ಶಿರಾ: ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಸದಸ್ಯ ಚಿದಾನಂದ್ ಎಂ.ಗೌಡ ಭರವಸೆ
ಶಿರಾ ತಾಲ್ಲೂಕು ಸೇರಿದಂತೆ ಜಿಲ್ಲೆಯ ಪಾವಗಡ, ಮಧುಗಿರಿ, ಕೊರಟಗೆರೆ ಭಾಗಗಳಲ್ಲಿ ಅತಿ ಹೆಚ್ಚು ಶೇಂಗಾ ಬೆಳೆಯುವ ರೈತರಿದ್ದು ಶೇಂಗಾ ಬೆಳೆಯುವ ಇಂತಹ ರೈತರ ಸಂಕಷ್ಟದ ಬಗ್ಗೆ ಸ್ಪಷ್ಟವಾದ ಮಾಹಿತಿಯನ್ನು ಅಧಿಕಾರಿಗಳು ಸಂಗ್ರಹಿಸಿ ನೀಡಿದಲ್ಲಿ ಕೂಡಲೇ ಸರ್ಕಾರಕ್ಕೆ ಅಂತಹ ಸಮಗ್ರವಾದ ವರದಿಯನ್ನು ನೀಡಿ ಈ ಬಗ್ಗೆ ರೈತರ ಸಂಕಷ್ಟ ನಿವಾರಣಾ ಕ್ರಮ ಕೈಗೊಳ್ಳಲು ಸಾದ್ಯವಾಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಹೇಳಿದರು.
ನಗರದ ಮಿನಿ ವಿಧಾನಸೌಧದ ತಹಶೀಲ್ದಾರ್ ಕಛೇರಿಯಲ್ಲಿ ಶಾಸಕ ಡಾ.ಸಿ.ಎಂ.ರಾಜೇಶ್‍ಗೌಡ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ತಾಲ್ಲೂಕು ಮಟ್ಟದ ಇಲಾಖೆಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಶಿರಾ ಭಾಗದ ರೈತರ ಜೀವನಾಡಿ ಶೇಂಗಾ ಆಗಿದ್ದು ಮಳೆ-ಬೆಳೆಗಳ ವೈಪರೀತ್ಯಗಳಿಂದಾಗಿ ಕಳೆದ 20 ವರ್ಷಗಳಿಂದಲೂ ಶೇಂಗಾ ಬೆಳೆಯುವ ರೈತರು ಕೈತುಂಬಾ ಬೆಂಬಲ ಬೆಲೆಯನ್ನು ಕಂಡಿಲ್ಲ. ಇಂತಹ ರೈತರ ಸಂಕಷ್ಟಕ್ಕೆ ಕಾರಣಗಳನ್ನು ಹುಡುಕಿ ರೈತರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂಧಿಸುವ ಕೆಲಸ ಆಗಬೇಕಿದೆ. ಅಧಿಕಾರಿಗಳು ರೈತರ ಇಂತಹ ಸಂಕಷ್ಟಕ್ಕೆ ಸ್ಪಷ್ಠ ಕಾರಣಗಳ ಮಾಹಿತಿ ಸಂಗ್ರಹಿಸಿ ನೀಡಿದಲ್ಲಿ ಸರ್ಕಾರದ ಗಮನ ಸೆಳೆಯಲು ಸಾದ್ಯವಾಗುತ್ತದೆ ಎಂದು ಚಿದಾನಂದ್‍ಗೌಡ ಹೇಳಿದರು.
