ಮಧುಗಿರಿ:

ಕಾಂಗ್ರೆಸ್ ಪಕ್ಷ ದಲಿತರ, ಜನಸಾಮಾನ್ಯರ, ಸಾಮಾಜಿಕ ನ್ಯಾಯ ಹಾಗೂ ಜನಪರ ಕಾರ್ಯಕ್ರಮ ನೀಡಿದ ಪಕ್ಷವಾಗಿದ್ದು, ಡಿ.10 ರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಥಳೀಯ ಸಂಸ್ಥೆಗಳಿಂದ ತುಮಕೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ರಾಜೇಂದ್ರ ರಾಜಣ್ಣನವರಿಗೆ ಪ್ರಬುದ್ಧ ಮತದಾರರು ಮೊದಲ ಪ್ರಾಶಸ್ತ್ಯದ ಮತ ನೀಡುವಂತೆ ಜಿಪಂ ಮಾಜಿ ಸದಸ್ಯ ಎಚ್. ಕೆಂಚಮಾರಯ್ಯ ಮನವಿ ಮಾಡಿದರು.
ಪಟ್ಟಣದ ಎಂ.ಎನ್.ಕೆ. ಸಮುದಾಯ ಭವನದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕರೆಯಲಾಗಿದ್ದ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 2013ರಿಂದ 2018 ರೊಳಗೆ ರಾಜ್ಯದಲ್ಲಿ ಆಡಳಿತ ನಡೆಸಿದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಜಾರಿಗೆ ತಂದ ಬಹುತೇಕ ಯೋಜನೆಗಳು ಪ್ರಸ್ತುತ ಬಿಜೆಪಿ ಸರ್ಕಾರ ಅಡಳಿತದ ವ್ಯೆಫÀಲ್ಯದಿಂದಾಗಿ ಕುಂಠಿತಗೊಂಡಿವೆ.
ಅಂದು ಎಸ್.ಟಿ.ಪಿ. ಮತ್ತು ಟಿಎಸ್ಪಿ ಯೋಜನೆಯೊಂದರಲ್ಲೇ 28 ಸಾವಿರ ಕೋಟಿ ರೂ. ಗಳಷ್ಟು ಪ್ರತಿವರ್ಷ ಅನುದಾನ ಬಿಡುಗಡೆ ಮಾಡಿ ಒಟ್ಟು 88 ಸಾವಿರ ಕೋಟಿ ಖರ್ಚು ಮಾಡಲಾಗಿತ್ತು. ಆದರೆ ಬಿಜೆಪಿ ಸರ್ಕಾರ ಇಲ್ಲಿಯವರೆಗೂ ಕೇವಲ 28 ಸಾವಿರ ಕೋಟಿ ರೂ. ಖರ್ಚು ಮಾಡುವ ಮೂಲಕ ದಲಿತರ ಪರವಾಗಿಲ್ಲ ಎಂಬುದು ಸಾಬೀತಾದಂತಾಗಿದೆ ಎಂದು ಅರೋಪಿಸಿದರು.
ಶಿಕ್ಷಣ ಕ್ಷೇತ್ರದಲ್ಲೂ ಹಿನ್ನಡೆಯಾಗಿದ್ದು ಹೊರದೇಶದಲ್ಲಿ ಓದುವವರಿಗೆ ಮೂವತ್ತೈದು ಲಕ್ಷ ರೂ.ಗಳವರೆಗೂ ವಿದ್ಯಾರ್ಥಿ ವೇತನವನ್ನು ಕಾಂಗ್ರೆಸ್ ಸರ್ಕಾರ ನೀಡಿತ್ತು. ಆದರೆ ಈಗ ಈ ಯೋಜನೆ ಎಲ್ಲಿದೆ ಎಂಬುವಂತಾಗಿದೆ. ಪ್ರಧಾನಿ ಮೋದಿಯವರು ರಾಜ್ಯದಲ್ಲಿ ಪ್ರಚಾರದ ವೇಳೆ ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರ ಶೇಕಡಾ 10 ರಷ್ಟು ಕಮೀಷನ್ ಸರ್ಕಾರವೆಂದು ಹೇಳಿದ್ದರು.
