ʼಕಾಂತಾರ: ಚಾಪ್ಟರ್‌ 1′ ಬೆಂಬಲಕ್ಕೆ ಬಂದ ಪವನ್‌ ಕಲ್ಯಾಣ್‌

ಹೈದರಾಬಾದ್‌: 

     ಸೆಪ್ಟೆಂಬರ್‌ 25ರಂದು ತೆರೆಕಂಡ ಪವನ್‌ ಕಲ್ಯಾಣ್‌  ನಟನೆಯ ‘ಒಜಿ’  ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆ ಬರೆದಿದೆ. ಕರ್ನಾಟಕದಲ್ಲಿ ಚಿತ್ರದ ಟಿಕೆಟ್‌ ಬೆಲೆ ಹೆಚ್ಚಿಸಿದ್ದಕ್ಕೆ ಭಾರಿ ವಿರೋಧ ವ್ಯಕ್ತವಾಗಿ, ಸಿನಿಮಾ ಬಹಿಷ್ಕರಿಸಲು ಕೆಲವು ಸಂಘಟನೆಗಳು ಕರೆ ನೀಡಿದ್ದವು. ಸದ್ಯ ರಿಷಬ್‌ ಶೆಟ್ಟಿ  ಅವರ ʼಕಾಂತಾರ: ಚಾಪ್ಟರ್‌ 1′  ಚಿತ್ರಕ್ಕೂ ಇದೇ ಸ್ಥಿತಿ ಎದುರಾಗಿದೆ. ಅಕ್ಟೋಬರ್‌ 2ರಂದು ಸಿನಿಮಾ ವಿಶ್ವಾದ್ಯಂತ ತೆರೆಗೆ ಬರಲು ಸಜ್ಜಾಗಿದ್ದು, ಚಿತ್ರತಂಡ ಪ್ರಚಾರ ಕಾರ್ಯದಲ್ಲಿ ನಿರತವಾಗಿದೆ. ಚಿತ್ರತಂಡ ಕರ್ನಾಟಕದ ಜತೆಗೆ ಆಂಧ್ರದಲ್ಲೂ ಟಿಕೆಟ್‌ ಬೆಲೆ ಹೆಚ್ಚಿಸಲು ಮುಂದಾಗಿದ್ದು, ಈ ಕಾರಣಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ʼಕಾಂತಾರ: ಚಾಪ್ಟರ್‌ 1ʼ ಬಹಿಷ್ಕರಿಸುವಂತೆ ತೆಲುಗು ಪ್ರೇಕ್ಷಕರು ಕರೆ ನೀಡಿದ್ದಾರೆ. ಆದರೆ ಪವನ್‌ ಕಲ್ಯಾಣ್‌ ಚಿತ್ರತಂಡಕ್ಕೆ ಬೆಂಬಲ ನೀಡಿದ್ದು, ಕಲೆಯ ಹೆಸರಲ್ಲಿ ಪ್ರತೀಕಾರ ಸಲ್ಲದು ಹೇಳಿದ್ದಾರೆ.

    ಕರ್ನಾಟಕದ ಜತೆಗೆ ಆಂಧ್ರ ಪ್ರದೇಶದಲ್ಲೂ ಸಿನಿಮಾಗಳ ಟಿಕೆಟ್‌ ಹೆಚ್ಚಳಕ್ಕೆ ಸರ್ಕಾರದ ಅನುಮತಿ ಪಡೆಯಬೇಕಾಗುತ್ತದೆ. ಈಗಾಗಲೇ ʼಕಾಂತಾರ: ಚಾಪ್ಟರ್‌ 1ʼ ಚಿತ್ರತಂಡ ಎರಡೂ ಕಡೆ ಅನುಮತಿ ಪಡೆದುಕೊಂಡಿದೆ. ಪವನ್‌ ಕಲ್ಯಾಣ್‌ ಅವರ ʼಒಜಿʼಗೆ ಎದುರಾದ ವಿರೋಧವನ್ನು ಉಲ್ಲೇಖಿಸಿ ತೆಲುಗು ಪ್ರೇಕ್ಷಕರು ಇದೀಗ ʼಕಾಂತಾರʼದ ನಿರ್ಧಾರವನ್ನು ಖಂಡಿಸಿದ್ದಾರೆ. ಆದರೆ ಪವನ್‌ ಕಲ್ಯಾಣ್‌ ಚಿತ್ರತಂಡಕ್ಕೆ ಬೆಂಬಲ ನೀಡಿದ್ದಾರೆ.

