ಗುಬ್ಬಿ:
ದಶಕ ಕಳೆದರೂ ತಪ್ಪು ಸರಿಪಡಿಸಿಕೊಳ್ಳದ ವಿಶಿಷ್ಟ ಗುರುತು ಪ್ರಾಧಿಕಾರ
ಭಾರತ ಸರ್ಕಾರವು ತನ್ನ ದೇಶವಾಸಿಗಳಿಗೆ ಉಪಯೋಗವಾಗಲೆಂದು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರದಿಂದ ಆಧಾರ್ ಕಾರ್ಡ್ಗಳನ್ನು ದೇಶಾದ್ಯಂತ ವಿತರಿಸುವಲ್ಲಿ ಹೆಚ್ಚಿನ ಜಾಗ್ರತೆ ಮೂಡಿಸುವ ಸಲುವಾಗಿ ಲಕ್ಷಾಂತರ ರೂ. ಹಣವನ್ನು ಖರ್ಚು ಮಾಡಿ ಜಾಹೀರಾತು ಮೂಲಕ ಪ್ರತಿಯೊಬ್ಬ ಪ್ರಜೆಯೂ ಈ ಕಾರ್ಡ್ನ್ನು ಪಡೆಯುವಂತೆ ಸೂಚಿಸಿದ್ದು ಸರಿಯಷ್ಟೆ.
ಸರ್ಕಾರದ ನಿಯಮಾನುಸಾರ ಆಧಾರ್ ಗುರುತಿನ ಪುರಾವೆಯೇ ಹೊರತು ಪೌರತ್ವವಲ್ಲ. ಈ ಆಧಾರ್ ಕಾರ್ಡ್ನಿಂದ ಸುಲಭವಾಗಿ ಸರ್ಕಾರಿ ಹಾಗೂ ಸರ್ಕಾರೇತರ ಸೇವೆಗಳನ್ನು ಪಡೆಯಲು ಸಹಾಯವಾಗಲಿ ಎಂದು ಈ ಕಾರ್ಡ್ನ್ನು ನೀಡುತ್ತಿದೆ. ಗುಬ್ಬಿ ತಾಲ್ಲೂಕಿನ 6 ಹೋಬಳಿಗಳಲ್ಲೂ ಆಧಾರ್ ಸೇವಾ ಕೇಂದ್ರಗಳನ್ನು ತೆರೆದಿದ್ದು, ಗುಬ್ಬಿ ನಗರದ ತಾಲ್ಲೂಕು ಕಚೇರಿ, ಅಂಚೆ ಕಚೇರಿ, ಸ್ಟೇಟ್ ಬ್ಯಾಂಕ್ ಇಂಡಿಯಾ, ಬಿಎಸ್ಎನ್ಎಲ್ ದೂರವಾಣಿ ಕಚೇರಿಗಳಲ್ಲಿ ಆಧಾರ್ ಸೇವೆ ಲಭ್ಯವಿದೆ.
ಆದರೇ ಅಂಚೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ಕೇವಲ ಮಧ್ಯಾಹ್ನದ ನಂತರ ಆಧಾರ್ ಸೇವೆಯನ್ನು ನೀಡುತ್ತಿರುವುದು ಒಂದೆಡೆಯಾದರೆ ತಾಲ್ಲೂಕು ಕಚೇರಿ ಆವರಣದಲ್ಲಿ ಆಧಾರ್ ಕಾರ್ಡನ್ನು ತೆಗೆಯಲು ಸಿಬ್ಬಂದಿ ಇದ್ದರೂ ಸಹ ಕೇವಲ ಬೆರಳೆಣಿಕೆಯಷ್ಟು ಕಾರ್ಡ್ಗಳನ್ನು ತೆಗೆಯುತ್ತಿರುವುದು ಎಷ್ಟು ಸಮಂಜಸ ಎಂದು ಪ್ರಶ್ನಿಸಿದಾಗ ಸರ್ವರ್ ಸಮಸ್ಯೆಯಿಂದಾಗಿ ಈ ರೀತಿ ತಡವಾಗುತ್ತಿದೆ ಎಂಬ ಉಡಾಫೆಯ ಉತ್ತರವನ್ನು ನೀಡುತ್ತಿರುವುದು ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಸ್ಪಷ್ಟವಾಗಿ ನಮೂದಿಸದೆ ವ್ಯತ್ಯಾಸ :
ಆಧಾರ್ ಕಾರ್ಡ್ಗಳಿಗೆ ಬೇಕಾದ ಕೈಬೆರಳ ಗುರುತು, ಕಣ್ಣಿನ ಪಾಪೆಯ ಗುರುತು, ವಿಳಾಸದ ಪುರಾವೆ, ಮೊಬೈಲ್ ಸಂಖ್ಯೆ, ಜನ್ಮ ದಿನಾಂಕ ಇವುಗಳನ್ನು ಸ್ಪಷ್ಟವಾಗಿ ನಮೂದಿಸದೆ ವ್ಯತ್ಯಾಸವಾಗಿ ಮತ್ತೆ ಹೊಸ ಕಾರ್ಡ್ಗಳನ್ನು ತೆಗೆಸುವಂತಾಗಿದೆ.
