ಪಾವಗಡ:
2021 ನೆ ಸಾಲಿನನಲ್ಲಿ ಪಾವಗಡ ತಾಲ್ಲೂಕಿನ ಜನ ಜೀವನ ಅಧೋಗತಿಯಲ್ಲಿ ಸಾಗಿ, ನೊವು ನಲಿವಿನಲ್ಲಿ ವರ್ಷ ಕಳೆದು, ನೂತನ ವರ್ಷಕ್ಕೆ ನಾಳೆ ಪದಾರ್ಪಣೆಗೈಯುತ್ತಿದ್ದಾರೆ.
ಎಂದೆಂದೂ ಕಾಣದ ಮಹಾಮಾರಿ ಕೊರೋನಾ ವೈರಸ್ ಆರ್ಭಟಕ್ಕೆ ಜನ ಸಾಮಾನ್ಯರು ಭಯಭೀತಿಯಲ್ಲಿ ಜೀವಿಸುವಂತಾಗಿ, ಕೆಲವರು ತಮ್ಮ ಕುಟುಂಬಸ್ಥರನ್ನು ಕಳೆದುಕೊಂಡು ದಿಕ್ಕು ತೋಚದಂತಾದರು. ಇನ್ನೂ ಕೆಲವರು ತಮ್ಮ ಪ್ರಾಣ ಪಕ್ಷಿ ಯಾವ ಗಳಿಗೆಯಲ್ಲಿ ಹಾರಿ ಹೋಗುವುದೊ ಎಂಬ ಆತಂಕದಲ್ಲೆ ಕಾಲ ಕಳೆಯುವಂತಾಯಿತು.
ರಾಷ್ಟ್ರ ಮತ್ತು ರಾಜ್ಯದಲ್ಲಿ ಲಾಕ್ ಡೌನ್ ಆದ ನಂತರ ಕೂಲಿ ಕಾರ್ಮಿಕರು ಜೀವನ ನಡೆಸಲು ಸಾಧ್ಯವಾಗದೆ, ತಿನ್ನುವ ಅನ್ನ್ನಕ್ಕಾಗಿ ದಾನಿಗಳ ಮೊರೆ ಹೋಗುವ ಪರಿಸ್ಥಿತಿವುಂಟಾಗಿ, ಜನರ ಕೈ ಕಸುಬು, ವ್ಯವಹಾರ, ವ್ಯಾಪಾರ, ಕೆಲಸಗಳು ಕುಂಠಿತಗೊಂಡು ಉದ್ಯೋಗಕ್ಕೆ ಪರದಾಡುವಂತಾಯಿತು.
ಕೊರೋನಾ ವೈರಸ್ ಭೀತಿ ಒಂದು ಕಡೆಯಾದರೆ, ಪ್ರಕೃತಿ ವಿಕೋಪದಿಂದ ಅತಿವೃಷ್ಟಿ-ಅನಾವೃಷ್ಟಿಯಿಂದ ರೈತಾಪಿ ವರ್ಗ ಹಾಗೂ ಕೂಲಿ ಕಾರ್ಮಿಕರು ನರಳುವಂತಾಯಿತು. ತಾಲ್ಲೂಕಿನಲ್ಲಿ ಅನಾವೃಷ್ಟಿ ಮತ್ತು ಅತಿವೃಷ್ಟಿ ಎರಡರಿಂದಲೂ ಬೆಳೆ ನಾಶವಾಗಿ ರೈತರು ಸಾಲಗಾರರಾಗಿದ್ದಾರೆ.
ಬೆಳೆಯನ್ನು ಕೈಬಿಟ್ಟು ತಲೆ ಮೇಲೆ ಕೈಯಿಟ್ಟು ಕುಳಿತುಕೊಳ್ಳುವಂತಾಯಿತು. 3-4 ತಿಂಗಳಿಂದ ಲಾಕ್ ಡೌನ್ ಸಡಿಲಿಕೆಯಿಂದ ರೈತರು ಉಸಿರಾಡುವಷ್ಟರಲ್ಲಿ ಓಮಿಕ್ರಾನ್ ಎಂಬ ವೈರಸ್‍ನಿಂದ ಮತ್ತೆ ಯಾವ ಸಮಯದಲ್ಲಿ ಏನಾಗುಬಹುದೊ ಎಂಬ ಭೀತಿಯಲ್ಲಿ ಸಾರ್ವಜನಿಕರು ಚಿಂತೆಗೀಡಾಗಿದ್ದಾರೆ. ಇಂತಹ ವಾತಾವರಣದಲ್ಲಿ ಮುಂದೆ ಬೆಳೆ ಇಡಲು ಹಿಂದು ಮುಂದೆ ನೋಡುವ ಪರಿಸ್ಥಿತಿಯಲ್ಲಿ ರೈತರಿದ್ದಾರೆ.