ವಿ.ಪ. ಸದಸ್ಯ ಕೆ.ಎ.ತಿಪ್ಪೇಸ್ವಾಮಿ ಚಿದಾನಂದ್‍ಗೌಡ ಅವರ ಮಾತಿಗೆ ಪೂರಕವಾಗಿ ಮಾತನಾಡಿ ಬರದ ನಾಡಿನ ಈ ಜನರಿಗೆ ಶೇಂಗಾ ಅತಿ ಮುಖ್ಯ ಬೆಳೆ. ಶೇಂಗಾ ಬೆಳೆದು ಆರ್ಥಿಕವಾಗಿ ರೈತರು ಸಬಲಗೊಂಡ ನಿದರ್ಶನಗಳಿಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಿ ಸರ್ಕಾರವು ರೈತರಿಗೆ ಸ್ಪಂಧಿಸುವಂತಹ ಕೆಲಸ ಪ್ರಾಮಾಣಿಕವಾಗಿ ನಡೆಯಬೇಕು ಎಂದರು.
ಶಿರಾ ನಗರದ ಜಾಜಮ್ಮನಕಟ್ಟೆಯು ನಗರದ ಕೊಳವೆ ಬಾವಿಗಳ ಅಂತರ್ಜಲ ವೃದ್ಧಿಸುವ ಕಟ್ಟೆಯಾಗಿದ್ದು ಈ ಕಟ್ಟೆಯನ್ನು ಅಭಿವೃದ್ಧಿಪಡಿಸಲು ಅನುದಾನ ಮಂಜೂರಾಗಿದೆ. ಇನ್ನೂ ಕೂಡಾ ಕಾಮಗಾರಿ ಅಪೂರ್ಣಗೊಂಡಿದ್ದು ಇದರ ಒತ್ತುವರಿ ತೆರವು ಕೂಡಾ ಅಗತ್ಯವಾಗಿದೆ. ಈ ಕಟ್ಟೆಯನ್ನು ಒಂದು ಮನರಂಜನಾ ತಾಣವಾಗಿ ರೂಪಿಸುವ ಕೆಲಸ ಮಾಡಲಾಗುವುದು ಎಂದು ಚಿದಾನಂದ್ ಎಂ.ಗೌಡ ಹೇಳಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕ ಡಾ.ಸಿ.ಎಂ.ರಾಜೇಶ್‍ಗೌಡ ಮಾತನಾಡಿ ತಾಲ್ಲೂಕಿನ ಬಹುತೇಕ ಕೆರೆಗಳು ಈ ವರ್ಷ ತುಂಬಿದ್ದು ಕೆರೆಗಳಲ್ಲಿ ಮೀನು ಮರಿ ಸಾಕಾಣಿಕೆಗೆ ಸಂಬಂಧಿಸಿದಂತೆ ಗುತ್ತಿಗೆ ನೀಡುವ ಕೆಲಸವನ್ನು ಮೀನುಗಾರಿಕಾ ಇಲಾಖೆ ನಿಯಮಾನುಸಾರ ಮಾಡಿಲ್ಲವೆಂಬ ಆರೋಪವಿದ್ದು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ತಾಲ್ಲೂಕಿನ ಅನೇಕ ಕೆರೆಗಳ ಏರಿಗಳು ಭದ್ರವಾಗಿಲ್ಲ. ಸರ್ಕಾರದಿಂದ ಮಂಜೂರಾಗುವ ಅನುದಾನದಲ್ಲಿ ಸಣ್ಣ ನೀರಾವರಿ ಇಲಾಖೆಯು ಕೆರೆಗಳ ಏರಿಗಳನ್ನು ಭದ್ರಪಡಿಸುವ ಕೆಲಸ ಮಾಡಬೇಕು. ತಾಲ್ಲೂಕಿನ ಗ್ರಾಮೀಣ ಭಾಗದ ಅನೇಕ ಪ್ರಾ.ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ರಾತ್ರಿ ವೇಳೆ ಸ್ಥಳೀಯವಾಗಿ ಇರುವುದಿಲ್ಲವೆಂಬ ದೂರುಗಳಿದ್ದು ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಶಾಸಕ ರಾಜೇಶ್‍ಗೌಡ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಇಲ್ಲದ ಮೂಲಭೂತ ಸೌಲಭ್ಯಗಳ ಬಗ್ಗೆ ಕೂಡಲೇ ವೈದ್ಯರು ಮೇಲಾಧಿಕಾರಿಗಳಿಗೆ ಮಾಹಿತಿ ನೀಡಬೇಕು. ಕೋವಿಡ್ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಪ್ರಾ. ಆರೋಗ್ಯ ಕೇಂದ್ರಗಳಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಶಾಸಕರು ಸೂಚನೆ ನೀಡಿದರು.
