ಮಂಗಳೂರು:
ನಗರದ ಹೊರವಲಯದಲ್ಲಿರುವ ಪಾವೂರು ಉಳಿಯ ದ್ವೀಪದ 2 ಕಿಲೋಮೀಟರ್ ವ್ಯಾಪ್ತಿಯಲ್ಲಿ ಮರಳುಗಾರಿಕೆಯನ್ನು ನಿಷೇಧಿಸಿ ಮಂಗಳೂರು ಉಪ ವಿಭಾಗಾಧಿಕಾರಿ ಹರ್ಷವರ್ಧನ್ ಆದೇಶ ಹೊರಡಿಸಿದ್ದಾರೆ.ಅಕ್ರಮ ಮರಳುಗಾರಿಕೆಯು ಪಾವೂರು ಉಳಿಯ ದ್ವೀಪದ ನಿವಾಸಿಗಳು, ಮೀನು ಮತ್ತು ಪ್ರಾಣಿ ಮತ್ತು ದ್ವೀಪದ ಪರಿಸರದ ಮೇಲೆ ಪರಿಣಾಮ ಬೀರುತ್ತಿದ್ದು, ಇದನ್ನು ತಡೆಯಲು ಎಲ್ಲಾ ರೀತಿಯ ಮರಳುಗಾರಿಕೆಯನ್ನು ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಈ ವ್ಯಾಪ್ತಿಯಲ್ಲಿ ಸಂಚಾರ ದೋಣಿಗಳ ಹೊರತಾಗಿ ಇತರೆ ಎಲ್ಲಾ ದೋಣಿ ಅಥವಾ ಯಂತ್ರಗಳ ಮೂಲಕ ಮರಳು ಉತ್ಪನ್ನದ ಸಾಗಣೆ, ದಕ್ಕೆಗಳಲ್ಲಿ ಅನಧಿಕೃತ ಮರಳು ಶೇಖರಣೆ ಮತ್ತು ಮರಳು ಹಂಚುವಂತಿಲ್ಲ. ಅಡ್ಯಾರು ಗ್ರಾಮದ ವಳಚ್ಚಿಲ್ ದಕ್ಕೆ, ಅಡ್ಯಾರು ಗ್ರಾಮ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಹಿಂಭಾಗದ ದಕ್ಕೆ, ನದಿಯ, ದ್ವೀಪದ ಎಡಭಾಗದಲ್ಲಿರುವ ಪಾವೂರು ದಕ್ಕೆ ಈ ನಿಷೇಧಿತ ಪ್ರದೇಶದ ವ್ಯಾಪ್ತಿಗೆ ಸೇರಿದ್ದು, ಆದೇಶ ಉಲ್ಲಂಘಿಸಿ ಅಕ್ರಮ ಮರಳು ತೆಗೆಯುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.
ದ್ವೀಪದಲ್ಲಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆ ವಿರುದ್ಧ ದ್ವೀಪವಾಸಿಗಳ ಹಲವು ದಿನಗಳಂದ ಪ್ರತಿಭಟನೆ ನಡೆಸುತ್ತಿದ್ದದರು. 80 ಎಕರೆ ಪ್ರದೇಶದಲ್ಲಿದ್ದ ದ್ವೀಪವು ಮರಳುಗಾರಿಕೆಯಿಂದಾಗಿ ಕೇವಲ 40 ಎಕರೆಗೆ ಕುಸಿದಿದೆ ಎಂದು ಆರೋಪಿಸಿದ್ದರು.