ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನದಲ್ಲಿ ರಂಜಿಸಲಿರುವ ಸಂಗೊಳ್ಳಿ ರಾಯಣ್ಣ- ಕಿತ್ತೂರು ಚೆನ್ನಮ್ಮ

ಬೆಂಗಳೂರು:

    ಸ್ವಾತಂತ್ರ್ಯೋತ್ಸವ ಮತ್ತು ಗಣರಾಜ್ಯೋತ್ಸವ  ಅಂಗವಾಗಿ ಪ್ರತಿ ವರ್ಷ ಒಂದೊಂದು ರೀತಿಯ ವಿಷಯವಸ್ತುವಿನ ಆಧಾರದಲ್ಲಿ ತೋಟಗಾರಿಕೆ ಇಲಾಖೆ ಬೆಂಗಳೂರಿನ  ಸಸ್ಯಕಾಶಿ ಲಾಲ್​​ಬಾಗ್​​ನಲ್ಲಿ ಫಲಪುಷ್ಪ ಪ್ರದರ್ಶನ  ಆಯೋಜಿಸುತ್ತದೆ. ಅದರಂತೆ, ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಗೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಈ ವರ್ಷವೂ ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನಕ್ಕೆ ತೋಟಗಾರಿಕೆ ಇಲಾಖೆ ಸಿದ್ದತೆ ನಡೆಸಿದ್ದು, ಇದೇ ಆಗಸ್ಟ್ 7ರಿಂದ ಆಗಸ್ಟ್ 18ರ ವರೆಗೆ ಹಮ್ಮಿಕೊಳ್ಳಲಾಗಿದೆ. ಈ ಬಾರಿಯ 218ನೇ ಫ್ಲವರ್​ ಶೋನಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮ  ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ  ವಿಷಯಾಧಾರಿತ ಪ್ರದರ್ಶನವಿರಲಿದೆ.

   ಆಗಸ್ಟ್‌ 15 ಮತ್ತು ಜನವರಿ 26ರಂದು ನಡೆಯುವ ಫಲಫುಷ್ಪ ಪ್ರದರ್ಶನಕ್ಕೆ ನೆರೆ ರಾಜ್ಯ ಮತ್ತು ವಿದೇಶಗಳಿಂದಲೂ ಜನರು ಬರುತ್ತಾರೆ. ಈ ವರ್ಷ ಲಾಲ್‌ಬಾಗ್‌ನಲ್ಲಿ ನಡೆಯುವ ಪುಷ್ಪ ಪ್ರದರ್ಶನದಲ್ಲಿ ಕರ್ನಾಟಕದ ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರರಾದ ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣನಿಗೆ ಗೌರವ ಸಲ್ಲಿಸಲಾಗುತ್ತದೆ.

    ಆಗಸ್ಟ್ 7 ರಿಂದ ಆಗಸ್ಟ್ 17 ರವರೆಗೆ ನಡೆಯಲಿರುವ ಈ 218 ನೇ ಪುಷ್ಪ ಪ್ರದರ್ಶನದಲ್ಲಿ, ಚೆನ್ನಮ್ಮ ಮತ್ತು ರಾಯಣ್ಣ ಬ್ರಿಟಿಷರ ವಿರುದ್ಧ ಹೋರಾಡಿದ ಕಥೆಯನ್ನು ಹೂವಿನ ಅಲಂಕಾರಗಳಿಂದ ಪ್ರದರ್ಶಿಸಲಾಗುತ್ತದೆ. ಈ ಬಾರಿ 11 ಲಕ್ಷ ಜನರು ಭೇಟಿ ನೀಡುವ ನಿರೀಕ್ಷೆಯಿದೆ ಎಂದು ಲಾಲ್‌ಬಾಗ್‌ನ ಜಂಟಿ ನಿರ್ದೇಶಕರಾದ ಎಂ. ಜಗದೀಶ್ ಮಾಹಿತಿ ನೀಡಿದ್ದಾರೆ.

   ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಅವರು 1820ರ ದಶಕದಲ್ಲಿ ಬ್ರಿಟಿಷ್ ಆಳ್ವಿಕೆಯ ವಿರುದ್ಧ ಹೋರಾಡಿದ್ದರು. ಚೆನ್ನಮ್ಮ ಕಿತ್ತೂರಿನ ರಾಣಿಯಾಗಿದ್ದರೆ, ರಾಯಣ್ಣ ಆಕೆಯ ಸೈನ್ಯದ ಮುಖ್ಯಸ್ಥರಾಗಿದ್ದರು. ಈ ಇಬ್ಬರು ಮಹಾನ್ ವ್ಯಕ್ತಿಗಳ ಹೋರಾಟದ ಕಥೆಯನ್ನು ಈ ಪುಷ್ಪ ಪ್ರದರ್ಶನದಲ್ಲಿ ಹೂವಿನ ಮೂಲಕ ತೋರಿಸಲಾಗುತ್ತದೆ. ಇದು ಪ್ರೇಕ್ಷಕರಿಗೆ ಒಂದು ವಿಶೇಷ ಅನುಭವ ನೀಡಲಿದೆ.

  ಫಲಪುಷ್ಪ ಪ್ರದರ್ಶನದ ಪ್ರಯುಕ್ತ ಸರ್ಕಾರಿ ಹಾಗೂ ಖಾಸಗಿ ತೋಟಗಾರಿಕಾ ಆಸಕ್ತರ ಮನೆ, ಕಚೇರಿ ಅಥವಾ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಅಲಂಕಾರಿಕ ತೋಟಗಳು, ತಾರಸಿ ಅಥವಾ ಕೈ ತೋಟಗಳು, ತರಕಾರಿ, ಔಷಧಿ ಗಿಡಗಳು, ಕುಂಡದಲ್ಲಿ ಬೆಳೆದ ವಿವಿಧ ಜಾತಿಯ ಗಿಡಗಳು ಹಾಗೂ ಚಾನೂರ್, ಥಾಯ್ ಆರ್ಟ್ ಮತ್ತು ಇತರೆ ಪೂರಕ ಕಲೆಗಳಿಗೆ ಸಂಬಂಧಿಸಿದಂತೆ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.

   ಇಕೆಬಾನ, ಜಾನೂರ್, ಥಾಯ್ ಆರ್ಟ್ ಮತ್ತು ಇತರ ಪೂರಕ ಕಲೆಗಳ ಸ್ಪರ್ಧೆಗೆ ದಿನಾಂಕ ಆಗಸ್ಟ್ 1ರಿಂದ ಆ.5ರವರೆಗೆ ಅರ್ಜಿ ಸಲ್ಲಿಸಬಹುದು. ಅಲಂಕಾರಿಕ ತೋಟಗಳು, ತಾರಸಿ ಅಥವಾ ಕೈ ತೋಟಗಳು, ತರಕಾರಿ, ಔಷಧಿ ಗಿಡಗಳು, ಕುಂಡದಲ್ಲಿ ಬೆಳೆದ ಗಿಡಗಳ ಸ್ಪರ್ಧೆಯಲ್ಲಿ ಭಾಗವಹಿಸುವವರು ಜುಲೈ 17ರಿಂದ, ಜು.28ರ ವರೆಗೆ ಅರ್ಜಿ ಸಲ್ಲಿಸಬಹುದು. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಲಾಲ್​ ಬಾಗ್​ ನಲ್ಲಿರುವ ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಬಹುದು.

Recent Articles

spot_img

Related Stories

Share via
Copy link