ತಾಲ್ಲೂಕು ದಂಡಾಧಿಕಾರಿ ಶ್ರೀಮತಿ ಮಮತಾ, ತಾ.ಪಂ. ಆಡಳಿತಾಧಿಕಾರಿ ರಮೇಶ್ ಸೇರಿದಂತೆ ತಾಲ್ಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
ಶಿರಾ ನಗರದ ಜಾಜಮ್ಮನಕಟ್ಟೆಯು ನಗರದ ಕೊಳವೆ ಬಾವಿಗಳ ಅಂತರ್ಜಲ ವೃದ್ಧಿಸುವ ಕಟ್ಟೆಯಾಗಿದ್ದು ಈ ಕಟ್ಟೆಯನ್ನು ಅಭಿವೃದ್ಧಿಪಡಿಸಲು ಅನುದಾನ ಮಂಜೂರಾಗಿದೆ. ಇನ್ನೂ ಕೂಡಾ ಕಾಮಗಾರಿ ಅಪೂರ್ಣಗೊಂಡಿದ್ದು ಇದರ ಒತ್ತುವರಿ ತೆರವು ಕೂಡಾ ಅಗತ್ಯವಾಗಿದೆ. ಈ ಕಟ್ಟೆಯನ್ನು ಒಂದು ಮನರಂಜನಾ ತಾಣವಾಗಿ ರೂಪಿಸುವ ಕೆಲಸ ಮಾಡಲಾಗುವುದು.
-ಚಿದಾನಂದ್ ಎಂ.ಗೌಡ, ವಿ.ಪ. ಸದಸ್ಯ
ಶಿರಾ ತಾಲ್ಲೂಕಿನ ಅನೇಕ ಕೆರೆಗಳ ಏರಿಗಳು ಭದ್ರವಾಗಿಲ್ಲ. ಸರ್ಕಾರದಿಂದ ಮಂಜೂರಾಗುವ ಅನುದಾನದಲ್ಲಿ ಸಣ್ಣ ನೀರಾವರಿ ಇಲಾಖೆಯು ಕೆರೆಗಳ ಏರಿಗಳನ್ನು ಭದ್ರಪಡಿಸುವ ಕೆಲಸ ಮಾಡಬೇಕು. ತಾಲ್ಲೂಕಿನ ಗ್ರಾಮೀಣ ಭಾಗದ ಅನೇಕ ಪ್ರಾ.ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ರಾತ್ರಿ ವೇಳೆ ಸ್ಥಳೀಯವಾಗಿ ಇರುವುದಿಲ್ಲವೆಂಬ ದೂರುಗಳಿದ್ದು ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು.
-ಡಾ.ಸಿ.ಎಂ.ರಾಜೇಶ್‍ಗೌಡ, ಶಾಸಕರು
ಶಿರಾ ನಗರದ ಮಿನಿ ವಿಧಾನಸೌಧದ ತಹಶೀಲ್ದಾರ್ ಕಛೇರಿಯಲ್ಲಿ ಶಾಸಕ ಡಾ.ಸಿ.ಎಂ.ರಾಜೇಶ್‍ಗೌಡ ಅವರ ಅಧ್ಯಕ್ಷತೆಯಲ್ಲಿ ಗುರುವಾರ ತಾಲ್ಲೂಕು ಮಟ್ಟದ ಇಲಾಖೆಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ವಿ.ಪ. ಸದಸ್ಯ ಚಿದಾನಂದ್ ಎಂ.ಗೌಡ, ವಿ.ಪ. ಸದಸ್ಯ ಕೆ.ಎ.ತಿಪ್ಪೇಸ್ವಾಮಿ ಮುಂತಾದವರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