ತಿಪಟೂರು:
ತಿಪಟೂರು-ಗುಬ್ಬಿ ಗಡಿಯಲ್ಲಿನ ದೊಣೆ ಗಂಗಾಕ್ಷೇತ್ರಕ್ಕೆ ಬೇಕಿದೆ ಕಾಯಕಲ್ಪ
ಜನರು ಮಾಡಿದ ಪಾಪಗಳನ್ನು ಪರಿಹರಿಸುವ ಗಂಗಾಮಾತೆ ಕಾಶಿಯಲ್ಲಿರುವಂತೆ ತಿಪಟೂರು-ಗುಬ್ಬಿ ಗಡಿಭಾಗದಲ್ಲಿರುವ ದೊಣೆ ಗಂಗಾಕ್ಷೇತ್ರವೂ ಭಕ್ತರ ಪಾಲಿನ ಗಂಗಾಮಾತೆಯಾಗಿದೆ. ಇದು ಗುರು ಸಿದ್ದರಾಮೇಶ್ವರರು ತಪಗೈದ ಪುಣ್ಯಕೇತ್ರವಾಗಿದೆ. ಇಂತಹ ಕ್ಷೇತ್ರಕ್ಕೆ ಸೂಕ್ತ ರಸ್ತೆ ಮತ್ತು ಮೂಲಭೂತ ಸೌಕರ್ಯಗಳಿಲ್ಲದೆ ಜನರಿಗೆ ಕಣ್ಮರೆಯಾಗುತ್ತಿದೆ.
ತುಮಕೂರು-ಹೊನ್ನಾವರ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಗುಬ್ಬಿ ಮತ್ತು ತಿಪಟೂರು ತಾಲ್ಲೂಕಿನ ಗಡಿಭಾಗವಾದ ಹರೇನಹಳ್ಳಿ ಗೇಟ್‍ನಿಂದ 2 ಕಿಮೀ ಒಳಗೆ ಹೋದರೆ ಹಚ್ಚಹಸುರನ್ನು ಹೊದ್ದು ಮಲಗಿರುವ ಗಿರಿಶಿಖರಗಳ ಮಧ್ಯೆ ನಿಸರ್ಗ ರಮಣೀಯವಾದ ದೊಣೆ ಗಂಗಾಕ್ಷೇತ್ರವು ಸಿಗುತ್ತದೆ. ಇಲ್ಲಿ ಗಂಗಾಮಾತೆಯು ಗಂಗಾನದಿಯ ನೀರಿನಷ್ಟೆ ಪವಿತ್ರವಾದುದು. ಇಲ್ಲಿನ ದೊಣೆಯಲ್ಲಿರುವ ನೀರಿಗೂ ಶಿವಗಂಗೆ ಬೆಟ್ಟದಲ್ಲಿರುವ ನೀರಿಗೂ ನೇರವಾದ ನಂಟಿದೆ ಎಂದು ಪುರಾತನ ಕಥೆಯಿಂದ ತಿಳಿದು ಬರುತ್ತದೆ.
ಬೇಡಿದ್ದನ್ನು ಕರುಣಿಸುವ ಗಂಗಾಮಾತೆ :
ಮಕ್ಕಳಿಲ್ಲದೆ ಪರಿತಪಿಸುವ ತಾಯಂದಿರು ಇಲ್ಲಿನ ದೊಣೆ ನೀರನ್ನು ಮೈಮೇಲೆ ಹಾಕಿಸಿಕೊಂಡರೆ, ವ್ರತವನ್ನು ಮಾಡಿದರೆ ಮಕ್ಕಳನ್ನು ಕರುಣಿಸುತ್ತಾಳೆ. ಧರ್ಮ ಕಾಯಿಲೆಗಳು ದೂರವಾಗುತ್ತವೆ. ಮನೆಗಳಲ್ಲಿ ಶುಭ ಕಾರ್ಯಗಳು ಜರುಗುತ್ತವೆ ಎಂಬ ಪ್ರತೀತಿ ಇದ್ದು, ಭಕ್ತಾದಿಗಳು ಗಂಗಾಮಾತೆಯನ್ನು ಅರಸಿ ಬರುತ್ತಾರೆ.
ಮುಖ್ಯವಾಗಿ ರೈತಾಪಿ ಜನರ ಗಗನ ಕುಸುಮವಾದ ಅಂತರ್ಜಲ ಕ್ಕಾಗಿ ಬೋರ್‍ವೆಲ್ ತೆಗೆಸುವ ಮುನ್ನ ಇಲ್ಲಿಗೆ ಬಂದು ಪೂಜೆ ಸಲ್ಲಿಸಿ, ಇಲ್ಲಿನ ಪವಿತ್ರ ತೀರ್ಥವನ್ನು ತೆಗೆದುಕೊಂಡು ಹೋದರೆ ಗಂಗಾಮಾತೆಯು ಉಗಮಿಸುತ್ತಾಳೆ ಎಂಬ ನಂಬಿಕೆಯೂ ಇದೆ.