ಜನತೆಯ ಸೇವೆಯಲ್ಲಿ ನಿರತರಾದ ಜಪಾನಂದಜಿ
ತಾಲ್ಲೂಕಿನಲ್ಲಿ ಕಷ್ಟ ಕಾಲಕ್ಕೆ ದೇವರಂತೆ ಪ್ರತ್ಯಕ್ಷವಾಗಿ ಕಾಣಿಸುವ ದೇವರೆಂದರೆ ಜಪಾನಂದ ಸ್ವಾಮೀಜಿ. ಇವರು ಬರದ ನಾಡಿನಲ್ಲಿ ಅತಿವೃಷ್ಟಿಯಿಂದಾಗಲಿ, ಅನಾವೃಷ್ಟಿಯಿಂದಾಗಲಿ ಜನತೆ ತೊಂದರೆಗೀಡಾದಾಗ ಜನಸಾಮಾನ್ಯರ ಕಷ್ಟಗಳಿಗೆ ಸ್ವಂದಿಸಿ ಸಹಾಯ ಹಸ್ತ ನೀಡುತ್ತಿರುವ ತಾಲ್ಲೂಕಿನ ದೇವರೆಂದರೆ ತಪ್ಪಾಗಲಾರದು.
ಕೊರೋನಾ ವೈರಸ್ ಪ್ರಾರಂಭದಿಂದಲೂ ಡಾಕ್ಟರ್‍ಗಳು ರೋಗಿಗಳಿಗೆ ಚಿಕ್ಸಿತೆ ನೀಡಿ ಪ್ರಾಣ ಕಾಪಾಡಿದರೆ, .ಸ್ವಾಮಿ ಜಪಾನಂದಾಜೀ ನಿರ್ಗತಿಕರಿಗೆ, ಬಡಬಗ್ಗ ರಿಗೆ, ರೈತರಿಗೆ, ರೋಗಿಗಳಿಗೆ ಅನ್ನದಾತರಾಗಿ ಕೆಲಸ ಮಾಡಿ ತೋರಿಸಿದ ದೈವದೂತನಾಗಿ ತಾಲ್ಲೂಕಿನಲ್ಲಿ ಕಾರ್ಯ ಕೈಗೊಂಡಿದ್ದಾರೆ.
ಕೊರೋನಾ ವೈರಸ್‍ಗೆ ಹೆದರಿ ಮನೆ ಬಿಟ್ಟು ಹೊರ ಬಾರದೆ ಇರುವವರನ್ನು ನಾವು ನೋಡಿದ್ದೇವೆ. ಆದರೆ ಸ್ವಾಮೀಜಿ ಕೊರೋನಾ ವೈರಸ್‍ಗೆ ಜಗ್ಗದೆ ಜನರಿಗೋಸ್ಕರ ತಮ್ಮ ಪ್ರಾಣ ಒತ್ತೆ ಇಡಲು ಸಿದ್ದ ಎಂಬಂತೆ ಪ್ರತಿ ದಿನ ಬಡ ಸಂತ್ರಸ್ತರನ್ನು ಹುಡುಕಿ ಆಹಾರದ ಪೊಟ್ಟಣಗಳನ್ನಲ್ಲದೆ ದಿನಸಿ ಕಿಟ್‍ಗಳನ್ನೂ ಸಂತ್ರಸ್ತರ ಮನೆಗಳಿಗೆ ತಲುಪಿಸಿ ಮಾನವೀಯತೆ ಮೆರೆದ ಶ್ಲಾಘನೀಯ ಕಾರ್ಯ ಕುರಿತು ಎಷ್ಟು ಹೇಳಿದರೂ ಕಡಿಮೆಯೆ.
ಪಾವಗಡ ತಾಲ್ಲೂಕಿನಲ್ಲಿ ಸುಮಾರು 15 ವರ್ಷಗಳಿಂದ ಮಳೆಯ ಅಭಾವದಿಂದ ದನಕರುಗಳಿಗೆ ಮೇವು ಇಲ್ಲದ ಹಿನ್ನೆಲೆಯಲ್ಲಿ ಸುಮಾರು 10 ವರ್ಷದಿಂದ ಸ್ವಾಮೀಜಿ ಜೂನ್ ಮತ್ತು ಜುಲೈ ತಿಂಗಳಲ್ಲಿ ಮೇವು ವಿತರಣೆ ಕಾರ್ಯಕ್ರಮ ಹಮ್ಮಿಕೊಂಡು, ರೈತಾಪಿ ವರ್ಗದ ಜನರಿಗೆ ಸಹಾಯ ನೀಡುತ್ತಿರುವುದನ್ನು ನಾವು ಕಂಡಿದ್ದೇವೆ.