   ʼ ʼಸಿನಿಮಾ, ಸಂಗೀತ, ಕ್ರೀಡೆ ಮತ್ತು ಸಾಂಸ್ಕೃತಿಕ ಕಲೆಗಳಿಗೆ ಯಾವುದೇ ಗಡಿಗಳಿಲ್ಲ. ಭಾಷೆ, ಧರ್ಮ, ಜಾತಿ, ಪ್ರಾದೇಶಿಕತೆಯ ಹಂಗಿಲ್ಲ. ಇವೆಲ್ಲದರ ಒಟ್ಟು ಉದ್ದೇಶ ಜನರನ್ನು ಮನರಂಜಿಸುವುದು ಮತ್ತು ಎಲ್ಲರನ್ನೂ ಒಂದುಗೂಡಿಸುವುದು. ಆದರೆ ಕೆಲವರು ವೈಯಕಿಕ ಕಾರಣಗಳಿಂದ ಕರ್ನಾಟಕದಲ್ಲಿ ʼಒಜಿʼ ಚಿತ್ರಕ್ಕೆ ವಿರೋಧ ವ್ಯಕ್ತಪಡಿಸಿದರು. ಇದೇ ರೀತಿ ಕೆಲವು ತೆಲುಗು ಚಿತ್ರಗಳಿಗೂ ವಿರೋಧ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಇದೀಗ ತೆಲುಗು ರಾಜ್ಯಗಳಲ್ಲಿ ʼಕಾಂತಾರ: ಚಾಪ್ಟರ್‌ 1ʼ ಚಿತ್ರವನ್ನು ಬಹಿಷ್ಕರಿಸಬೇಕು ಎನ್ನುವ ಕೂಗು ಕೇಳಿ ಬರುತ್ತಿದೆ. ಇದಕ್ಕೆ ನಾನು ಬೆಂಬಲಿಸುವುದಿಲ್ಲʼʼ ಎಂದು ಹೇಳಿದ್ದಾರೆ.

   ʼʼಕಲೆ ಮತ್ತು ಚಿತ್ರಗಳು ಸಂತಸವನ್ನು ಹಂಚುತ್ತವೆ. ಇದು ಸಂಸ್ಕೃತಿಯ ನಡುವೆ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತವೆ. ತಮ್ಮ ಇಷ್ಟದ ಚಿತ್ರಗಳನ್ನು ನೋಡುವ ಹಕ್ಕು ಎಲ್ಲರಿಗೂ ಇದೆ. ಇನ್ನೊಬ್ಬರ ಅಭಿಪ್ರಾಯವನ್ನು ಹೇರುವ ಹಾಗಿಲ್ಲ. ನಮ್ಮಲ್ಲಿಗೆ ಬರುವ ಪ್ರತಿ ಉತ್ತಮ ಸಿನಿಮಾಕ್ಕೆ ಬೆಂಬಲ ನೀಡೋಣʼʼ ಎಂದು ಕರೆ ನೀಡಿದ್ದಾರೆ.

    ಪರ ಭಾಷೆಯ ಸಿನಿಮಾಗಳ ಟಿಕೆಟ್ ದರ ಹೆಚ್ಚಳಕ್ಕೆ ಅನುಮತಿ ನೀಡಬಾರದು ಎಂಬ ಒತ್ತಾಯ ಈ ಆಂಧ್ರ ಪ್ರದೇಶ ಹಾಗೂ ತೆಲಂಗಾಣಗಳಲ್ಲಿ ಕೇಳಿ ಬರುತ್ತಲೇ ಇದೆ. ಕರ್ನಾಟಕದಲ್ಲಿ ಬಿಡುಗಡೆ ಆಗುವ ಪರ ಭಾಷೆಯ ಸಿನಿಮಾಗಳಿಗೆ ಕನ್ನಡಪರ ಸಂಘಟನೆಗಳು ಪ್ರತಿರೋಧ ತೋರುವುದನ್ನು ಕಾರಣವಾಗಿ ಇರಿಸಿಕೊಂಡು ಕನ್ನಡ ಸಿನಿಮಾಗಳಿಗೆ ಟಿಕೆಟ್ ದರ ಹೆಚ್ಚಳಕ್ಕೆ ಅನುಮತಿ ನೀಡಬಾರದು ಎಂದು ಹಲವರು ಪಟ್ಟು ಹಿಡಿದಿದ್ದಾರೆ.

Recent Articles

spot_img

Related Stories

Share via
Copy link