ಗುರು ಸಿದ್ದರಾಮೇಶ್ವರರು ತಪಗೈದ ಪುಣ್ಯ ಕ್ಷೇತ್ರ :
12ನೆ ಶತಮಾನದ ಪುಣ್ಯ ಸಿದ್ದಿಪುರುಷ ಗುರು ಸಿದ್ದರಾಮೇಶ್ವರರು ಇಲ್ಲಿನ ಗವಿಯಲ್ಲಿ ತಮ್ಮ ಕಾಲುಗಳನ್ನು ಮೇಲ್ಮುಖವಾಗಿಸಿ, ಶಿರವನ್ನು ಕೆಳಮುಖವಾಗಿಸಿ ಶೀರ್ಷಾಸನದಿಂದ ತಪಗೈದ ಸಿದ್ದಿ ಕ್ಷೇತ್ರವಾಗಿದೆ. ಇಂದಿಗೂ ಸಹ ಇಲ್ಲಿನ ಗವಿಯಲ್ಲಿ ಮೇಲ್ಮುಖವಾಗಿ ಇರುವ ಪಾದುಕೆಗಳಿಗೆ ದಿನನಿತ್ಯ ಪೂಜಾ ಕೈಂಕರ್ಯಗಳು ನಡೆಯುತ್ತಿವೆ.
ನಿತ್ಯ ದಾಸೋಹ :
ದೊಣೆ ಗಂಗಾಕ್ಷೇತ್ರದಲ್ಲಿ ನಿತ್ಯವೂ ಟ್ರಸ್ಟ್ ವತಿಯಿಂದ ದಾಸೋಹ ನಡೆಯುತ್ತಲೆ ಇರುತ್ತದೆ. ಪೂಜೆಗೆ ಬಂದ ಭಕ್ತಾದಿಗಳು ಕಾಣಿಕೆಯ ರೂಪದಲ್ಲಿ ತಾವು ಬೆಳೆದ ತರಕಾರಿ ಹಾಗೂ ದಾಸೋಹಕ್ಕೆ ನೀಡಿದ ಹಣದಿಂದ ನಿರಂತರವಾಗಿ ದಾಸೋಹಕ್ಕೆ ಯಾವುದೇ ತೊಂದರೆಯಾಗಿಲ್ಲವೆಂದು ದೇವಸ್ಥಾನದ ಮೇಲ್ವಿಚಾರಕರು ತಿಳಿಸುತ್ತಾರೆ.
ಅಭಿವೃದ್ಧಿಗೊಳಿಸಿದರೆ ಉತ್ತಮ ಪ್ರವಾಸಿ ತಾಣ :
ದೊಣೆ ಗಂಗಾಕ್ಷೇತ್ರವನ್ನು ಕೇವಲ ದೈವಿಕ ಕ್ಷೇತ್ರವಾಗಿ ನೋಡದೇ ಒಂದು ಉತ್ತಮ ಪರಿಸರದ ತಾಣವನ್ನಾಗಿ ಮಾಡಬಹುದು. ಇಲ್ಲಿರುವ ದೊಡ್ಡ ಆಲದ ಮರವು ತನ್ನ ಬಿಳಿಲುಗಳನ್ನು ಬಿಟ್ಟು ಮಕ್ಕಳಿಗೆ ಆಟವಾಡಲು ಉಯ್ಯಾಲೆಯಾಗಿ ಮಾರ್ಪಟ್ಟಿದೆ. ಇಲ್ಲಿಂದ ಸ್ವಲ್ಪ ಮುಂದಕ್ಕೆ ಹೋದರೆ ಸಾಲಾಗಿ ಜೋಡಿಸಿರುವಂತೆ ಕಾಣುವ ಗುಡ್ಡಗಳು ಪ್ರಕೃತಿ ಪ್ರಿಯರನ್ನು ಕೈಬೀಸಿ ಕರೆಯುತ್ತವೆ.
ಇಷ್ಟೆಲ್ಲಾ ದೈವಿಕ ಕ್ಷೇತ್ರ, ಸಿದ್ದಿಪುರುಷರು ತಪಗೈದ ಕ್ಷೇತ್ರ, ಪರಿಸರ ತಾಣವಾಗಿದ್ದು, ತಿಪಟೂರು ಹಾಗೂ ಗುಬ್ಬಿಯ ಗಡಿ ಭಾಗವಾಗಿರುವುದರಿಂದ ಅಭಿವೃದ್ಧಿಯು ಮರೀಚಿಕೆಯಾಗಿ ಉಳಿದಿದೆ.
ಇಂತಹ ಸಂದರ್ಭದಲ್ಲಿ ಇಲ್ಲಿಗೆ ಸೂಕ್ತವಾದ ರಸ್ತೆಯನ್ನು ಅಭಿವೃದ್ಧಿ ಪಡಿಸಿದರೆ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲೇ ಇರುವುದರಿಂದ ಪ್ರಯಾಣಿಕರಿಗೆ ಆಯಾಸವನ್ನು ಪರಿಸಹರಿಸಿಕೊಳ್ಳುವ ಸ್ಥಳವಾಗುತ್ತದೆ. ಆದ್ದರಿಂದ ಸಂಬಂಧಪಟ್ಟವರು ಇರುವ 2 ಕಿ.ಮೀ ರಸ್ತೆಯನ್ನು ಶೀಘ್ರ ಅಭಿವೃದ್ಧಿ ಪಡಿಸಿದರೆ ಭಕ್ತಾದಿಗಳ ಜೊತೆಗೆ ಪ್ರವಾಸಿಗರಿಗೂ ಅನುಕೂಲವಾಗುತ್ತದೆ.
ತಿಪಟೂರು-ಗುಬ್ಬಿ ಗಡಿಭಾಗದಲ್ಲಿರುವ ದೊಣೆ ಗಂಗಾಕ್ಷೇತ್ರದಲ್ಲಿ ಗಂಗಾಮಾತೆ ಉದ್ಭವಿಸಿರುವ ದೊಣೆ
– ರಂಗನಾಥ್ ಪಾರ್ಥಸಾರಥಿ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