ಬರದ ನಾಡಿಗೆ ವರವಾದ `ಕೃಷ್ಣೆ’..!
ಸತತ ಬರಗಾಲದಿಂದ ಕಂಗೆಟ್ಟಿರುವ ಬರದ ನಾಡು ಪಾವಗಡದ ನೀರಿನ ದಾಹವನ್ನು ಕೃಷ್ಣಾ ನದಿ ತಣಿಸಿದೆ. ಅಷ್ಟು ಮಾತ್ರವಲ್ಲದೆ ತಾಲ್ಲೂಕಿನತ್ತ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.
ಪಾವಗಡದಿಂದ 300 ಕಿ.ಮೀ ದೂರದಲ್ಲಿರುವ ಆಂಧ್ರಪ್ರದೇಶದ ಶ್ರೀಶೈಲಂನ ಕೃಷ್ಣಾ ಬ್ಯಾರೇಜ್‍ನಿಂದ ಗೊಲ್ಲಂಪಲ್ಲಿಯ ಡ್ಯಾಂ ತಲುಪುವ ಕೃಷ್ಣೆ, ಅಲ್ಲಿಂದ ನಾಗಮಡಿಕೆಯ ಉತ್ತರ ಪಿನಾಕಿನಿ ನದಿಯ ಡ್ಯಾಂ ತುಂಬಿಸುತ್ತೆ.
ಬಳಿಕ ಪೆರೂರು ಡ್ಯಾಂ ಸೇರುತ್ತದೆ. ಹೀಗೆ ಕೃಷ್ಣೆ ತಾಲ್ಲೂಕಿಗೆ ಹರಿದು, ಬರದಿಂದ ಕಂಗೆಟ್ಟಿರುವ ಜನರ ಬದುಕಿಗೆ ನಿಜಕ್ಕೂ ಆಶಾಕಿರಣವಾಗಿದೆ.
ವೆಂಕಟರವಣಪ್ಪ ಶಾಸಕರಾಗಿ ಆಯ್ಕೆಯಾದಾಗ ವಿರೋಧದ ನಡುವೆಯೂ 13 ಕೋಟಿ ರೂ. ವೆಚ್ಚ ದಲ್ಲಿ ನಾಗಲಮಡಿಕೆ ಜಲಾಶಯ ನಿರ್ಮಾಣಕ್ಕೆ ಮುಂದಾದಾಗ, ಡ್ಯಾಮ್ ನಿರ್ಮಿಸುವುದರಿಂದ ಯಾವುದೇ ಪ್ರಯೋಜವಿಲ್ಲವೆಂದು ತೀವ್ರ ವಿರೋಧ ವ್ಯಕ್ತವಾಗಿತ್ತು.
ಆದರೆ, ಇಂದು ಅದೇ ಡ್ಯಾಂನಿಂದ ಅಗಸರ ಕುಂಟೆ ಕೆರೆ ತುಂಬಿ, ಪಾವಗಡ ಪಟ್ಟಣದ 30 ಸಾವಿರಕ್ಕೂ ಹೆಚ್ಚು ಮಂದಿಗೆ ಕುಡಿಯುವ ನೀರು ಲಭಿಸುತ್ತಿದೆ. ಅಂತೆಯೆ ಸುತ್ತಮುತ್ತಲಿನ ಗ್ರಾಮಗಳಿಗೂ ವರದಾನವಾಗಿದೆ ಎಂಬುದು ಸಂತಸದ ಸಂಗತಿಯಾಗಿದೆ.
ಕುಡಿಯುವ ನೀರು ಮತ್ತು ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಮೂಲಕ ಜರೂರಾಗಿ ಕಾಮಗಾರಿ ನಡೆಯುತ್ತಿದ್ದು, 2 ವರ್ಷದೊಳಗೆ ಭದ್ರಾ ಮೇಲ್ದ್ದಂಡೆ ಯೋಜನೆ ಮತ್ತು ಎತ್ತಿನ ಹೊಳೆ ಯೋಜನೆಯಲ್ಲಿ ಪಾವಗಡಕ್ಕೆ ನೀರು ಬರುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬ ವಿಶ್ವಾಸ ಜನರಲ್ಲಿ ಇದೆ.
2020-21 ನೆ ಸಾಲಿನಿಂದ ಪಾವಗಡ ತಾಲ್ಲೂಕಿನಲ್ಲಿ ನಾಗರಿಕರು ಕೊರೋನಾ ವೈರಸ್‍ನಿಂದ ಎಂದೂ ಕಾಣದಂvಹÀ ಕಷ್ಟ ನಷ್ಟಗಳಿಂದ ಕಹಿ ಮತ್ತು ಸಿಹಿ ಎರಡನ್ನೂ ಅನುಭವಿಸಿ, ಹೊಸ ವರ್ಷಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