ತಾಲ್ಲೂಕಿನ ಹೋಬಳಿಗಳಲ್ಲಿರುವ ಆಧಾರ್ ಕೇಂದ್ರಗಳಲ್ಲಿ ಸರಿಯಾಗಿ ನೋಂದಣಿ ಕೆಲಸ ನಿರ್ವಹಿಸದೆ ಇರುವುದರಿಂದ ಸುಮಾರು 50-60 ಕಿ.ಮೀಗಳಿಂದ ತಾಲ್ಲೂಕು ಕಚೇರಿಯಲ್ಲಿ ಆಧಾರ್ ತೆಗೆಸುವಂತಹ ಸ್ಥಿತಿ ತಂದೊಡ್ಡಿರುವುದು ಯಾವ ಕಾರಣಕ್ಕಾಗಿ? ಹೋಬಳಿ ಕೇಂದ್ರಗಳಲ್ಲಿನ ನೋಂದಣಿ ಕೇಂದ್ರಗಳನ್ನು ಮುಚ್ಚುವುದು ಉತ್ತಮವಲ್ಲವೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ತಪ್ಪು ಸರಿಪಡಿಸದ ಪ್ರಾಧಿಕಾರ :
ನವ ದೆಹಲಿಯಲ್ಲಿ ಕೇಂದ್ರ ಕಚೇರಿ ಹೊಂದಿರುವ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರವು 2009 ರ ಜ.28 ರಂದು ಪ್ರಾರಂಭವಾಗಿದೆ. ದಶಕ ಕಳೆದು ಸುಮಾರು 13 ವರ್ಷ ತುಂಬುತ್ತಿರುವ ಪ್ರಾಧಿಕಾರಕ್ಕೆ ಇಲ್ಲಿಯವರೆಗೆ ಆಧಾರ್ ಕಾರ್ಡ್ನ ಹಲವು ನ್ಯೂನ್ಯತೆಗಳು ಹಾಗೂ ಸಾರ್ವಜನಿಕರ ಮಾಹಿತಿ ಸೇರ್ಪಡೆ ಹಾಗೂ ಬೇರ್ಪಡಿಸುವ ವಿಧಾನದ ತಾಂತ್ರಿಕತೆಯನ್ನು ಸರಿಪಡಿಸದೇ ಇರುವುದು ಪ್ರಾಧಿಕಾರದ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ.
ತಾಲ್ಲೂಕು ಕಚೇರಿಗೆ ಬರುವುದು ತಪಿಲ್ಲ :
ಒಂದು ಕಡೆ ಕಚೇರಿಗಳಲ್ಲಿ ಸಿಬ್ಬಂದಿ ಕೊರತೆ ಹಾಗೂ ಕೊರೋನ ನೆಪ ಹೇಳಿ ಕಚೇರಿಗಳಲ್ಲಿ ಕೆಲಸ ನಿರ್ವಹಿಸದೆ ಕಾಲ ಕಳೆಯುವವರ ನಡುವೆ ಈ ಸಮಸ್ಯೆ ಸರಿ ಹೋಗುವುದೆ ಎಂಬ ಪ್ರಶ್ನೆ ಎದುರಾಗಿದ್ದು, ತಾಲ್ಲೂಕಿನ 6 ಹೋಬಳಿ ಕೇಂದ್ರಗಳ ನಾಡ ಕಚೇರಿಗಳಲ್ಲಿ ಆಧಾರ್ ಸೇವಾ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದ್ದರೂ, ಸಾರ್ವಜನಿಕರು ತಾಲ್ಲೂಕು ಕೇಂದ್ರಕ್ಕೆ ಬಂದು ದಿನನಿತ್ಯ ಪರಿತಪಿಸುವುದು ಸಾಮಾನ್ಯವಾಗಿದೆ.
