ನವದೆಹಲಿ :
ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದ ಒಂಬತ್ತು ಉಗ್ರ ತಾಣಗಳ ಮೇಲೆ ಭಾರತ ದಾಳಿ ಮಾಡಿ 70ಕ್ಕೂ ಹೆಚ್ಚು ಉಗ್ರರನ್ನು ಕೊಂದು ಹಾಕಿದೆ. ಪಾಕಿಸ್ತಾನ ಕೂಡ ತಾನು ಭಾರತೀಯ ಜೆಟ್ಗಳನ್ನು ಹೊಡೆದುರುಳಿಸಿ, ಕೆಲ ಭಾರತೀಯ ಸೈನಿಕರನ್ನು ಸೆರೆಹಿಡಿದಿರುವುದಾಗಿ ಹೇಳಿಕೊಂಡಿದೆ.
ಇದೇ ವೇಳೆ, ಭಾರತದ ಮಾಜಿ ಸೇನಾ ಮುಖ್ಯಸ್ಥ ಮನೋಜ್ ಮುಕುಂದ್ ನರವಣೆ ಅವರು ಎಕ್ಸ್ನಲ್ಲಿ ಹಾಕಿದ ಒಂದು ಪೋಸ್ಟ್ ಸಾಕಷ್ಟು ಕುತೂಹಲ ಕೆರಳಿಸಿದೆ. ಭಾರತದಿಂದ ಇನ್ನೂ ದೊಡ್ಡ ದಾಳಿ ನಡೆಯುವ ಸಾಧ್ಯತೆಯನ್ನು ತೆರೆದಿಟ್ಟಿದೆ.
ಜನರಲ್ ಮನೋಜ್ ನರವಣೆ ಅವರು ‘ಅಭಿ ಪಿಕ್ಚರ್ ಬಾಕಿ ಹೈ’ ಎಂದು ಒನ್ಲೈನರ್ ಅನ್ನು ಪೋಸ್ಟ್ ಮಾಡಿದ್ದಾರೆ. ಇದು ಬಿಟ್ಟು ಬೇರೇನೂ ಬರೆದಿಲ್ಲ. ಭಾರತದ ಮಿಲಿಟರಿಯಿಂದ ಪಾಕಿಸ್ತಾನದ ಮೇಲೆ ಆಪರೇಷನ್ ಸಿಂದೂರ ಕಾರ್ಯಾಚರಣೆ ನಡೆದ ಬಳಿಕ ಈ ಪೋಸ್ಟ್ ಬಂದಿದೆ. ಭಾರತೀಯ ಸೇನೆ ಇನ್ನೂ ದೊಡ್ಡ ದಾಳಿ ಮಾಡುವ ಸಾಧ್ಯತೆ ಇದೆ ಎಂಬುದು ಅವರ ಈ ನಿಗೂಢ ಪೋಸ್ಟ್ನ ಅರ್ಥವಿರಬಹುದೆ?
ಆಪರೇಷನ್ ಸಿಂದೂರ ಕಾರ್ಯಾಚರಣೆ ಇನ್ನೂ ಮೊದಲ ಹೆಜ್ಜೆಯಷ್ಟೇ, ಮುಂದೆ ಇನ್ನಷ್ಟು ಬರಲಿವೆ ಅನಿಸಿಕೆಗಳು ಹಿರಿಯ ಪತ್ರಕರ್ತರು ಮೊದಲಾದವರಿಂದ ಬರುತ್ತಿವೆ. ಪಾಕಿಸ್ತಾನ ತಾನು ಯಾವುದೇ ಪ್ರತಿದಾಳಿಗೆ ಸಿದ್ಧ ಎಂದು ಹೇಳಿಕೊಳ್ಳುತ್ತಿದೆ. ಭಾರತ ತನ್ನ ಕಾರ್ಯಾಚರಣೆ ನಿಲ್ಲಿಸಿದರೆ ತಾನೂ ಕೂಡ ಜವಾಬ್ದಾರಿಯುತವಾಗಿ ಪ್ರತಿಕ್ರಿಯೆ ನಿಲ್ಲಿಸುವುದಾಗಿ ಪಾಕ್ ಹೇಳಿದೆ.
