ಹಾಸನ
ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಪೆನ್‌ಡ್ರೈನ್ ಬಿಡುಗಡೆ ವಿಚಾರ ರಾಜ್ಯ ರಾಜಕಾರಣದಲ್ಲಿ ಹೆಚ್ಚು ಸದ್ದು ಮಾಡಿದ್ದು, ಪೆನ್‌ಡ್ರೈವ್ ತೋರಿಸಿದಾಗ ಎಷ್ಟು ಜನ ಮಂತ್ರಿಗಳು ನನಗೆ ಫೋನ್ ಮಾಡಿದ್ರು. ಎಷ್ಟು ಜನ ನನ್ನ ಹತ್ತಿರ ಅಣ್ಣಾ ಅಣ್ಣಾ ಅಂತ ಬಂದರು ಗೊತ್ತಾ ಎಂದು ಪೆನ್‌ಡ್ರೈನ್ ಕುರಿತು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸತ್ಯವನ್ನ ಬಿಚ್ಚಿಟ್ಟಿದ್ದಾರೆ.
ಈ ಕುರಿತು ಹಾಸನದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಪೆನ್‌ಡ್ರೈವ್ ತೋರಿಸಿದಾಗ ಅಣ್ಣ ನಿನ್ನ ಋಣದಲ್ಲಿದ್ದೇವೆ ನಿಮ್ಮಿಂದ ಬೆಳೆದಿದ್ದೇವೆ ಅಣ್ಣಾ ಅಂತ ಯಾಕೆ ಹೇಳಿದ್ರು? ಪೆನ್‌ಡ್ರೈವ್‌ನಲ್ಲಿ ನಂದು ಇದಿಯಾ ಅಂತ ನಿದ್ದೆಗೆಟ್ರಲಾ, ಯಾಕೆ ನಿದ್ರೆಗೆಟ್ಟರು ನಿಮ್ಮ ಮಂತ್ರಿಗಳು, ಯಾಕೆ ನನ್ನ ಬಳಿ ಬಂದರು. ಹಾವು ಬಿಡದೆ ಇಷ್ಟೆಲ್ಲಾ ನಿದ್ದೆಗೆಟ್ಟಿದ್ದೀರಿ, ಹಾವೇ ಇದೆ ಅಂದಿದ್ದಕ್ಕೆ ಇಷ್ಟು ಬೆಚ್ಚಿ ಹೋಗಿದಿರಲ್ಲಾ, ಹಾವು ಬಿಟ್ಟರೆ ಏನಾಗ್ತಿರಾ ನೀವು? ಟೈಂ ಬರುತ್ತೆ ರಿಲೀಸ್ ಮಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.
ಕುಮಾರಸ್ವಾಮಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ, ಅವರಿಗೆ ಹೆದರಲ್ಲ ಎಂಬ ಡಿಸಿಎಂ ಡಿಕೆಶಿ ಹೇಳಿಕೆ ವಿಚಾರವಾಗಿ ಮಾತನಾಡಿ, ಇವರ ದುಡ್ಡಿಗೆ, ಇವರ ಪೊಗರಿಗೆ ನಾನು ಇದಕ್ಕೆ ಹೆದರುತ್ತೇನಾ? ಇವರ ರೌಡಿಸಂಗೆ ನಾನು ಹೆದರುತ್ತೇನಾ, ನಾನು ಅದಕ್ಕೇನು ಹೆದರುವವನಲ್ಲ, ಅದ್ಯಾವನೋ ಬಂದು ಕರೆಂಟ್ ಕನೆಕ್ಷನ್ ಕೊಟ್ಟಿದ್ದಾನೆ, ನಾನು ನಿಂತುಕೊಂಡು ಹಾಕ್ಸಿದ್ದೀನಾ.
ಎಲ್ಲ ಹೇಳಿದ್ರು ಯಾರು ಕನೆಕ್ಷನ್ ಕೊಟ್ಟವ್ನೆ ಅವನ ಮೇಲೆ ಆಯಕ್ಷನ್ ತೆಗೊಳಲಿ ಅಂತ. ನಾನು ಆ ಕೆಲಸ ಮಾಡಿದ್ನಾ, ಓಪನ್ ಆಗಿ ಧೈರ್ಯವಾಗಿ ಹೇಳಿದೆ. ನನ್ನ ಮನೇಲಿ ಆಗಿದೆ, ಯಾವನೋ ಮಾಡಿರುವ ತಪ್ಪಿರಬಹುದು, ನಾನೇ ವಿಷಾಧ ವ್ಯಕ್ತಪಡಿಸಿದ್ದೇನೆ ಎಂದು ಹೇಳಿದ್ದೆ ಎಂದರು.
ಪಾಪ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಹೇಳಿ ಮನೆಗೆ ಕಳ್ಸಿದ್ರು. ಕೇಸ್ ಹಾಕಬೇಕು ಅಂತ ಕಳ್ಸಿದ್ರು ಇದಕ್ಕೆ ನಾನು ಹೆದರುತ್ತೇನಾ? ಆಗಿರುವ ತಪ್ಪು ನಾನೇ ಒಪ್ಪಿಕೊಳ್ಳುತ್ತೇನೆ ಅಂತ ಹೇಳ್ದೆ. 71 ಯೂನಿಟ್‌ಗೆ ಎರಡು ಸಾವಿರ ಆಗಿದೆ, 68 ಸಾವಿರ ಕಟ್ಟಿ ಅಂತ ಬಿಲ್ ಕಳ್ಸಿದ್ರು, ಅದನ್ನು ಕಟ್ಟಿದ್ದೀನಿ. ನಾನು ಕೇಸ್ ಹಾಕುತ್ತಿದ್ದೇನೆ, ನನ್ನ ಪರಿಸ್ಥಿತಿನೆ ಈ ರೀತಿ ಆದರೆ, ಈ ರೀತಿಯ ಪ್ರಕರಣಕ್ಕೆ ಒಳಗಾದರೆ ಜನಸಾಮಾನ್ಯರ ಪರಿಸ್ಥಿತಿ ಏನು ಎಂದು ಪ್ರಶ್ನಿಸಿದರು.