ಈಗ ಗುತ್ತಿಗೆದಾರ ಸಂಘದವರೇ ಬಿಜೆಪಿ ಸರ್ಕಾರ ಶೇ. 40ರಷ್ಟು ಕಮಿಷನ್ ನೀಡದ ಹೊರತು ಕಾರ್ಯಾದೇಶ ನೀಡುವುದಿಲ್ಲ ಎಂದು ನೇರವಾಗಿ ಪ್ರಧಾನಿಗೇ ದೂರು ನೀಡಿದ್ದಾರೆ. ಇಂತಹ ಹಗರಣಗಳ ಸರ್ಕಾರವನ್ನು ಚುನಾಯಿತ ಪ್ರತಿನಿಧಿಗಳು ಕಿತ್ತು ಎಸೆದು, ಎಂಎಲ್ಸಿ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಿ, 2023ರ ಸಾರ್ವತ್ರಿಕ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿಯಲು ದಿಕ್ಸೂಚಿಯಾಗಬೇಕಾಗಿದೆ ಎಂದರು.
ಪ್ರಸ್ತುತ ಆಡಳಿತ ನಡೆಸುತ್ತಿರುವ ರಾಜ್ಯ ಹಾಗೂ ಕೇಂದ್ರ ಸರಕಾರ ಅಭಿವೃದ್ಧಿ ವಿಚಾರವಾಗಿ ಸಂಪೂರ್ಣವಾಗಿ ವಿಫಲವೆಂದು ತೋರಿಸಿದೆ. ಅಲ್ಲದೆ ಭಾಜಪ ಸರಕಾರ ಶಿಕ್ಷಣ ಕ್ಷೇತ್ರದಲ್ಲು ಅನ್ಯಾಯ ಮತ್ತು ವಂಚನೆ ಮಾಡುತ್ತಿದೆ. ಬಿಟ್ ಕಾಯಿನ್ ಹಗರಣ ಸರಕಾರದ ವೈಫಲ್ಯವನ್ನು ಎತ್ತಿ ತೋರಿಸಿದೆ. ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ಪೂರ್ಣ ಪ್ರಮಾಣದ ಸಹಕಾರ ನೀಡಲಾಗುವುದು. ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರಕಾರದ ಆಡಳಿತಲ್ಲಿ ಅನೇಕ ಜನಪರ ಅಭಿವೃದ್ಧಿ ಯೋಜನೆಗಳನ್ನು ಕೈಗೊಂಡಿದ್ದರು.
ಆದರೆ ಬಿಜೆಪಿ ಸರ್ಕಾರ ಬಂದ ಮೇಲೆ ಆ ಯೋಜನೆಗಳೆಲ್ಲವೂ ಸ್ಥಗಿತವಾಗಿ ಅಭಿವೃದ್ಧಿ ಕುಂಠಿತವಾಗಿದೆ. ಕಾಂಗ್ರೆಸ್ ಸರ್ಕಾರ ಜನಪರ ಹಾಗೂ ಸಾಮಾಜಿಕ ನ್ಯಾಯವನ್ನು ಒದಗಿಸುವ ಪಕ್ಷವಾಗಿದ್ದು, ನಮ್ಮ ಪಕ್ಷದ ಅಭ್ಯರ್ಥಿಗೆ ನಿಮ್ಮ ಅಮೂಲ್ಯವಾದ ಮತ ನೀಡಬೇಕು. ಈ ಮೂಲಕ ಮುಂದಿನ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗಬೇಕು ಎಂದ ಅವರು, ಕಾಂಗ್ರೆಸ್ ಪಕ್ಷ ಸದೃಢವಾಗಿದ್ದರೆ ಮಾತ್ರ ರಾಜ್ಯ ಹಾಗೂ ದೇಶ ಸುಭಿಕ್ಷವಾಗಿರುತ್ತದೆ ಹಾಗೂ ಬಡವರಿಗೆ, ದಲಿತರಿಗೆ ಸಹಾಯವಾಗುತ್ತದೆ ಎಂದರು.
