ದಾವಣಗೆರೆ :
ಆಧುನಿಕತೆಯ ಭರಾಟೆಯಲ್ಲಿ ಪರಿಸರ ವಿನಾಶವಾಗುತ್ತಿದ್ದು, ಪರಿಸರ ಚಕ್ರ ತಲೆಕೆಳಗಾಗಿ ಮಾರಕ ರೋಗಗಳು, ಪ್ರಕೃತಿ ವಿಕೋಪಗಳು ಘಟಿಸುತ್ತಿವೆ. ಪ್ರಕೃತಿ ನಾಶದಿಂದ ವನ್ಯಜೀವಿಗಳ ಲೋಕ ಅವಸಾನದ ಅಂಚಿಗೆ ತಲುಪಿರುವುದರಲ್ಲಿ ಯಾವ ಸಂದೇಹವಿಲ್ಲ!
ಇಂದಿನ ಯುವಪೀಳಿಗೆಗೆ ವಿವಿಧ ವನ್ಯಜೀವಿಗಳ ಪರಿಚಯ ಮಾಡಿಕೊಡುವ ನಿಟ್ಟಿನಲ್ಲಿ ಪ್ರಾದೇಶಿಕ ಅರಣ್ಯ ವಿಭಾಗ, ದಾವಣಗೆರೆ ಬಡರ?ಸ್ ಫೆÇೀರಮ್, ಹಾಗೂ ರೋಟರಿ ಕ್ಲಬ್, ವಿದ್ಯಾನಗರ ಇವರುಗಳ ಸಂಯುಕ್ತಾಶ್ರಯದಲ್ಲಿ 67ನೇ ವನ್ಯಜೀವಿ ಸಪ್ತಾಹ ಆಚರಣೆಯ ಅಂಗವಾಗಿ ನಗರದ ಟಿವಿ ಸ್ಟೇಷನ್ ಲೋಕಿಕೆರೆ ರಸ್ತೆಯಲ್ಲಿರುವ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯಲ್ಲಿ ಏರ್ಪಡಿಸಿರುವ ವನ್ಯಜೀವಿಗಳ ಛಾಯಾಚಿತ್ರ ಪ್ರದರ್ಶನ ನೋಡುಗರ ಗಮನಸೆಳೆಯುತ್ತಿದೆ.
ಖ್ಯಾತ ವನ್ಯಜೀವಿ ಛಾಯಾಚಿತ್ರಗ್ರಾಹಕರಾದ ಬಸವರಾಜ.ಜಿ.ಒ, ದಿನೇಶ್, ಡಾ.ಬಾಬಾಬುಡನ್.ಜೆ.ಆರ್, ಡಾ.ಎಸ್.ಶಿಶುಪಾಲ, ಪ್ರಭಾಕರ್, ಹೇಮಾಚಂದ್ರ ಜೈನ್ ಅವರು ತೆಗೆದಿರುವ ಬ್ಲಾ?ಯಕ್ ಬಕ್, ಇಂಡಿಯನ್ ಬಶ್ ಲರ್ಕ್, ರೋಸಿ ಸ್ಟ್ರಾಲಿಂಗ್, ಸ್ಪಾಟೆಡ್ ಓವ್ಲೆಟ್, ಫುಲ್‍ವೆಟ, ಬಿಸನ್, ಪ್ಲೈನ್ ಟೈಗರ್, ಚಲಕೆ ಬಾತು, ಬಿಳಿ ಹುಬ್ಬಿನ ಬಾತು, ಸಣ್ಣ ಕರಿ ಪಟ್ಟಿಯ ಗೊರವ, ಬಿಳಿಮಚ್ಚೆ ನತ್ತಿಂಗ ಸೇರಿದಂತೆ ವಿವಿಧ ಪ್ರಾಣಿ-ಪಕ್ಷಿಗಳ ಛಾಯಾಚಿತ್ರಗಳು ವೀಕ್ಷಕರನ್ನು ಪ್ರಾಣಿಪಕ್ಷಿಗಳ ಲೋಕಕ್ಕೆ ಕರೆದೊಯ್ಯುತ್ತದೆ.
ಈ ವೇಳೆ ಪ್ರದರ್ಶನ ವೀಕ್ಷಣೆ ಬಂದ ಕೆಲವರು, ಆಶ್ಚರ್ಯ ಚಕಿತರಾಗಿ, ಇಲ್ಲಿರುವ ಅದೆಷ್ಟೋ ಪ್ರಾಣಿ ಪಕ್ಷಿಗಳ ಹೆಸರುಗಳನ್ನು ನಾವು ಕೇಳಿಯೇ ಇಲ್ಲ. ಮುಂಜಾನೆಯಾದರೆ ಮನೆ ಮುಂದೆ ಬಂದು ಚಿಲಿಪಿಲಿಗುಟ್ಟುತ್ತಿದ್ದ ಹಕ್ಕಿಗಳು, ಆಧುನಿಕತೆಯ ಪ್ರವಾಹಕ್ಕೆ ಸಿಲುಕಿ ಅವಸಾನದ ಹಾದಿ ಹಿಡಿದಿರುವ ಇಂತಹ ಸಂದರ್ಭದಲ್ಲಿ, ವಿವಿಧ ಬಗೆಯ ಪ್ರಾಣಿ ಪಕ್ಷಿಗಳ ಹೆಸರುಗಳು ಹಾಗೂ ಸುಂದರ ಛಾಯಾಚಿತ್ರಗಳು ಮನಸ್ಸಿಗೆ ಮುದನೀಡುತ್ತಿವೆ ಎಂದು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.
ವನ್ಯಜೀವಿಗಳ ಕುರಿತ ಛಾಯಾಚಿತ್ರಗಳ ಪ್ರದರ್ಶನವು ಅ.07 ರವರೆಗೆ ಪ್ರತಿದಿನ ಬೆಳಿಗ್ಗೆ 10 ರಿಂದ ಮಧ್ಯಾಹ್ನ 01 ಗಂಟೆಯವರೆಗೆ ಹಾಗೂ ಮಧ್ಯಾಹ್ನ 4.30 ರಿಂದ ಸಂಜೆ 7 ಗಂಟೆಯವರೆಗೆ ಲಭ್ಯವಿರಲಿದೆ. ಇನ್ನೇಕೆ ತಡ, ನೀವೂ ಒಮ್ಮೆ, ವನ್ಯಜೀವಿಗಳ ಛಾಯಾಚಿತ್ರ ಪ್ರದರ್ಶನ ವೀಕ್ಷಿಸಿ, ಸಂತಸಪಡಿ.