ದತ್ತಮಾಲೆ ಹಾಕುವ ವಿಚಾರ ಹಾಗೂ ಸಚಿವ ಜಮೀರ್ ಅಹಮದ್ ಹೇಳಿಕೆ ವಿಚಾರವಾಗಿ ಮಾತನಾಡಿ, ದತ್ತಮಾಲೆ ಹಾಕಿದರೆ ತಪ್ಪೇನು ಎಂದಿದ್ದೇನೆ. ಚುನಾವಣೆಯಲ್ಲಿ ಮತ ಪಡೆಯಲು ರಾಜ್ಯದಲ್ಲಿ ಜಾತಿ ಜಾತಿ ನಡುವೆ ಬಿರುಕು ಉಂಟುಮಾಡುವುದು ಪ್ರಾರಂಭವಾಗಿದೆ, ನಮ್ಮ ಇಲ್ಲಿಯ ಒಬ್ಬ ಮಂತ್ರಿ ತೆಲಂಗಾಣದಲ್ಲಿ ಭಾಷಣ ಮಾಡಿದ್ದಾರೆ. ವಿಧಾನಸಭೆ ಸಭಾಧ್ಯಕ್ಷರಿಗೆ ಎದ್ದು ನಿಂತು ನಾವು ಗೌರವ ಕೊಡುವುದು, ಖಾದರ್‌ಗೆ ಅಲ್ಲ, ಒಂದು ಸಮಾಜಕ್ಕಲ್ಲ.
ಖಾದರ್ ಮುಸ್ಲಿಂ ಸಮುದಾಯದವರು ಎಂದು ಕೈಮುಗಿಯುವುದಲ್ಲ, ಅವರು ಸದನದ ಗೌರವಾನ್ವಿತ ಪೀಠದ ಸಭಾಧ್ಯಕ್ಷರು ಅದಕ್ಕೆ ಗೌರವ ಸಲ್ಲಿಸುತ್ತೇವೆ. ಇಂತಹ ವ್ಯಕ್ತಿಗಳನ್ನು ಸರ್ಕಾರದಲ್ಲಿ ಮಂತ್ರಿ ಮಾಡಿಕೊಂಡು ಇಂತಹವರಿಂದ ಸಮಾಜ ಕಟ್ಟಲು ಆಗುತ್ತೆ, ಸಮಾಜ ಒಂದು ಮಾಡ್ತೀರಾ ನೀವು ಇಷ್ಟರೊಳಗೆ ಕ್ಷಮೆ ಕೇಳಬೇಕಿತ್ತು, ಕ್ಷಮೆ ಕೇಳಲು ಮುಖ್ಯಮಂತ್ರಿ ಡೈರೆಕ್ಷನ್ ಕೊಡಲಿಲ್ಲ, ಉದ್ಧಟತನ ಪ್ರದರ್ಶಿಸಿದ್ದಾರೆ ಎಂದು ಜಮೀರ್ ವಿರುದ್ಧ ಕಿಡಿಕಾರಿದರು.
ವಿದ್ಯುತ್ ಕದ್ದ ಕುಮಾರಸ್ವಾಮಿ ನಮ್ಮ ಮಾತಾಡೋ ನೈತಿಕತೆ ಇಲ್ಲ ಎಂಬ ಸಿಎಂ ಹೇಳಿಕೆ ವಿಚಾರವಾಗಿ ಮಾತನಾಡಿ, ಯಾರಪ್ಪಾ ಕರೆಂಟ್ ಕದ್ದೋರು.? ನನ್ನಷ್ಟು ನೈತಿಕತೆ ನಿಮಗೆ ಇದ್ಯಾ? ನನ್ನಷ್ಟು ನೈತಿಕತೆ ನೀವು ಉಳಿಸಿಕೊಂಡಿದ್ದೀರಾ? ನಾನು ಯಾವ ಹಗಲು ದರೋಡೆ ಕೆಲಸ ಮಾಡಿಲ್ಲ, ಹಗಲು ದರೋಡೆ ಕೆಲಸ ಮಾಡ್ತಾ ಇರೋರು ನೀವು.
ಟ್ರಾನ್ಸಫರ್ ಆದಿಯಾಗಿ ಎಲ್ಲದರಲ್ಲೂ ಹಗಲು ದರೋಡೆ ಮಾಡುತ್ತಿರುವುದು ನೀವು. ಇಡೀ ರಾಜ್ಯವನ್ನ ಇಂತಹ ದುಸ್ಥಿತಿಗೆ ತಳ್ಳುತ್ತಿರುವುದು ನೀವುಗಳು. ನಿಮ್ಮಲ್ಲಿ ಏನಾದ್ರೂ ನೈತಿಕತೆ ಇದ್ಯಾ ಅನ್ನೋದನ್ನ ಹೇಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