಂಗಡಿಗಳಿಂದ ಸಕಾಲದಲ್ಲಿ ಬಾಡಿಗೆ ವಸೂಲಿ ನಡೆಯುತ್ತಿಲ್ಲ. ಹರಾಜು ಪ್ರಕ್ರಿಯೆ ನಡೆಯದ ಹಿನ್ನೆಲೆಯಲ್ಲಿ ಇಂದಿಗೂ 200, 300 ರೂ. ಬಾಡಿಗೆ ಪಡೆಯಲಾಗುತ್ತಿದೆ. ಇಂದು ಖಾಸಗಿ ಅಂಗಡಿ ಮಳಿಗೆಗಳು ಮುಖ್ಯ ರಸ್ತೆಗೆ 10 ರಿಂದ 15 ಸಾವಿರ ಬಾಡಿಗೆ ವಿಧಿಸುತ್ತಾರೆ. ಹಲವು ವರ್ಷಗಳು ಕಳೆದರು ತಾಪಂಗೆ ಸೇರಿರುವ ಅಂಗಡಿ ಮಳಿಗೆಗಳು ಹರಾಜು ನಡೆಸಲಿಲ್ಲ. ತಕ್ಷಣವೆ ನೋಟಿಸ್ ನೀಡಿ ಕಾನೂನು ಸಲಹೆ ಪಡೆದು ಸೂಕ್ತ ಕ್ರಮ ಕೈಗೊಂಡು, ಹರಾಜು ಮಾಡಿದರೆ ತಾಪಂಗೆ ಪ್ರತಿ ತಿಂಗಳು ಲಕ್ಷಾಂತರ ಆದಾಯ ಬರಲಿದೆ ಎಂದು ತಾಪಂ ಸದಸ್ಯರು ಸಭೆಯಲ್ಲಿ ಓತ್ತಾಯಿಸಿದರು.
ತಾಪಂ ಇಒ ನರಸಿಂಹಮೂರ್ತಿ ಮಾತನಾಡಿ, ತಾಲ್ಲೂಕಿನ 27 ಗ್ರಾಮಗಳಲ್ಲಿ ಶುದ್ದ ಕುಡಿಯುವ ನೀರಿನ ಸಮಸ್ಯೆ ಇದ್ದು, ಕೊಳವೆ ಬಾವಿಗಳು ಕೊರೆಸುವಂತಿಲ್ಲ. ಟ್ಯಾಂಕರ್ ಹಾಗೂ ಬಾಡಿಗೆ ಕೊಳವೆ ಬಾವಿಗಳ ಮೂಲಕ ನೀರು ಪೂರೈಕೆಗೆ ಅವಕಾಶವಿದ್ದು, ನರೇಗಾದಲ್ಲಿ ಈ ವರ್ಷ 19 ಲಕ್ಷ ಮಾನವ ದಿನಗಳು ನೀಡಿದ್ದು, ಜಿಲ್ಲೆಯಲ್ಲಿ ನರೇಗಾ ಪ್ರಗತಿಯಲ್ಲಿ ಪಾವಗಡ 2ನೆ ಸ್ಥಾನದಲ್ಲಿ ಇದೆ ಎಂದರು.
ವದನಕಲ್ಲು ತಾಪಂ ಸದಸ್ಯರಾದ ಸಣ್ಣಾರೆಡ್ಡಿ ಮಾತನಾಡಿ, ಗ್ರಾಪಂ ವ್ಯಾಪ್ತಿಯ ಹಳ್ಳಿಗಳಿಗೆ ಕಳೆದ ವರ್ಷ ನೀರನ್ನು ಪೂರೈಕೆ ಮಾಡಿರುವ ಹಣ ಇಂದಿಗೂ ರೈತರಿಗೆ ಪಾವತಿ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದಾಗ ಇಒ ಮಧ್ಯ ಪ್ರವೇಶಿಸಿ ಪರಿಶೀಲನೆ ಮಾಡಿ, ತಕ್ಷಣವೆ ಹಣ ಪಾವತಿಸಲಾಗುವುದೆಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