ಪಿಟಾಪುರಂ:
ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಸೋಮವಾರ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ ಮತ್ತು ತಾವು ರಾಜ್ಯದ ಗೃಹ ಸಚಿವನಾಗಿದ್ದರೆ “ಪರಿಸ್ಥಿತಿ ಭಿನ್ನವಾಗಿರುತ್ತಿತ್ತು” ಎಂದು ಹೇಳಿದ್ದಾರೆ. ಈ ಮೂಲಕ ಗೃಹ ಸಚಿವೆ ವಂಗಲಪುಡಿ ಅನಿತಾ ಅವರನ್ನು ನೇರವಾಗಿಯೇ ಟೀಕಿಸಿದ್ದಾರೆ.
ಇಂದು ಪಿತಾಪುರಂ ಕ್ಷೇತ್ರದ ಗೊಲ್ಲಪ್ರೋಲುದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕಲ್ಯಾಣ್, ಸಾರ್ವಜನಿಕರ ನಿರೀಕ್ಷೆಗಳನ್ನು ಈಡೇರಿಸುವಂತೆ ಅನಿತಾ ಅವರಿಗೆ ಕೇಳಿಕೊಂಡರು.
ಇದೇ ವೇಳೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರ ಕಾನೂನು ಮತ್ತು ಸುವ್ಯವಸ್ಥೆಯ ಮಾದರಿಯನ್ನು ಉಲ್ಲೇಖಿಸಿದ ಪವನ್ ಕಲ್ಯಾಣ್, “ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರಂತೆಯೇ ಈ ಅಪರಾಧಿಗಳನ್ನು ಶಿಕ್ಷಿಸಬೇಕು. ಅಲ್ಲಿಯವರೆಗೆ ಅವರು ಮಾತು ಕೇಳುವುದಿಲ್ಲ. ನೀವು ನಮ್ಮನ್ನು ಆ ರೀತಿಯ ಪರಿಸ್ಥಿತಿಗೆ ತಳ್ಳುತ್ತಿದ್ದೀರಿ” ಎಂದು ಹೇಳಿದರು. ರಾಜ್ಯದಲ್ಲಿ ಟಿಡಿಪಿಯ ಚಂದ್ರಬಾಬು ನೇತೃತ್ವದ ಮೈತ್ರಿ ಸರ್ಕಾರದಲ್ಲಿ ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಅವರು ಪಂಚಾಯತ್ ರಾಜ್, ಅರಣ್ಯ ಮತ್ತು ಪರಿಸರ ಇಲಾಖೆ ಖಾತೆಗಳನ್ನು ಹೊಂದಿದ್ದಾರೆ. ಟಿಡಿಪಿಯ ಅನಿತಾ ಅವರು ಗೃಹ ಖಾತೆ ಹೊಂದಿದ್ದಾರೆ.
“ನಾನು ಗೃಹ ಸಚಿವೆ ಅನಿತಾ ಅವರಿಗೆ ಹೇಳುತ್ತಿದ್ದೇನೆ, ನೀವು ಗೃಹ ಮಂತ್ರಿ; ದಯವಿಟ್ಟು ಗೃಹ ಸಚಿವಾಲಯದ ಜವಾಬ್ದಾರಿಯನ್ನು ತೆಗೆದುಕೊಳ್ಳಿ. ನಾನು ಗೃಹ ಖಾತೆಯನ್ನು ವಹಿಸಿಕೊಂಡರೆ, ಪರಿಸ್ಥಿತಿ ಭಿನ್ನವಾಗಿರುತ್ತದೆ; ಅದನ್ನು ನೆನಪಿಡಿ,” ಎಂದು ಹೇಳು ಮೂಲಕ ಪವನ್ ಕಲ್ಯಾಣ್, ಅಗತ್ಯಬಿದ್ದರೆ ಗೃಹ ಖಾತೆಯನ್ನು ವಹಿಸಿಕೊಳ್ಳುವ ಅಧಿಕಾರ ತಮಗೆ ಇದೆ ಎಂಬ ಸೂಚನೆ ನೀಡಿದ್ದಾರೆ.
ಇತ್ತೀಚಿನ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳಿಗೆ, ಅದರಲ್ಲೂ ವಿಶೇಷವಾಗಿ ತಿರುಪತಿ ಜಿಲ್ಲೆಯಲ್ಲಿ ಸಂಬಂಧಿಕರಿಂದ ನಾಲ್ಕು ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಹತ್ಯೆಯ ಪ್ರಕರಣದ ಹಿನ್ನೆಲೆಯಲ್ಲಿ ಪವನ್ ಕಲ್ಯಾಣ್ ಅವರು ಈ ಹೇಳಿಕೆ ನೀಡಿದ್ದಾರೆ.