ತುಮುಲ್ ಮಾಜಿ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್ ಮಾತನಾಡಿ, ಜಿಲ್ಲೆಯ ಎಲ್ಲಾ ಮುಖಂಡರು ಒಮ್ಮತದಿಂದ ರಾಜೇಂದ್ರ ರಾಜಣ್ಣ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗಿದೆ. ನಾವೆಲ್ಲರೂ ಒಗ್ಗಟ್ಟಾಗಿ ಅವರ ಗೆಲುವಿಗೆ ಶ್ರಮಿಸಬೇಕು. ಈ ಮೂಲಕ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು.
ಮತದಾರರು ಯಾವುದೇ ಆಮಿಷಕ್ಕೆ ಒಳಗಾಗದೆ ಯಾವ ಪಕ್ಷ ಹಾಗೂ ಯಾವ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಂಡರೆ ತಮ್ಮ ಕ್ಷೇತ್ರಗಳು ಅಭಿವೃದ್ಧಿ ಹೊಂದುತ್ತವೆ ಎಂಬುದನ್ನು ಅರಿತು ಮತ ಚಲಾಯಿಸಬೇಕು. ಕಾಂಗ್ರೆಸ್ ಪಕ್ಷದ ವತಿಯಿಂದ ನಡೆಯುತ್ತಿರುವ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಪ್ರತಿಯೊಬ್ಬರೂ ಸಹಕರಿಸಬೇಕೆಂದು ಮನವಿ ಮಾಡಿದರು.
ಜಿಪಂ ಮಾಜಿ ಅಧ್ಯಕ್ಷ ಜಿ.ಜೆ ರಾಜಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಎಂ.ಎಸ್ ಮಲ್ಲಿಕಾರ್ಜುನಯ್ಯ, ಎಸ್.ಆರ್. ರಾಜಗೋಪಾಲ್, ಎಪಿಎಂಸಿ ಮಾಜಿ ಅಧ್ಯಕ್ಷ ಡಾ.ಎಂ.ಜಿ.ಶ್ರೀನಿವಾಸಮೂರ್ತಿ, ಪುರಸಭಾಧ್ಯಕ್ಷ ತಿಮ್ಮರಾಜು, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಕೆಂಚಪ್ಪ, ಎಪಿಎಂಸಿ ಅಧ್ಯಕ್ಷ ಡಿ.ಶ್ರೀನಿವಾಸ್, ಕೆ.ಶ್ರೀನಿವಾಸ್ ರೆಡ್ಡಿ, ಪಿ. ಟಿ. ಗೋವಿಂದಪ್ಪ, ಪಿ.ಸಿ .ಕೃಷ್ಣಾರೆಡ್ಡಿ, ಗೋಪಾಲ್, ಪುರಸಭಾ ಮಾಜಿ ಅಧ್ಯಕ್ಷರುಗಳಾದ ಎಂ.ಕೆ.ನಂಜುಂಡಯ್ಯ, ಕೆ.ಪ್ರಕಾಶ್, ಎನ್. ಗಂಗಣ್ಣ, ಸಿದ್ಧಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ವೀರಣ್ಣ, ಬಿ.ಎನ್. ನರಸಿಂಹಮೂರ್ತಿ, ಪುರಸಭಾ ಸದಸ್ಯ ಲಾಲಾಪೇಟೆ ಮಂಜುನಾಥ್, ನಟರಾಜ್, ಮಂಜುನಾಥಾಚಾರ್, ಎಂ.ವಿ. ಮಂಜುನಾಥ್, ಆನಂದಕೃಷ್ಣ, ಆಲೀಮ್, ಸಾಧಿಕ್, ಉಮೇಶ್, ಗುಟ್ಟೆ ಚಿಕ್ಕರಂಗಪ್ಪ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸಿದ್ಧಾಪುರ ರಂಗಸ್ವಾಮಯ್ಯ, ಗ್ರಾಪಂ ಸದಸ್ಯ ರಾಜಗೋಪಾಲ್, ಡಿಂಗ್ರಿ ನಾಗರಾಜ್, ಲೋಕೇಶ್, ಮುಖಂಡರುಗಳಾದ ಎಂ.ಡಿ.
ಮಾಲಿಮರಿಯಪ್ಪ, ಸೀಮೆಎಣ್ಣೆ ರಾಜಣ್ಣ, ಶಾಜು, ಪ್ರೆಸ್ ಕರಿಯಣ್ಣ, ನರಸಿಂಹರಾಜು, ಬಾಲಾಜಿ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








