ಬೆಂಗಳೂರು : ಸೋಮವಾರ ಮಧ್ಯಾಹ್ನದಿಂದ ವಿಮಾನ ನಿಲ್ದಾಣದಲ್ಲಿ ಪಿಕ್‌ ಅಪ್‌ ಶುಲ್ಕ….!

ದೇವನಹಳ್ಳಿ:

    ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಯಾಣಿಕರನ್ನು ಆಗಮನ ದ್ವಾರದ (ಅರೈವಲ್‌ ಗೇಟ್‌) ಬಳಿ ಹತ್ತಿಸಿಕೊಳ್ಳುವ ಟ್ಯಾಕ್ಸಿಗಳು ಸೋಮವಾರ ಮಧ್ಯಾಹ್ನದಿಂದ ₹150 ಶುಲ್ಕ
ಪಾವತಿಸಬೇಕಿದೆ.

    ಇದಕ್ಕಾಗಿಯೇ ಬೆಂಗಳೂರು ಏರ್‌ಪೋರ್ಟ್‌ ಪ್ರಾಧಿಕಾರವು ಪಿಕ್‌ಅ‌ಪ್‌ ಪಾಯಿಂಟ್‌ನ ನಾಲ್ಕು ಪಥಗಳಲ್ಲಿಯೂ ಶುಲ್ಕ ಸಂಗ್ರಹ ಕೇಂದ್ರಗಳನ್ನು ಆರಂಭಿಸಿದೆ.ಟ್ಯಾಕ್ಸಿ ಹಾಗೂ ಇತರ ಪಿಕ್‌ಅಪ್‌ ವಾಹನಗಳ ಫಾಸ್ಟ್ಯಾಗ್‌ನಿಂದಲೇ ಪಿಕ್‌ಅ‌ಪ್‌ ಶುಲ್ಕವನ್ನು ನೇರವಾಗಿ ಕಡಿತ ಮಾಡಲಾಗುತ್ತದೆ.

    ₹150 ಶುಲ್ಕ ಪಾವತಿಸುವ ಟ್ಯಾಕ್ಸಿಗಳು ಏಳು ನಿಮಿಷ ಮಾತ್ರ ಪಿಕ್‌ ಅಪ್‌ ಪಾಯಿಂಟ್‌ನಲ್ಲಿ ಕಾಯಬಹುದು. ಒಂದು ವೇಳೆ ತಡವಾದರೆ ಪ್ರತಿ ಏಳು ನಿಮಿಷಕ್ಕೆ ಹೆಚ್ಚುವರಿಯಾಗಿ ₹150 ಹಣ ಪಾವತಿಸಬೇಕು.

   ಈ ನಿಯಮ ಹಳದಿ ಸಂಖ್ಯಾ ಫಲಕ (ಯೆಲ್ಲೊ ಬೋರ್ಡ್‌) ಇರುವ ಟ್ಯಾಕ್ಸಿಗಳಿಗೆ ಮಾತ್ರ ಅನ್ವಯಿಸಲಿದೆ. ಬಿಳಿ ಸಂಖ್ಯಾ ಫಲಕ (ವೈಟ್‌ ಬೋರ್ಡ್‌) ಇರುವ ಸ್ವಂತ ಕಾರುಗಳಿಗೆ ಮೊದಲ ಏಳು ನಿಮಿಷ ಉಚಿತವಾಗಿದ್ದು, ಯಾವುದೇ ಶುಲ್ಕ ಪಾವತಿಸದೇ ಪ್ರಯಾಣಿಕರನ್ನು ಪಿಕ್‌
ಮಾಡಬಹುದಾಗಿದೆ.

    ಹೊಸ ನಿಯಮದಿಂದಾಗಿ ಸೋಮವಾರ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗಲು ಪಿಕ್ ಅಪ್‌ ಪಾಯಿಂಟ್‌ಗೆ ಬಂದ ಟ್ಯಾಕ್ಸಿ ಚಾಲಕರು ‘ಯಾವುದೇ ಕಾರಣಕ್ಕೂ ₹150 ಶುಲ್ಕ ಪಾವತಿ ಮಾಡುವುದಿಲ್ಲ, ನಮ್ಮನ್ನು ವಾಪಸ್‌ ಹೋಗಲು ಅನುವು ಮಾಡಿಕೊಡಿ’ ಎಂದು ಅಲ್ಲಿದ್ದ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕಿಳಿದರು.

    ‘ಮುಂಬೈ, ದೆಹಲಿ, ಚೆನ್ನೈ ಸೇರಿದಂತೆ ಎಲ್ಲಾ ಪ್ರಮುಖ ವಿಮಾನ ನಿಲ್ದಾಣಗಳಲ್ಲಿಯೂ ಪಿಕ್‌ ಅಪ್‌ ಶುಲ್ಕ ವಿಧಿಸುತ್ತಿದ್ದಾರೆ. ಇಂದಿನಿಂದ ಬೆಂಗಳೂರಿನಲ್ಲಿಯೂ ಪ್ರಾರಂಭಿಸಿದ್ದೇವೆ’ ಎಂದು ವಿಮಾನ ನಿಲ್ದಾಣದ ಸಿಬ್ಬಂದಿ ಮನವೊಲಿಸಲು ಯತ್ನಿಸಿದರು.