ಆಧಾರ್ ತಿದ್ದುಪಡಿ ಕೆಲಸವು ಅಂಚೆ ಕಚೇರಿಯ ಕೆಲಸದ ನಂತರ ಅಂದರೆ ಮಧ್ಯಾಹ್ನ 2 ಗಂಟೆಯ ನಂತರ ಪ್ರಾರಂಭಿಸಲಾಗುವುದು. ಇದಕ್ಕೆ ಪ್ರತ್ಯೇಕ ಸಿಬ್ಬಂದಿ ಇಲ್ಲ. ನಮ್ಮಲ್ಲಿ ಈ ಕಾರ್ಯ ನಿರ್ವಹಿಸಲು ಸಿಬ್ಬಂದಿ ಕೊರತೆ ಇದ್ದು, ಆಧಾರ್ ತೆಗೆಯುವುದು ನಮಗೆ ಹೆಚ್ಚುವರಿ ಕಾರ್ಯವಾಗಿರುತ್ತದೆ. ಆದರೂ ಆಗಾಗ ಸರ್ವರ್ ವ್ಯತ್ಯಯದಿಂದ ನಾವು ಸಾರ್ವಜನಿಕರಿಗೆ ಹೆಚ್ಚು ಸೇವೆಯನ್ನು ನೀಡಲು ಸಾಧ್ಯವಾಗುತ್ತಿಲ್ಲ.
-ವೆಂಕಟೇಶ್, ಪೋಸ್ಟ್ ಮಾಸ್ಟರ್
ಮಧ್ಯವರ್ತಿಗಳ ಹಾವಳಿ :
ಪ್ರತಿನಿತ್ಯ ನೂರಾರು ಸಾರ್ವಜನಿಕರು ಆಧಾರ್ ಕಾರ್ಡ್ ಪಡೆಯಲು ತಾಲ್ಲೂಕಿನ ನಾನಾ ಭಾಗಗಳಿಂದ ತಾಲ್ಲೂಕು ಕಚೇರಿಗೆ ಬರುತ್ತಿದ್ದು, ಒಮ್ಮೆ ಮಾಡಿದ ತಪ್ಪನ್ನು ಪದೆ ಪದೆ ಮಾಡುವಂತಹ ಸ್ಥಿತಿ ಆಧಾರ್ ಕಾರ್ಡ್ ತೆಗೆಯುವ ಸಿಬ್ಬಂದಿಯಿಂದಾಗುತ್ತಿದ್ದು, 100 ರೂ. ಶುಲ್ಕ ಪಡೆದು ಸರಿಯಾದ ಮಾಹಿತಿಯನ್ನು ಪಡೆಯದೆ ದಾಖಲಾತಿಗಳನ್ನು ಸರಿಯಾಗಿ ನಮೂದಿಸದ ಕಾರಣ ಒಬ್ಬ ವ್ಯಕ್ತಿ ಕನಿಷ್ಟ ಪಕ್ಷ 300-500 ರೂ. ಗಳನ್ನು ಮಧ್ಯವರ್ತಿಗಳಿಗೆ ಕೊಟ್ಟು ಕೆಲಸ ಮಾಡಿಸಿಕೊಳ್ಳುವಂತಹ ಸ್ಥಿತಿಯನ್ನು ಸ್ಥಳೀಯ ಸಿಬ್ಬಂದಿ ತಂದೊಡ್ಡಿದ್ದಾರೆ.
– ರಾಜೇಶ್ಗುಬ್ಬಿ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