ಲಂಚ ಕೇಳಿದರೆ ದೂರು ದಾಖಲಿಸಿ: ನ್ಯಾ. ಕೆ.ಎನ್. ಫಣೀಂದ್ರ

ಚಿಕ್ಕಬಳ್ಳಾಪುರ: 

   ಯಾವುದೇ ಸರ್ಕಾರಿ ಅಧಿಕಾರಿ, ಸಿಬ್ಬಂದಿ, ಸರ್ಕಾರಿ ಕೆಲಸಗಳನ್ನು ಮಾಡಿ ಕೊಡಲು ಲಂಚ ಕೇಳಿದರೆ ಅಂತಹವರ ವಿರುದ್ಧ ಲೋಕಾಯುಕ್ತ ಪೊಲೀಸರಿಗೆ ದೂರು ನೀಡುವ ಮೂಲಕ ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಉಪ ಲೋಕಾಯುಕ್ತ ನ್ಯಾಯಾಧೀಶರಾದ ಕೆ.ಎನ್. ಫಣೀಂದ್ರ ಅವರು ಮನವಿ ಮಾಡಿದರು. ಮಂಗಳವಾರ ಜಿಲ್ಲಾಡಳಿತ ಭವನದ ಸರ್ ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ನಡೆದ ಲೋಕಾ ಯುಕ್ತದಲ್ಲಿನ ಬಾಕಿ ದೂರು ಪ್ರಕರಣಗಳ ವಿಲೇವಾರಿಗಾಗಿ ವಿಚಾರಣೆ ನಡೆಸಿ ಅವರು ಮಾತನಾಡಿ ದರು.

    ಭ್ರಷ್ಟಾಚಾರ ನಿರ್ಮೂಲನೆಯಲ್ಲಿ ಸಾರ್ವಜನಿಕರ ಪಾತ್ರವು ಮುಖ್ಯವಾಗಿದೆ. ಗಾಳಿಯಲ್ಲಿ ಗುಂಡು ಹೊಡೆದಂತೆ ಪ್ರತಿ ಸರ್ಕಾರಿ ಕಚೇರಿಗಳಲ್ಲೂ ಲಂಚ ನೀಡಿದರೆ ಮಾತ್ರ ಕೆಲಸ ಕಾರ್ಯಗಳು ಆಗುತ್ತವೆ ಹಾಗೂ ಕಡತಗಳು ವಿಲೆವಾರಿಯಾಗುತ್ತವೆ ಎಂದು ಸಾರ್ವತ್ರಿಕವಾಗಿ ಸುಖಾಸುಮ್ಮನೆ ಮಾತನಾಡುತ್ತಾರೆ. ಇದರಿಂದ ಯಾವುದೇ ಪ್ರಯೋಜನ ಆಗುವುದಿಲ್ಲ. ಲಂಚಕ್ಕೆ ಬೇಡಿಕೆ ಇಡುವ ಅಥವಾ ನಿಯಮಗಳನ್ನು ಉಲ್ಲಂಘಿಸಿ ಕಾರ್ಯನಿರ್ವಹಿಸುವ ಅಧಿಕಾರಗಳು ಮತ್ತು ಸಿಬ್ಬಂದಿ ಮೇಲೆ ದೂರು ಕೊಟ್ಟರೆ ಸೂಕ್ತ ಕಾನೂನು ಕ್ರಮಗಳನ್ನು ಲೋಕಾಯುಕ್ತವು ಜರುಗಿಸಲಾಗುತ್ತದೆ ಆ ನಿಟ್ಟಿನಲ್ಲಿ ಸಾರ್ವಜನಿಕರು ಜಾಗೃತರಾಗಬೇಕು ಎಂದರು. 

    ಚಿಕ್ಕಬಳ್ಳಾಪುರ ಜಿಲ್ಲೆಗೆ ಸಂಬಂಧಪಟ್ಟಂತೆ ಮಾನ್ಯ ಲೋಕಾಯುಕ್ತ ನ್ಯಾಯಾಲಯದಲ್ಲಿ ದಾಖ ಲಾಗಿ ತನಿಖೆ ಬಾಕಿ ಇರುವ ಕೆಲವು ದೂರು ಪ್ರಕರಣಗಳಲ್ಲಿ ನೆನ್ನೆ 65 ಪ್ರಕರಣಗಳನ್ನು ವಿಚಾರಣೆ ನಡೆಸಿ 48 ಪ್ರಕರಣಗಳನ್ನು ಸ್ಥಳದಲ್ಲೇ ಇತ್ಯರ್ಥ ಪಡಿಸಲಾಗಿದೆ ಹಾಗೂ ಸದರಿ ದೂರುದಾರರಿಗೆ ನ್ಯಾಯ ಒದಗಿಸಲಾಗಿದೆ. ಇಂದು ಸಹ 55 ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, 23 ಕ್ಕೂ ಹೆಚ್ಚು ಪ್ರಕರಣಗಳು ಇತ್ಯರ್ಥವಾಗಿವೆ. ಬಹುತೇಕ ದೂರುದಾರರು ನ್ಯಾಯ ದೊರಕಿದ ಭಾವನೆಯಲ್ಲಿ ಖುಷಿಯಿಂದ ಹಿಂತಿರುಗಿರುವುದನ್ನು ಗಮನಿಸಲಾಗಿದೆ. ವಿಚಾರಣೆ ವೇಳೆ ದೂರುದಾರರಿಗೆ ಕಾನೂನು ಸಲಹೆ ನೀಡಲಾಗಿದೆ.

   ಜೊತೆಗೆ ಸಾರ್ವಜನಿಕರಿಗೆ ಸರಿಯಾದ ಮಾಹಿತಿ ಹಾಗೂ ಕಾನೂನು ನೆರವು ನೀಡುವ ನಿಟ್ಟಿನಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ತಿಳಿಸಲಾಗಿದೆ. ನಾಗರಿಕರಿಗೆ ಸೂಕ್ತ ಕಾನೂನಿನ ಜ್ಞಾನ ದೊರೆತರೆ ನ್ಯಾಯಾಧೀಶರಿಗೂ ಕೆಲಸಗಳು ಕಡಿಮೆಯಾಗುತ್ತದೆ. ನಿರ್ದಿಷ್ಟವಾಗಿ ಯಾವ ಪ್ರಕರಣ ಗಳನ್ನು ಲೋಕಾಯುಕ್ತ ನ್ಯಾಯಾಲಯಕ್ಕೆ ನೀಡಬಹುದು ಎಂಬುದನ್ನು ಅರಿತರೆ ನ್ಯಾಯಾಲಯದ ಸಮಯವು ಉಳಿತಾಯವಾಗಿ ಹೆಚ್ಚಿನ ಪ್ರಕರಣಗಳನ್ನು ವಿಲೆವಾರಿ ಮಾಡಲು ಸಹಕಾರಿಯಾಗುತ್ತದೆ.

   ಮುಖ್ಯವಾಗಿ ಕಂದಾಯ ಮತ್ತು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಗಳಿಗೆ ಸಂಬಂಧ ಪಟ್ಟ ದೂರು ಅರ್ಜಿಗಳೇ ಹೆಚ್ಚಿನ ಸಂಖ್ಯೆಯಲಿದ್ದು, ಅವುಗಳ ತ್ವರಿತ ವಿಲೆಗೆ ನೆನ್ನೆ ಮತ್ತು ಇಂದು ವಿಚಾರಣೆ ನಡೆಸಲಾಗಿದೆ. ಹೆಚ್ಚು ಕಾತೆ ಬದಲಾವಣೆ, ಈ ಖಾತೆ ಬದಲಾವಣೆ, ಆಸ್ತಿ ದುರಸ್ತಿ ಪ್ರಕರಣ, ಪೊಡಿ ಪ್ರಕರಣಗಳು ಹೆಚ್ಚು ಕಂಡುಬರುತ್ತಿವೆ. ಚಿಕ್ಕಬಳ್ಳಾಪುರ ಜಿಲ್ಲೆಯಂತೆ ಇತರ ಜಿಲ್ಲೆಗಳಲ್ಲೂ ಭೇಟಿ ಮಾಡಿ ಅಲ್ಲಿಯೂ ಸಮಸ್ಯೆಗಳು ಇದೇ ರೀತಿ ಕಂಡು ಬಂದರೆ ಭ್ರಷ್ಟಾಚಾರ ನಿರ್ಮೂಲನೆಗೆ  ಸರ್ಕಾರಕ್ಕೆ ಸಲಹೆ ನೀಡಲಾಗುವುದು. ಒಟ್ಟಾರೆ ಭ್ರಷ್ಟಾಚಾರವನ್ನು ಸಂಪೂರ್ಣ ವಾಗಿ ನಿಯಂತ್ರಿಸಲು ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕು ಹಾಗೂ ಆಡಳಿತವರ್ಗವೂ ಕರ್ತವ್ಯ ನಿಷ್ಠೆ ಹಾಗೂ ಬದ್ದತೆಯನ್ನು ತೋರಬೇಕು ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಕಾಶ್ ಜಿ.ಟಿ ನಿಟ್ಟಾಲಿ, ಹಿರಿಯ ಸಿವಿಲ್ ನ್ಯಾಯಾಧೀಶರಾದ ಕಿರಣ್ ಎಂ ಪಾಟೀಲ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್  ನ್ಯಾಯಾಧೀಶರಾದ ಶಿಲ್ಪ, ಲೋಕಾಯುಕ್ತದ ಎಸ್.ಪಿ ಆಂಟೋನಿ ಜಾನ್, ಡಿ.ವೈ.ಎಸ್.ಪಿ ಜಗನ್ನಾಥ್, ಅಪಾರ ಜಿಲ್ಲಾಧಿಕಾರಿ ಡಾ. ಎನ್. ಭಾಸ್ಕರ್, ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

Recent Articles

spot_img

Related Stories

Share via
Copy link