    ಇದರಿಂದ ಮತ್ತಷ್ಟು ಕೆರಳಿದ ಟ್ಯಾಕ್ಸಿ ಚಾಲಕರ ಗುಂಪು, ‘ಯಾವುದೇ ಕಾರಣಕ್ಕೂ ಪಿಕ್‌ ಅಪ್‌ ಶುಲ್ಕ ಕಟ್ಟುವುದಿಲ್ಲ. ಚಾಲಕರಿಗಾಗಿ ಯಾವುದೇ ರೀತಿಯ ಮೂಲಸೌಲಭ್ಯಗಳನ್ನು ವಿಮಾನ ನಿಲ್ದಾಣ ಮಾಡಿಲ್ಲ. ಯಾವ ಉದ್ದೇಶಕ್ಕೆ ಹಣ ಕಟ್ಟಬೇಕು ತಿಳಿಸಿ’ ಎಂದು ಪಟ್ಟುಹಿಡಿದರು.

    ಪಿಕ್‌ಅ‌ಪ್‌ ಶುಲ್ಕ ರದ್ದು ಮಾಡುವಂತೆ ಒತ್ತಾಯಿಸಿ ವಿವಿಧ ಟ್ಯಾಕ್ಸಿ ಚಾಲಕರ ಸಂಘಟನೆಗಳ ಸದಸ್ಯರು ಮೇ 22ರಂದು ವಿಮಾನ ನಿಲ್ದಾಣ ಬಳಿಯ ಗಾಳಮ್ಮ ಸರ್ಕಲ್‌ನಿಂದ ವಿಮಾನ ನಿಲ್ದಾಣದವರೆಗೂ ಪ್ರತಿಭಟನಾ ಕಾಲ್ನಡಿಗೆ ಜಾಥಾ ನಡೆಸಲು
ತೀರ್ಮಾನಿಸಿದ್ದಾರೆ.

    ‘ಮೊದಲ ಏಳು ನಿಮಿಷ ಉಚಿತ ಇರಲಿ’ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗಲು ಬರುವ ವೈಟ್‌ ಬೋರ್ಡ್‌ ಕಾರುಗಳಿಗೆ ಮೊದಲ ಏಳು ನಿಮಿಷ ಪಿಕ್‌ ಅಪ್‌ ಶುಲ್ಕ ಇರುವುದಿಲ್ಲ. ಅದೇ ರೀತಿ ಇತರ ಟ್ಯಾಕ್ಸಿಗಳಿಗೂ ಮೊದಲ ಏಳು ನಿಮಿಷ ಶುಲ್ಕರಹಿತವಾಗಿರಲಿ ಎಂದು ಚಾಲಕರು ‘ಪ್ರಜಾವಾಣಿ’ಗೆ ತಿಳಿಸಿದರು. ಬೆಂಗಳೂರಿನಿಂದ ಏರ್‌ಪೋರ್ಟ್‌ಗೆ ಬರಲು ಹೆದ್ದಾರಿಯಲ್ಲಿ ₹110 ಟೋಲ್‌ ಶುಲ್ಕ ನೀಡಬೇಕು. ಏರ್‌ ಪೋರ್ಟ್‌ನಲ್ಲಿ ₹ 150 ಪಿಕ್‌ ಅಪ್‌ ಶುಲ್ಕ ವಿಧಿಸಿದರೇ ಹೇಗೆ? ವರ್ಷಕೊಮ್ಮೆ ರೋಡ್‌ ಟ್ಯಾಕ್ಸ್ ಎಫ್‌.ಸಿ ಎಲ್ಲಾ ಕಟ್ಟಿ ದುಬಾರಿ ಡಿಸೇಲ್‌ ಬೆಲೆಯಲ್ಲಿ ಗ್ರಾಹಕರಿಗೆ ಸೇವೆ ನೀಡುವುದು ಅಸಾಧ್ಯ ಎಂದರು.

    ಎಲ್ಲಾ ಟ್ಯಾಕ್ಸಿಗಳಿಗೂ ಅನ್ವಯಿಸಲ್ಲ ಏರ್‌ಪೋರ್ಟ್‌ನಲ್ಲಿ ಪಾರ್ಕಿಂಗ್‌ ಶುಲ್ಕ ಪಾವತಿಸುವ ಓಲಾ ಊಬರ್‌ ಕೆಎಸ್‌ಟಿಡಿಸಿ ಮೇರು ಸೇರಿದಂತೆ ಇತರ ಕೆಲವು ಕಂಪನಿಗಳ ಟ್ಯಾಕ್ಸಿಗಳಿಗೆ ಈ ನಿಯಮ ಅನ್ವಯವಾಗುವುದಿಲ್ಲ. ಈ ಕಂಪನಿಗಳ ಟ್ಯಾಕ್ಸಿಗಳು ಶುಲ್ಕ ಪಾವತಿಸಬೇಕಾಗಿಲ್ಲ. ಈ ಟ್ಯಾಕ್ಸಿಗಳು ಅವರದ್ದೇ ಸ್ಟಾಂಡ್‌ಗಳಿಂದ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗುತ್ತಾರೆ. ಯಾರು ಆಗಮನ ದ್ವಾರ (ಅರೈವಲ್‌ ಗೇಟ್‌) ಬಳಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗಲು ಬರುತ್ತಾರೋ ಅವರು ₹150 ಶುಲ್ಕ ನೀಡಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap